ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರದ ಲೋಕಕ್ಕೆ ಪ್ರವೀಣ್‌: ಆರದ ಕಿಚ್ಚು; ತಣಿಯದ ನೋವು...

Last Updated 29 ಜುಲೈ 2022, 0:25 IST
ಅಕ್ಷರ ಗಾತ್ರ

ಬೆಳ್ಳಾರೆ (ದಕ್ಷಿಣ ಕನ್ನಡ): ಹೃದ್ರೋಗದಿಂದ ನರಳುತ್ತಿರುವ ತಂದೆ, ರಕ್ತದೊತ್ತಡದಿಂದ ಬಳಲುತ್ತಿರುವ ತಾಯಿ, ಬದುಕಿನ ಬಗ್ಗೆ ಬಣ್ಣ ಬಣ್ಣದ ಕನಸುಗಳನ್ನು ಕಟ್ಟಿಕೊಂಡಿದ್ದ ಪತ್ನಿ... ಇವರನ್ನೆಲ್ಲ ಬಿಟ್ಟು ಪ್ರವೀಣ್ ನೆಟ್ಟಾರು ಅವರು ಬಾರದ ಲೋಕಕ್ಕೆ ಹೋಗಿದ್ದಾರೆ. ಅವರ ಚಿತೆಯ ಬೆಂಕಿ ಇನ್ನೂ ಆರಿಲ್ಲ. ಅಂತೆಯೇ ಅವರ ಸಾವಿನ ಬಗ್ಗೆ ಅವರ ಕುಟುಂಬದವರಲ್ಲಿ ಹಾಗೂ ಬಿಜೆಪಿ ಕಾರ್ಯಕರ್ತರಲ್ಲಿ ಆಕ್ರೋಶದ ಕಿಚ್ಚೂ ಕಡಿಮೆ ಆಗಿಲ್ಲ.

‘ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಪ್ರವೀಣ್‌ಗೆ ಬೆದರಿಕೆ ಇದ್ದರೂ ಅವರ ಹತ್ಯೆ ತಪ್ಪಿಸಲು ಸರ್ಕಾರ ಏನೂ ಕ್ರಮಕೈಗೊಳ್ಳಲಿಲ್ಲ’ ಎಂಬ ಅಸಮಾಧಾನ ಕುಟುಂಬದವರನ್ನು ಹಾಗೂ ಅವರ ಒಡನಾಡಿಗಳನ್ನು ತೀವ್ರವಾಗಿ ಕಾಡುತ್ತಿದೆ.

‘ಪಕ್ಷದಲ್ಲಿ ಸಾಮಾನ್ಯ ಬಡ ಕಾರ್ಯಕರ್ತರಿಗೆ ಬೆಲೆ ಇಷ್ಟೇ’ ಎಂದು ಅವರ ಬಂಧುಗಳು ನೋವಿನಿಂದ ಹೇಳುತ್ತಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್‌ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್‌ ಕುಮಾರ್ ಅವರ ಕಾರಿಗೆ ಮುತ್ತಿಗೆ ಹಾಕಿದ್ದನ್ನೇ ನೆಪವಾಗಿಟ್ಟುಕೊಂಡು ಕಾರ್ಯಕರ್ತರ ವಿರುದ್ಧವೇ ಪೊಲೀಸರಿಂದ ಲಾಠಿಚಾರ್ಜ್ ಮಾಡಿಸಿದ್ದಾರೆ ಎಂದು ಹರಿಹಾಯುತ್ತಿದ್ದಾರೆ.

ಕುಟುಂಬದವರಲ್ಲಿ ಮಡುಗಟ್ಟಿರುವ ಈ ಆಕ್ರೋಶವನ್ನು ತಣಿಸಲು ಬಿಜೆಪಿಯ ಸ್ಥಳೀಯ ನಾಯಕರು ಸಾಕಷ್ಟು ಪ್ರಯತ್ನ ಪಟ್ಟರೂ ಅವರು ಅದಕ್ಕೆ ಕಿವಿಗೊಡುವ ಸ್ಥಿತಿಯಲ್ಲಿರಲಿಲ್ಲ. ಸಾಂತ್ವನ ಹೇಳಲು ಮನೆಗೆ ಬಂದ ಮುಖ್ಯಮಂತ್ರಿ, ಸಂಸದ ನಳಿನ್‌ ಕುಮಾರ್‌ ಕಟೀಲ್, ಸಚಿವ ಸುನಿಲ್‌ ಕುಮಾರ್‌, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಚಿವ ಎಸ್. ಅಂಗಾರ, ಶಾಸಕರಾದ ಸಂಜೀವ ಮಠಂದೂರು, ಹರೀಶ್ ಪೂಂಜಾ, ರಾಜೇಶ್ ಶೆಟ್ಟಿ ಉಳಿಪಾಡಿ, ಅವರೆಲ್ಲರೂ ಕುಟುಂಬದವರ ಕಿಡಿ ನುಡಿಗಳಿಗೆ ನಿರುತ್ತರರಾದರು.

ಹೃದ್ರೋಗದಿಂದ ಬಳಲುತ್ತಿದ್ದ ಶೇಖರ ಪೂಜಾರಿ ಅವರಂತೂ ಮಗನನ್ನು ಕಳೆದುಕೊಂಡ ಶೋಕದಿಂದ ಪದೇ ಪದೇ ಆಘಾತಕ್ಕೊಳಗಾಗುತ್ತಿದ್ದರು. ಪಕ್ಷದ ನಾಯಕರು ಬಂದು ಸಾಂತ್ವನ ಹೇಳುತ್ತಿದ್ದಂತೆಯೇ ನೋವು ತಡೆಯಲಾಗದೇ ಕುಸಿದು ಬೀಳುತ್ತಿದ್ದರು.

‘ನನಗೆ ಆಸರೆಯಾಗಿದ್ದ ಒಬ್ಬನೇ ಮಗನಿಗೆ ಇಂತಹ ಪರಿಸ್ಥಿತಿಯನ್ನೇಕೆ ತಂದಿತ್ತಿರಿ. ನಾನು ಕೂಲಿ ನಾಲಿ ಮಾಡಿಕೊ‌ಂಡು ಕಷ್ಟ ಪಟ್ಟು ಬೆಳೆಸಿದ್ದೆ. ನಮ್ಮ ಬದುಕನ್ನೇ ಕತ್ತಲು ಮಾಡಿದಿರಲ್ಲಾ. ಬದುಕಿನ ಕೊನೆಗಾಲದಲ್ಲಿ ನಮಗೆ ಯಾರು ದಿಕ್ಕು’ ಎಂದು ಮನೆಗೆ ಬಂದ ನಾಯಕರನ್ನು ಪ್ರಶ್ನಿಸುತ್ತಿದ್ದರು.

ಮನೆಗೆ ಬಂದ ನಾಯಕರನ್ನು ಏರಿದ ಧ್ವನಿಯಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಪ್ರವೀಣ್ ಅವರ ಹತ್ತಿರದ ಬಂಧುಗಳ ಸಿಟ್ಟನ್ನು ತಣಿಸಲು ಮನೆಯ ಮಹಿಳೆಯರು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದರು.

‘ಪ್ರವೀಣ ಯಾವತ್ತೂ ತಾಳ್ಮೆ ಕಳೆದುಕೊಂಡವನಲ್ಲ. ಅವನಿಗೆ ನೋವಾಗುವಂತೆ ನಡೆದುಕೊಳ್ಳದಿರಿ’ ಎಂದು
ಸಮಾಧಾನಪಡಿಸುತ್ತಿದ್ದರು.

‘ನಮ್ಮವರು ಯಾವತ್ತೂ ಕುಟುಂಬದ ಬಗ್ಗೆ ತಲೆ ಕೆಡಿಸಿಕೊಂಡವರಲ್ಲ. ಮನೆಗಿಂತಲೂ ಸಮಾಜ ಸೇವೆಗೇ ಹೆಚ್ಚು ಮಹತ್ವ ನೀಡುತ್ತಿದ್ದರು. ಅವರ ಯಾವ ಕೆಲಸಕ್ಕೂ ನಾನು ಬೇಡ ಎನ್ನಲಿಲ್ಲ. ಆದರೆ ಈಗ ಅವರೇ ಇಲ್ಲ.‌ ಇಂತಹ ಪರಿಸ್ಥಿತಿ ಎದುರಾಗುತ್ತದೆ ಎಂದು ನಾನು ಯಾವತ್ತೂ ಊಹಿಸಿರಲಿಲ್ಲ’ ಎಂದು ಪ್ರವೀಣ್ ಅವರ ಪತ್ನಿ ನೂತನಾ ಕಣ್ಣೀರಿಟ್ಟರು.

‘ಪತಿ ಬೆಳ್ಳಾರೆಯಲ್ಲಿ ಆರಂಭಿಸಿದ್ದ ಕೋಳಿ ಅಂಗಡಿಯಲ್ಲೇ ನಾನು ಕುಳಿತುಕೊಳ್ಳುತ್ತಿದ್ದೆ. ನಾನು ಸಂಘ ಪರಿವಾರದ ಕೆಲಸ ಮಾಡ
ಬೇಕು ಎಂಬ ಕಾರಣಕ್ಕಾಗಿಯೇ ಅವರು ನನ್ನನ್ನು ಸಂಘ ಪರಿವಾರದ ಆಡಳಿತಕ್ಕೊಳಪಟ್ಟ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ‌ ಕೆಲಸಕ್ಕೆ ಸೇರಿಸಿದರು. ಸಂಘದ ಕಾರ್ಯವೇ ಅವರ ಪಾಲಿಗೆ ಮುಳುವಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ನಾನು ಕೋಳಿ ಅಂಗಡಿಯಲ್ಲೇ ಕೆಲಸ‌ ಮುಂದುವರಿಸುತ್ತಿದ್ದರೆ ಪತಿಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲವೇನೋ’ ಎಂದು ಕಂಬನಿ ಮಿಡಿದರು.

‘ಮುಸ್ಲಿಂ ಸಂಘಟನೆಗಳ ಕೃತ್ಯಗಳನ್ನು ಸೈದ್ಧಾಂತಿಕವಾಗಿ ವಿರೋಧ ಮಾಡುತ್ತಿದ್ದರೂ ಪ್ರವೀಣ್ ಯಾರ ಮೇಲೂ ದ್ವೇಷ ಇಟ್ಟುಕೊಂಡವರಲ್ಲ. ಅವರಿಗೆ ಮುಸ್ಲಿಮರಲ್ಲೂ ಸಾಕಷ್ಟು ಗೆಳೆಯರಿದ್ದರು. ಹತ್ಯೆಗೊಳಗಾದ ದಿನವೂ ತಮ್ಮ ಗೆಳೆಯ ಆರಿಫ್ ಅವರ ಗೃಹಪ್ರವೇಶಕ್ಕೆ ಹೋಗಿ ಬಂದಿದ್ದ’ ಎಂದು ಸ್ಮರಿಸುತ್ತಾರೆ ಪ್ರವೀಣ್ ಅವರ ಹತ್ತಿರದ ಬಂಧು ರಂಜಿತ್.

‘ಪ್ರಾಣಿ ಪಕ್ಷಿಗಳ ಮೇಲೂ ತಮ್ಮನಿಗೆ ವಿಪರೀತ ಅಕ್ಕರೆ. ಹಸಿದ ನಾಯಿ- ಬೆಕ್ಕುಗಳನ್ನು ಕಂಡರೆ ಅವುಗಳಿಗೆ ಆಹಾರ ಹಾಕದೆ ಮುಂದಕ್ಕೆ ಹೋಗುತ್ತಿರಲಿಲ್ಲ. ಅಂತಹವನ್ನು ಬರ್ಬರವಾಗಿ ಹತ್ಯೆ ಮಾಡಲು ಮನಸ್ಸಾದರೂ ಹೇಗೆ ಬಂತು ಎಂದು’ ಪ್ರಶ್ನಿಸುತ್ತಾರೆ ಪ್ರವೀಣ್ ಸೋದರಿ ರೋಹಿಣಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT