ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ಮೈಲುತುತ್ತ ಖರೀದಿಗೆ ಬಾರದ ಬಿಡಿಗಾಸು

ಅಡಿಕೆಗೆ ವ್ಯಾಪಕವಾಗಿ ಹರಡುತ್ತಿರುವ ಕೊಳೆರೋಗ: ಬೆಳೆ ಉಳಿಸಿಕೊಳ್ಳುವುದೇ ಸವಾಲು
Published : 7 ಆಗಸ್ಟ್ 2024, 6:27 IST
Last Updated : 7 ಆಗಸ್ಟ್ 2024, 6:27 IST
ಫಾಲೋ ಮಾಡಿ
Comments

ಮಂಗಳೂರು: ಜಿಲ್ಲೆಯಲ್ಲಿ ಎಡೆಬಿಡದೆ ಸುರಿದ ಮಳೆಯ ಪರಿಣಾಮವಾಗಿ ಅಡಿಕೆ ತೋಟಗಳಲ್ಲಿ ಕೊಳೆರೋಗ ವ್ಯಾಪಿಸಿದೆ. ಬೆಳೆ ರಕ್ಷಣೆಗೆ ಸಿಂಪರಣೆ ಮಾಡುವ ಬೋರ್ಡೊ ಮಿಶ್ರಣಕ್ಕೆ ರಾಜ್ಯ ಸರ್ಕಾರದಿಂದ ಬಿಡಿಗಾಸೂ ದೊರೆಯದಿರುವುದು ರೈತರಲ್ಲಿ ಅಸಮಾಧಾನ ಮೂಡಿಸಿದೆ.

ಅಡಿಕೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಧಾನ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದ್ದು, ತೋಟಗಾರಿಕಾ ಇಲಾಖೆ ಮಾಹಿತಿಯಂತೆ ಜಿಲ್ಲೆಯಲ್ಲಿ 99,191 ಹೆಕ್ಟೇರ್ ಅಡಿಕೆ ತೋಟ ಇದೆ. ಇದರ ಹೊರತಾಗಿ ದಾಖಲೆಯಲ್ಲಿ ನಮೂದಾದ ತೋಟವೂ ಸಾಕಷ್ಟಿದೆ. ಈ ಬಾರಿ ನಿರಂತರ ಮಳೆಯಿಂದ ಸುಳ್ಯ, ಬೆಳ್ತಂಗಡಿ ತಾಲ್ಲೂಕುಗಳ ಬಹುತೇಕ ಎಲ್ಲ ಗ್ರಾಮಗಳಲ್ಲಿ ಅಡಿಕೆಗೆ ಕೊಳೆರೋಗ ಹರಡುತ್ತಿದೆ. ಸೋಮವಾರ ಮಳೆ ಬಿಡುವು ನೀಡಿದ್ದರಿಂದ ರೈತರು ಸೋಮವಾರ ರೋಗಬಾಧಿತ ಮರಗಳಿಗೆ ಬೋರ್ಡೊ ಸಿಂಪಡಣೆ ಮಾಡಿದರು.

ರೋಗದಿಂದ ರಕ್ಷಣೆ ನೀಡಲು ಅಡಿಕೆಗೆ ಮೈಲುತುತ್ತ (ಕಾಪರ್ ಸಲ್ಫೇಟ್) ಮತ್ತು ಸುಣ್ಣದ ಮಿಶ್ರಣವಾಗಿರುವ ಬೋರ್ಡೊ ದ್ರಾವಣ ಸಿಂಪಡಿಸಬೇಕಾಗುತ್ತದೆ. ತುತ್ತ ಖರೀದಿಗೆ ಸಮಗ್ರ ಕೀಟ ರೋಗ ನಿಯಂತ್ರಣ ಯೋಜನೆ (ಐಪಿಎಂ) ಅಡಿಯಲ್ಲಿ ರಾಜ್ಯ ಸರ್ಕಾರ ಪ್ರತಿವರ್ಷ ನೀಡುವ ಸಹಾಯಧನ ಈವರೆಗೂ ಬಿಡುಗಡೆಯಾಗಿಲ್ಲ. ಇದರಿಂದ ರೈತರು ಮಾರುಕಟ್ಟೆಯಲ್ಲಿ ಪೂರ್ಣ ದರ ಕೊಟ್ಟು ಮೈಲುತುತ್ತ ಖರೀದಿಸಬೇಕಾಗಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆ (ಎನ್‌ಎಚ್ಎಂ) ಅಡಿಯಲ್ಲಿ ಬರುವ ಸಹಾಯಧನ ಯಾವುದಕ್ಕೂ ಸಾಲದು ಎಂಬುದು ರೈತರ ಆರೋಪ.

‘ಬೆಳ್ತಂಗಡಿ ತಾಲ್ಲೂಕಿನ ಮಡ್ಯಂತಾರು, ಗುರುವಾಯನಕೆರೆ, ಮಚ್ಚಿನ, ಎಳನೀರು ಮತ್ತಿತರ ಗ್ರಾಮಗಳಲ್ಲಿ ಕೊಳೆ ವ್ಯಾಪಕವಾಗಿ ಹರಡಿದೆ. ರೋಗ ಹರಡಿರುವ ತೋಟಗಳಲ್ಲಿ ಬೋರ್ಡೊ ಸಿಂಪರಣೆ ಆರಂಭವಾಗಿದೆ. ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಕಾಪರ್ ಸಲ್ಫೇಟ್‌ ದರ ₹320ರಿಂದ ₹330ರವರೆಗೆ ಇದೆ. ಇದರ ಜೊತೆಗೆ ಸುಣ್ಣು ಮತ್ತು ಅಂಟು ಸೇರಿಸಿದ ಬೋರ್ಡೊ ದ್ರಾವಣದ ಮಿಶ್ರಣವನ್ನು ಅಡಿಕೆ ಮರಕ್ಕೆ ಸಿಂಪಡಣೆ ಮಾಡಬೇಕಾಗುತ್ತದೆ. ಒಂದು ಎಕರೆ ತೋಟಕ್ಕೆ 3ರಿಂದ 4 ಕೆ.ಜಿ. ಕಾಪರ್ ಸಲ್ಫೇಟ್ ಬಳಸಬೇಕಾಗುತ್ತದೆ’ ಎನ್ನುತ್ತಾರೆ ಮಚ್ಚಿನದ ಶಾಮಸುಂದರ್ ಭಟ್.

ಸಾಮಾನ್ಯವಾಗಿ ಎರಡು ಬಾರಿ ಬೋರ್ಡೊ ಸಿಂಪಡಣೆ ಮಾಡಬೇಕಾಗುತ್ತದೆ. ಮಳೆ ಅವಧಿ ವಿಸ್ತರಣೆಯಾದರೆ ಮೂರು ಬಾರಿಯೂ ಬೇಕಾಗಬಹುದು. ಪ್ರತಿ ಬಾರಿಯ ಸಿಂಪಡಣೆಗೆ ಕಚ್ಚಾವಸ್ತು, ಸಿಂಪಡಣೆ ಮಾಡುವವರ ಕೂಲಿ ದರ ಎಲ್ಲ ಸೇರಿ ಒಂದು ಎಕರೆಗೆ ಒಮ್ಮೆ ಬೋರ್ಡೊ ಸಿಂಪಡಣೆಗೆ ₹5,000 ವೆಚ್ಚವಾಗುತ್ತದೆ ಎಂದು ಅವರು ವಿವರ ನೀಡಿದರು.

‘ತೋಟಗಾರಿಕಾ ಇಲಾಖೆಯ ಸಹಾಯಧನ ನಿಗದಿತ ಅವಧಿಗೆ ಸಿಗುವುದಿಲ್ಲ. ಕಳೆದ ವರ್ಷ ಸಹಾಯಧನಕ್ಕೆ ಕಾದು ಕೊನೆಗೂ ಬರಲೇ ಇಲ್ಲ. ಈ ವರ್ಷ ಇಲಾಖೆಯಲ್ಲಿ ವಿಚಾರಿಸಿದರೆ, ಸಹಾಯಧನ ಇನ್ನೂ ಬಂದಿಲ್ಲ ಎನ್ನುತ್ತಾರೆ. ಕಚೇರಿ ಅಲೆದು ಬೇಸರವಾಗಿ ವಿಚಾರಿಸುವುದನ್ನೇ ಬಿಟ್ಟಿದ್ದೇವೆ’ ಎಂದು ರೈತರೊಬ್ಬರು ಅಳಲು ತೋಡಿಕೊಂಡರು.

‘ಈ ಬಾರಿ ಸುಳ್ಯ ತಾಲ್ಲೂಕಿನ ಬಹುತೇಕ ತೋಟಗಳಲ್ಲಿ ಕೊಳೆ ರೋಗ ಅಡರಿದೆ. ಮೊದಲೇ ಹಳದಿ ಎಲೆ ರೋಗದಿಂದ ಅಡಿಕೆ ಮರಗಳು ಸತ್ತಿವೆ. ತೋಟದಲ್ಲಿ ರೋಗಬಾಧಿತ ಮರಗಳೂ ಇರುವುದರಿಂದ ಔಷಧ ಸಿಂಪಡಣೆಯೂ ಸವಾಲಾಗಿದೆ. ಮಳೆ ಬಿಡುವು ನೀಡಿದ್ದು, ಬಿಸಿಲು ಆರಂಭವಾದರೆ, ಅಡಿಕೆ ಕಾಯಿ ಉದುರಲು ಶುರುವಾಗುತ್ತದೆ. ಶೇ 50ರಷ್ಟು ಬೆಳೆ ನಷ್ಟವಾಗುವ ಆತಂಕವಿದೆ’ ಎನ್ನುತ್ತಾರೆ ಸುಳ್ಯ ತಾಲ್ಲೂಕು ಆರಂತೋಡಿನ ಪಿ.ಬಿ. ಪ್ರಭಾಕರ ರೈ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT