ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಡ್ಕ ಪ್ರಭಾಕರ ಭಟ್‌ರೆ ಪ್ರಮಾಣಕ್ಕೆ ಬನ್ನಿ: ಮೊಹಿಯುದ್ದೀನ್‌ ಬಾವ ಸವಾಲು

Last Updated 20 ಮಾರ್ಚ್ 2021, 13:59 IST
ಅಕ್ಷರ ಗಾತ್ರ

ಮಂಗಳೂರು: ‘ಕಲ್ಲಡ್ಕ ಪ್ರಭಾಕರ್ ಭಟ್ಟರೆ ನಿಮ್ಮ ಸಮುದಾಯದಲ್ಲಿ ಯಾರೂ ಗೋ ಮಾಂಸ ಭಕ್ಷಕರಿಲ್ಲ ಎಂದು ದೇವಸ್ಥಾನದಲ್ಲಿ ಪ್ರಮಾಣ ಮಾಡ್ತೀರಾ’ ಎಂದು ಮಾಜಿ ಶಾಸಕ ಮೊಹಿಯುದ್ದೀನ್‌ ಬಾವ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಸವಾಲು ಹಾಕಿದರು.

ಕೆಂಜಾರಿನಲ್ಲಿ ಗೋಶಾಲೆಯಲ್ಲಿದ್ದ ದನಕರುಗಳು ಬೀದಿ ಪಾಲಾಗಿದ್ದರೂ, ಗೋವುಗಳ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿಯ ಸಂಸದ, ಶಾಸಕರು ಮೌನವಾಗಿದ್ದಾರೆ. ಮೂಕ ಪ್ರಾಣಿಗಳ ರೋದನ ಕೇಳುವವರಿಲ್ಲ. ಗೋವುಗಳ ಹೆಸರಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಗೋವುಗಳನ್ನೆ ಬೀದಿಪಾಲು ಮಾಡಿ ನಿರ್ಲಕ್ಷ್ಯ ತೋರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮೊದಲು ಗೋವುಗಳ ವಾಸ್ತವ್ಯಕ್ಕೆ ಸೂಕ್ತವಾದ ನೆಲೆ ಒದಗಿಸಬೇಕು. ಗೋವುಗಳಿಗೆ ಸುರಕ್ಷಿತ ತಾಣವನ್ನು ನಿರ್ಮಿಸುವುದಕ್ಕೆ ಗೋ ಪ್ರೇಮಿಗಳೆ ಹಿಂದೇಟು ಹಾಕುತ್ತಿದ್ದಾರೆ. ಬಿಜೆಪಿಯವರು ಗೋವಿನ ಹೆಸರಲ್ಲಿ ರಾಜಕಾರಣ ಮಾಡುವುದನ್ನು ಬಿಟ್ಟು, ಒಗ್ಗಟ್ಟಾಗಿ ನೆಲೆ ಒದಗಿಸುವ ಕಾರ್ಯಕ್ಕೆ ಮುಂದಾಗಬೇಕು. ಜಾತಿಗಳನ್ನು ಒಡೆದು ಆಳುವ ಚಾಳಿ ಬಿಜೆಪಿಯದ್ದು. ಗೋವುಗಳಿಗೆ ತಾತ್ಕಾಲಿಕ ನೆಲೆ ನಿರ್ಮಾಣಕ್ಕೆ ವೈಯಕ್ತಿಕವಾಗಿ ₹1 ಲಕ್ಷದ ಚೆಕ್ ನೀಡುತ್ತಿದ್ದೇನೆ. ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್, ಶಾಸಕರ ನಿಧಿಯಿಂದ ₹5 ಲಕ್ಷ ನೀಡುವುದಾಗಿ ತಿಳಿಸಿದ್ದಾರೆ’ ಎಂದು ಹೇಳಿದರು.

‘ವಿಧಾನಸಭೆಯಲ್ಲಿ ನನ್ನ ವಿರುದ್ಧ ಜಾತಿ ರಾಜಕಾರಣ ಮಾಡಿದರು. ಚುನಾವಣೆಯಲ್ಲಿ ಮೊಹಿಯುದ್ದೀನ್‌ ಬಾವಗೆ ಮತ ಹಾಕಬೇಡಿ. ಅವರು ಆಯ್ಕೆಯಾದರೆ ಕೊಟ್ಟಿಗೆಯಲ್ಲಿ ಇರುವ ಯಾವುದೇ ಗೋವುಗಳು ಉಳಿಯಲ್ಲ ಎಂಬ ಅಪಪ್ರಚಾರ ಮಾಡಿದ ನೀವು, ಗೋವಿನ ಹೆಸರಲ್ಲಿ ಶಾಸಕರಾಗಿ ಅಯ್ಕೆಯಾಗಿದ್ದೀರಿ’ ಎಂದು ಶಾಸಕ ಡಾ.ಭರತ್ ಶೆಟ್ಟಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಪಿಲಾ ಗೋಶಾಲೆಯ ಮುಖ್ಯಸ್ಥ ಪ್ರಕಾಶ್ ಶೆಟ್ಟಿ ಮಾತನಾಡಿ, ‘ಗೋವುಗಳ ರಕ್ಷಣೆಗೆ ವ್ಯವಸ್ಥೆ ಮಾಡಿ ಎಂದರೆ, ನೀವು ಗೋ ಮಾಂಸ ತಿನ್ನುವವರ ಜತೆಗೆ ಇದ್ದೀರಿ ಎನ್ನುತ್ತಾರೆ. ಆದರೆ, ಅವರು ಗೋವು ಕಡೆಯುವವರ ಜತೆಗೆ ಇದ್ದಾರೆ’ ಎಂದು ಆರೋಪಿಸಿದರು.

‘ಇನ್ನಾದರೂ ನಕಲಿ ಪ್ರೇಮ ನಿಲ್ಲಿಸಿ‘

‘ಕೋಸ್ಟ್‌ಗಾರ್ಡ್ ತರಬೇತಿ ಕೇಂದ್ರ ಸ್ಥಾಪನೆಗೆ ಆಕ್ಷೇಪವಿಲ್ಲ. ಸರ್ಕಾರಿ ಜಾಗ ಅತಿಕ್ರಮಣವಾಗಿದ್ದರೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕಿತ್ತು. ದನಕರುಗಳನ್ನು ಬೇರೆ ಗೋಶಾಲೆಗಳಿಗೆ ಸ್ಥಳಾಂತರಿಸಿ, ಕಟ್ಟಡ ತೆರವುಗೊಳಿಸಬಹುದಿತ್ತು. ಅದನ್ನು ಬಿಟ್ಟು ಮೂಕ ಪ್ರಾಣಿಗಳನ್ನು ಬೀದಿಪಾಲು ಮಾಡಿರುವುದು ಎಷ್ಟು ಸರಿ? ಈ ಬಗ್ಗೆ ಜಿಲ್ಲಾಧಿಕಾರಿ ಜತೆಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಗೋವುಗಳ ವಿಚಾರದಲ್ಲಿ ಇನ್ನಾದರೂ ಜಾತಿ ರಾಜಕೀಯ ಬಿಡಿ’ ಎಂದು ಮಾಜಿ ಶಾಸಕ ಮೊಹಿಯುದ್ದೀನ್‌ ಬಾವ ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT