ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ಷಿತ್‌ ಶೆಟ್ಟಿ ಸಿನಿಮಾ ಪ್ರಭಾವ: ಮಂಗಳೂರಿನ ಪೊಲೀಸ್‌ ನಾಯಿಮರಿ ಇನ್ನು ‘ಚಾರ್ಲಿ’

Last Updated 11 ಜೂನ್ 2022, 2:22 IST
ಅಕ್ಷರ ಗಾತ್ರ

ಮಂಗಳೂರು: ಕಿರಣ್‌ ರಾಜ್‌ ನಿರ್ದೇಶನದ, ರಕ್ಷಿತ್‌ ಶೆಟ್ಟಿ ಅಭಿಯನದ ‘777 ಚಾರ್ಲಿ‘ ಸಿನಿಮಾದಲ್ಲಿ ಮನುಷ್ಯ ಹಾಗೂ ನಾಯಿಯ ನಡುವಿನ ಒಡನಾಟದಿಂದ ಪ್ರಭಾವಿತರಾದ ನಗರದ ಪೊಲೀಸರು ಶ್ವಾನ ದಳದ ಹೊಸ ಸದಸ್ಯನಾಗಿರುವ ಲ್ಯಾಬ್ರಡಾರ್‌ ತಳಿಯ ನಾಯಿಮರಿಗೆ ‘ಚಾರ್ಲಿ’ ಎಂದು ಶುಕ್ರವಾರ ನಾಮಕರಣ ಮಾಡಿದರು.

ಮೂರು ತಿಂಗಳ ಲ್ಯಾಬ್ರಡಾರ್‌ ರಿಟ್ರೀವರ್‌ ನಾಯಿ ಮರಿ ಇತ್ತೀಚೆಗಷ್ಟೇ ಪೊಲೀಸ್‌ ಶ್ವಾನದಳಕ್ಕೆ ಸೇರ್ಪಡೆಯಾಗಿದೆ. ಬಂಟ್ವಾಳದ ಮಾಲೀಕರೊಬ್ಬರಿಂದ ಈ ನಾಯಿಮರಿಯನ್ನು ಶ್ವಾನ ಪಡೆಗಾಗಿ ಖರೀದಿಸಲಾಗಿತ್ತು. ನಗರ ಪೊಲೀಸ್‌ ಕಮಿಷನರ್‌ ಅವರ ಕಚೇರಿ ಬಳಿ ನಾಯಿಮರಿಗೆ ನಾಮಕರಣ ಮಾಡಲು ಪುಟ್ಟ ಸಮಾರಂಭವನ್ನೂ ಏರ್ಪಡಿಸಲಾಗಿತ್ತು.

ಶ್ವಾನದಳದ ನಾಲ್ವರು ಸಿಬ್ಬಂದಿ ‘777 ಚಾರ್ಲಿ‘ ಸಿನಿಮಾದ ಪ್ರೀಮಿಯರ್‌ ಶೋವನ್ನು ಗುರುವಾರ ವೀಕ್ಷಿಸಿದ್ದರು.

ನಗರ ಪೊಲೀಸ್‌ ಕಮಿಷನರ್‌ ಶಶಿಕುಮಾರ್‌, ‘ಮಾಲೀಕ ಹಾಗೂ ನಾಯಿ ನಡುವಿನ ಅನ್ಯೋನ್ಯತೆಯನ್ನು ‘777 ಚಾರ್ಲಿ‘ ಸಿನಿಮಾದಲ್ಲಿ ಚೆನ್ನಾಗಿ ಕಟ್ಟಿಕೊಡಲಾಗಿದೆ. ಶ್ವಾನದಳದ ಸಿಬ್ಬಂದಿ ಹಾಗೂ ನಾಯಿಗಳ ಜೊತೆ ಇಂತಹದ್ದೇ ಬಾಂಧವ್ಯ ಇದೆ. ಈ ಪ್ರೀಮಿಯರ್‌ ಶೋ ವೀಕ್ಷಿಸಿದ ಶ್ವಾನದಳದ ಸಿಬ್ಬಂದಿ ನಮ್ಮಲ್ಲಿರುವ ನಾಯಿ ಮರಿಗೂ ಚಾರ್ಲಿ ಎಂದು ಹೆಸರಿಡೋಣ ಎಂಬ ಪ್ರಸ್ತಾವ ಮುಂದಿಟ್ಟರು. ನಾನು ಅದಕ್ಕೆ ಒಪ್ಪಿಗೆ ಸೂಚಿಸಿದೆ’ ಎಂದರು.‌ ಅವರು ಕೂಡ ಪ್ರೀಮಿಯರ್‌ ಶೋ ವೀಕ್ಷಿಸಿದ್ದರು.

ಶ್ವಾನದಳದಲ್ಲಿ ಗೀತಾ, ರಾಣಿ, ರೂಬಿ ಹಾಗೂ ಬಬ್ಲಿ ಎಂಬ ನಾಯಿಗಳಿವೆ. ಅವುಗಳಲ್ಲಿ 11 ವರ್ಷದ ಗೀತಾ ಹಾಗೂ ರಾಣಿ ಲ್ಯಾಬ್ರಡಾರ್‌ ತಳಿಯವು. ಇವುಗಳನ್ನು ಸ್ಫೋಟಕ ಪತ್ತೆ ಸಲುವಾಗಿ ಬಳಸಲಾಗುತ್ತದೆ. ರೂಬಿ ಮತ್ತು ಬಬ್ಲಿ ನಾಯಿಗಳನ್ನು ಅಪರಾಧ ಪತ್ತೆಗಾಗಿ ಉಪಯೋಗಿಸಲಾಗುತ್ತದೆ. ಚಾರ್ಲಿಗೂ ಬೆಂಗಳೂರಿನ ನಗರ ಸಶಸ್ತ್ರ ಮೀಸಲು ಪಡೆಯ (ದಕ್ಷಿಣ) ತರಬೇತುದಾರರಿಂದ ಆರು ತಿಂಗಳ ಕಾಲ ತರಬೇತಿ ನೀಡಲಾಗುತ್ತದೆ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT