ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಲ್ಸ್‌ ಆಕ್ಸಿಮೀಟರ್‌’ ಆ್ಯಪ್‌ಗಳ ಬಗ್ಗೆ ಎಚ್ಚರ

ಸೈಬರ್‌ ವಂಚನೆ ನಡೆಯುವ ಶಂಕೆ ವ್ಯಕ್ತಪಡಿಸಿರುವ ತಜ್ಞರು
Last Updated 28 ಜುಲೈ 2020, 16:47 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್‌ ಸೋಂಕಿನಿಂದ ಪಾರಾಗಲು ಮೊಬೈಲ್‌ ಆ್ಯಪ್‌ ಬಳಸಿ ರಕ್ತದಲ್ಲಿನ ಆಮ್ಲಜನಕದ ಪ್ರಮಾಣದ ಕುಸಿತದ (ಆಕ್ಸಿಜನ್‌ ಸ್ಯಾಚುರೇಷನ್‌) ಮೇಲೆ ನಿರಂತರ ನಿಗಾ ಇಡಬಹುದು ಎಂಬ ಮಾಹಿತಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆದರೆ, ಈ ವಿಧಾನ ಸುರಕ್ಷಿತವಲ್ಲ ಎಂದು ಎಚ್ಚರಿಸಿರುವ ಸೈಬರ್‌ ತಜ್ಞರು, ಜನರು ಎಚ್ಚರ ತಪ್ಪಿದರೆ ಹಣ ಮತ್ತು ವೈಯಕ್ತಿಕ ಡೇಟಾ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಕಿವಿಮಾತು ಹೇಳಿದ್ದಾರೆ.

ಆಮ್ಲಜನಕದ ಪ್ರಮಾಣವನ್ನು ಸೂಚಿಸುವ ‘ಪಲ್ಸ್‌ ಆಕ್ಸಿಮೀಟರ್‌’ಗಳ ದರ ಮಾರುಕಟ್ಟೆಯಲ್ಲಿ ₹ 1,400ರಿಂದ ಆರಂಭವಾಗುತ್ತದೆ. ‘ಹಣ ತೆತ್ತು ಆಕ್ಸಿಮೀಟರ್‌ ಖರೀದಿಸುವ ಬದಲಿಗೆ ಮೊಬೈಲ್‌ ಲೈಟ್‌ ಮೇಲೆ ಕೈ ಬೆರಳುಗಳನ್ನು ಇರಿಸುವ ಅಥವಾ ಬೆರಳಚ್ಚು ಮೂಡಿಸುವ (ಫಿಂಗರ್‌ ಪ್ರಿಂಟ್‌) ಮೂಲಕ ಸುಲಭವಾಗಿ, ಯಾವುದೇ ಖರ್ಚಿಲ್ಲದೇ ಆಮ್ಲಜನಕದ ಪ್ರಮಾಣ ಅರಿತು, ಸುರಕ್ಷಿತವಾಗಿರಿ’ ಎಂಬ ಜಾಹೀರಾತುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇದಕ್ಕೆ ಪೂರಕವಾಗಿ ಕೆಲವು ಮೊಬೈಲ್‌ ಅಪ್ಲಿಕೇಷನ್‌ಗಳನ್ನೂ ಹೆಸರಿಸಲಾಗಿದೆ.

‘ಸೈಬರ್‌ ವಂಚಕರು ಉಚಿತವಾಗಿ ಆಮ್ಲಜನಕದ ಪ್ರಮಾಣವನ್ನು ಅರಿಯಬಹುದು ಎಂಬ ಆಮಿಷವೊಡ್ಡಿ ಜನರನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಕೋವಿಡ್‌ ಸೋಂಕಿನ ಭೀತಿಯನ್ನೇ ಬಂಡವಾಳ ಮಾಡಿಕೊಂಡು ಜನರನ್ನು ವಂಚಿಸಲು ಈ ದುಷ್ಕರ್ಮಿಗಳು ಮುಂದಾಗಿದ್ದಾರೆ. ಜನರು ಎಚ್ಚರ ತಪ್ಪಿದ್ದರೆ ತಮ್ಮ ವೈಯಕ್ತಿಕ ಮಾಹಿತಿ, ಹಣ ಎರಡನ್ನೂ ಕಳೆದುಕೊಳ್ಳುವ ಅಪಾಯವಿದೆ’ ಎಂದು ಸೈಬರ್‌ ಅಪರಾಧ ಮತ್ತು ಕಾನೂನು ತರಬೇತುದಾರರೂ ಆಗಿರುವ ಸಹ್ಯಾದ್ರಿ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಧ್ಯಾಪಕ ಡಾ.ಅನಂತ ಪ್ರಭು ಜಿ. ಎಚ್ಚರಿಸಿದ್ದಾರೆ.

‘ಸೈಬರ್‌ ಅಪರಾಧಿಗಳ ಈ ಸಂದರ್ಭವನ್ನು ಬಳಸಿಕೊಂಡು ಮೊಬೈಲ್‌ ಬಳಕೆದಾರರ ಬೆರಳಚ್ಚು ಪಡೆದುಕೊಂಡು ಅದರ ನೆರವಿನಲ್ಲಿ ಅವರ ಆನ್‌ಲೈನ್‌ ಬ್ಯಾಂಕ್‌ ಖಾತೆಗಳಲ್ಲಿ ಹಣ ಲಪಟಾಯಿಸುವ, ಮೊಬೈಲ್‌ನಲ್ಲಿ ಇರುವ ದಾಖಲೆಗಳು, ಫೋಟೊಗಳು, ಎಸ್‌ಎಂಎಸ್‌ ಸೇರಿದಂತೆ ಎಲ್ಲ ಬಗೆಯ ವೈಯಕ್ತಿಕ ಮಾಹಿತಿಗಳಿಗೆ ಕನ್ನಹಾಕುವ ಅಪಾಯವಿದೆ. ಜನರು ಇಂತಹ ಮೊಬೈಲ್‌ ಅಪ್ಲಿಕೇಷನ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಾರದು. ಬದಲಿಗೆ ₹ 1,400 ಪಾವತಿಸಿ ಪಲ್ಸ್‌ ಆಕ್ಸಿಮೀಟರ್‌ ಖರೀದಿಸುವುದು ಹೆಚ್ಚು ಸುರಕ್ಷಿತ’ ಎಂದು ಸಲಹೆ ನೀಡುತ್ತಾರೆ ಅವರು.

ಖಚಿತತೆಯ ವಿಶ್ವಾಸವಿಲ್ಲ: ‘ಪಲ್ಸ್‌ ಆಕ್ಸಿಮೀಟರ್‌ನಲ್ಲಿ ನಡೆಸುವ ತಪಾಸಣೆಗೆ ಸರಿಸಮನಾಗಿ ಯಾವುದೇ ಮೊಬೈಲ್‌ ಅಪ್ಲಿಕೇಷನ್‌ನಲ್ಲಿ ತಪಾಸಣೆ ನಡೆಸಲು ಸಾಧ್ಯವಿಲ್ಲ. ಪಲ್ಸ್‌ ಆಕ್ಸಿಮೀಟರ್‌ನಂತೆ ಖಚಿತವಾದ ವರದಿಗಳು ಮೊಬೈಲ್‌ ಅಪ್ಲಿಕೇಷನ್‌ಗಳಲ್ಲಿ ದೊರಕಲು ಸಾಧ್ಯವಿಲ್ಲ’ ಎನ್ನುತ್ತಾರೆ ಫಾದರ್‌ ಮುಲ್ಲರ್ಸ್‌ ವೈದ್ಯಕೀಯ ಕಾಲೇಜಿನ ಜನರಲ್‌ ಮೆಡಿಸಿನ್‌ ವಿಭಾಗದ ಸಹ ಪ್ರಾಧ್ಯಾಪಕ ಡಾ.ಪ್ರಶಾಂತ್‌ ವೈ.ಎಂ.

ಎಲ್ಲ ಜನರಿಗೂ ಪಲ್ಸ್‌ ಆಕ್ಸಿಮೀಟರ್ಗಳ ಅಗತ್ಯವಿಲ್ಲ. ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಇತರ ಗಂಭೀರ ಕಾಯಲಿಗಳಿಂದ ಇರುವವರು ಪಲ್ಸ್‌ ಆಕ್ಸಿಮೀಟರ್‌ ಇರಿಸಿಕೊಳ್ಳುವುದು ಉತ್ತಮ ಎಂದು ಅವರು ಹೇಳುತ್ತಾರೆ.

ಆಯ್ಕೆಯಲ್ಲಿ ಎಚ್ಚರವಿರಲಿ

‘ಪಲ್ಸ್‌ ಆಕ್ಸಿಮೀಟರ್‌ಗಳನ್ನು ಖರೀದಿಸುವಾಗಲೂ ಎಚ್ಚರ ಅಗತ್ಯ. ಮಾರುಕಟ್ಟೆಯಲ್ಲಿ ಸಿಗುವ ಎಲ್ಲ ಪಲ್ಸ್‌ ಆಕ್ಸಿಮೀಟರ್‌ಗಳೂ ಗುಣಮಟ್ಟದಿಂದ ಕೂಡಿರುವುದಿಲ್ಲ. ಬೇಡಿಕೆ ಹೆಚ್ಚಿದಂತೆ ಕಳಪೆ ಗುಣಮಟ್ಟದ ಆಕ್ಸಿಮೀಟರ್‌ಗಳೂ ಮಾರುಕಟ್ಟೆಗೆ ಬಂದಿವೆ. ಉತ್ತಮ ಗುಣಮಟ್ಟದ ಪಲ್ಸ್‌ ಆಕ್ಸಿಮೀಟರ್‌ ಖರೀದಿಸಿದರೆ ಮಾತ್ರ ನಿಖರವಾದ ವರದಿ ಪಡೆಯಬಹುದು’ ಎಂದು ಡಾ.ಪ್ರಶಾಂತ್‌ ವೈ.ಎಂ. ಜನರಿಗೆ ಕಿವಿಮಾತು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT