ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡಾಯದ ಬಿಸಿಗೆ ಬಿಜೆಪಿ ಕೈಜಾರಿದ ಪುತ್ತೂರು

ಪುತ್ತೂರು ವಿಧಾನಸಭಾ ಚುನಾವಭೆ
Published 13 ಮೇ 2023, 20:50 IST
Last Updated 13 ಮೇ 2023, 20:50 IST
ಅಕ್ಷರ ಗಾತ್ರ

ಮಂಗಳೂರು: ಬಂಡಾಯದ ಬಿಸಿ ತಣಿಸಲು ವಿಫಲವಾಗಿದ್ದು ಹಾಗೂ ಅತಿಯಾದ ಆತ್ಮವಿಶ್ವಾಸ ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರವನ್ನು ಕಳೆದುಕೊಳ್ಳುವಂತೆ ಮಾಡಿದೆ.

ಬಿಜೆಪಿಯು ಪುತ್ತೂರಿನಲ್ಲಿ ಶಾಸಕ ಸಂಜೀವ ಮಠಂದೂರು ಬದಲಿಗೆ ಆಶಾ ತಿಮ್ಮಪ್ಪ ಗೌಡ ಅವರಿಗೆ ಟಿಕೆಟ್‌ ನೀಡಿತು. 2018ರ ಚುನಾವಣೆಯ ಸಂದರ್ಭದಲ್ಲೇ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಅರುಣ್‌ಕುಮಾರ್‌ ಪುತ್ತಿಲ ಅವರು ಬಂಡಾಯದ ಧ್ವನಿ ಎತ್ತಿದರು.

‘ಈ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿ 20 ಸಾವಿರಕ್ಕೂ ಹೆಚ್ಚು ಮತ ಪಡೆದ ಉದಾಹರಣೆ ಇಲ್ಲ. ಆದ್ದರಿಂದ, ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷೆ ಆಶಾ ಅವರನ್ನು ಗೆಲ್ಲಿಸುತ್ತೇವೆ’ ಎಂಬ ವಿಶ್ವಾಸದಲ್ಲಿ ಬಿಜೆಪಿ ಇತ್ತು. ಜೊತೆಗೆ ಪುತ್ತಿಲ ಅವರ ಜೊತೆಗಿದ್ದ ಹಿಂದುತ್ವವಾದಿ ಕಾರ್ಯಕರ್ತರ ಶಕ್ತಿಯನ್ನು ಅಳೆಯುವುದರಲ್ಲೂ ಬಿಜೆಪಿ ವಿಫಲವಾಯಿತು. ಪರಿಣಾಮ, ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್‌ ಕುಮಾರ್‌ ರೈ ಗೆಲುವು ಸಾಧಿಸಿದರು.

ಇನ್ನೊಂದೆಡೆ, ಪುತ್ತಿಲ ಅವರು ‘ನಾನು ಹಿಂದೆಯೂ ಬಿಜೆಪಿ, ಈಗಲೂ ಬಿಜೆಪಿ, ಮುಂದೆಯೂ ಬಿಜೆಪಿಯವನೇ ಆಗಿರುತ್ತೇನೆ’ ಎಂದು ಪ್ರಚಾರ ಮಾಡಿದರು. ಯೋಗಿ ಆದಿತ್ಯನಾಥ ಅವರು ಪುತ್ತೂರಿನಲ್ಲಿ ರೋಡ್‌ಶೋ ಮಾಡಿದ್ದನ್ನು ಸಹ ಪುತ್ತಿಲ ಸ್ವಾಗತಿಸಿದರು. ಪ್ರಚಾರದುದ್ದಕ್ಕೂ ‘ಬಿಜೆಪಿ ಧಾಟಿ’ಯಲ್ಲೇ ಮಾತನಾಡಿದರು.

ಕಾಂಗ್ರೆಸ್‌ ಪಕ್ಷದಲ್ಲೂ ಬಂಡಾಯ ಇತ್ತು. ಆದರೆ, ಸಕಾಲದಲ್ಲಿ ಅದನ್ನು ಶಮನಗೊಳಿಸುವಲ್ಲಿ ಪಕ್ಷ ಯಶಸ್ವಿಯಾಯಿತು. ಬಿಜೆಪಿ ಸಂಸದ ಡಿ.ವಿ.ಸದಾನಂದ ಗೌಡ ಅವರ ಆಪ್ತರೆನಿಸಿಕೊಂಡಿದ್ದ ಅಶೋಕ್‌ ಕುಮಾರ ರೈ ಅವರನ್ನು ಕಣಕ್ಕಿಳಿಸಿದ್ದಕ್ಕೆ ಕಾಂಗ್ರೆಸ್‌ ಸ್ಥಳೀಯ ನಾಯಕತ್ವದಲ್ಲಿ ತೀವ್ರ ಅಸಮಾಧಾನವಿತ್ತು. ಆದರೆ ಅದು ಬಹಿರಂಗವಾಗದಂತೆ ಪಕ್ಷದ ಹೈಕಮಾಂಡ್‌ ನೋಡಿಕೊಂಡಿತು. ಸ್ಥಳೀಯ ನಾಯಕರೆಲ್ಲರೂ ಜೊತೆಯಾಗಿ ಓಡಾಡಿ ಪ್ರಚಾರ ಮಾಡಿದ್ದು ಸಹ ಗೆಲುವಿಗೆ ಕಾಣಿಕೆ ನೀಡಿತು.

ಸುಮಾರು ಮೂರು ದಶಕಗಳ ಬಳಿಕ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಈ ರೀತಿಯ ಸೋಲಾಗಿದೆ. ಪಕ್ಷದ ಅಭ್ಯರ್ಥಿ ಕೇವಲ 37,558 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಕುಸಿಯುವಂತಾಗಿದೆ. ತನ್ನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲೇ ಆಗಿರುವ ಈ ಬೆಳವಣಿಗೆಯು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್ ಅವರಿಗೂ ಮುಜುಗರ ತರುವಂಥದ್ದಾಗಿದೆ. ಪುತ್ತಿಲ ಅವರಿಗೆ ಟಿಕೆಟ್‌ ತಪ್ಪಿಸುವುದರಲ್ಲಿ ನಳಿನ್‌ ಕುಮಾರ್‌ ಕೈವಾಡವೂ ಇತ್ತು ಎಂದು ಸ್ಥಳೀಯರು ಆರೋಪಿಸಿದ್ದರು.

undefined undefined

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT