ಬುದ್ಧಿಮಾಂದ್ಯೆ ಮೇಲೆ ಅತ್ಯಾಚಾರ:ಒಂದು ವರ್ಷ ಜೈಲು ಶಿಕ್ಷೆ

7

ಬುದ್ಧಿಮಾಂದ್ಯೆ ಮೇಲೆ ಅತ್ಯಾಚಾರ:ಒಂದು ವರ್ಷ ಜೈಲು ಶಿಕ್ಷೆ

Published:
Updated:

ಮಂಗಳೂರು: ಬುದ್ಧಿಮಾಂದ್ಯ ಯುವತಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ, ಆಕೆಗೆ ಬೆದರಿಕೆ ಹಾಕಿದ್ದ ವ್ಯಕ್ತಿಯೊಬ್ಬನಿಗೆ ನಗರದ ಆರನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ಮತ್ತು ₹ 25,000 ದಂಡ ವಿಧಿಸಿ ಬುಧವಾರ ಆದೇಶ ಹೊರಡಿಸಿದೆ.

ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ತೆಂಕ ಎಕ್ಕಾರು ಗ್ರಾಮದ ಪೆರ್ಮುದೆ ನಿವಾಸಿ ಶೇಖರ ಶೆಟ್ಟಿಗಾರ್ (53) ಶಿಕ್ಷೆಗೊಳಗಾದ ವ್ಯಕ್ತಿ. ಈತ ತನ್ನ ಮನೆಯಿಂದ ಸ್ವಲ್ಪ ದೂರದಲ್ಲಿ ವಾಸವಾಗಿದ್ದ ಬಡ ಕುಟುಂಬದ ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರ ಎಸಗಿರುವುದು ಸಾಬೀತಾಗಿದೆ ಎಂದು ನ್ಯಾಯಾಲಯ ಹೇಳಿದೆ. ಅತ್ಯಾಚಾರ ನಡೆಸಿರುವುದಕ್ಕೆ ಒಂದು ವರ್ಷ ಜೈಲು ಮತ್ತು ₹ 5,000 ದಂಡ ಹಾಗೂ ಬೆದರಿಕೆ ಒಡ್ಡಿರುವುದಕ್ಕೆ ನಾಲ್ಕು ತಿಂಗಳ ಜೈಲು ಶಿಕ್ಷೆ ಮತ್ತು ₹ 20,000 ದಂಡ ವಿಧಿಸಲಾಗಿದೆ.

2017ರಲ್ಲಿ ಫೆಬ್ರುವರಿ ತಿಂಗಳ ಒಂದು ದಿನ ಸಂತ್ರಸ್ತೆಯ ತಾಯಿ ಕೆಲಸಕ್ಕೆ ಹೋಗಿದ್ದರು. ತಂಗಿ ದೊಡ್ಡಮ್ಮನ ಮನೆಗೆ ಹೋಗಿದ್ದಳು. ಆಗ ಮನೆಗೆ ನುಗ್ಗಿದ್ದ ಶೆಟ್ಟಿಗಾರ್ ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆಸಿದ್ದ. ತಂಗಿ ವಾಪಸು ಬಂದಾಗ ಅಕ್ಕನ ಬಟ್ಟೆ ಹರಿದಿರುವುದನ್ನು ಗಮನಿಸಿದ್ದಳು. ವಿಚಾರಿಸಿದಾಗ ಅತ್ಯಾಚಾರ ನಡೆದಿರುವುದು ಗೊತ್ತಾಗಿತ್ತು.

ಶೇಖರ ಶೆಟ್ಟಿಗಾರ್ ಕೊಲೆ ಬೆದರಿಕೆ ಹಾಕಿದ್ದ ಕಾರಣದಿಂದ ಕುಟುಂಬ ಪೊಲೀಸರಿಗೆ ದೂರು ನೀಡಿರಲಿಲ್ಲ. ಸಂಬಂಧಿಕರೊಬ್ಬರಿಗೆ ವಿಷಯ ತಿಳಿದ ನಂತರ ಕೃತ್ಯ ನಡೆದು 21 ದಿನಗಳ ಬಳಿಕ ದೂರು ನೀಡಲಾಗಿತ್ತು. ಸಂತ್ರಸ್ತೆಯನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿ ಹೇಳಿಕೆ ದಾಖಲು ಮಾಡಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಬಜ್ಪೆ ಠಾಣೆಯ ಆಗಿನ ಇನ್‌ಸ್ಪೆಕ್ಟರ್ ಟಿ.ಡಿ.ನಾಗರಾಜ್‌ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ವೇಳೆ 17 ಸಾಕ್ಷಿಗಳ ಹೇಳಿಕೆ ದಾಖಲಿಸಿದ್ದ ನ್ಯಾಯಾಧೀಶ ಡಿ.ಟಿ.ಪುಟ್ಟರಂಗಸ್ವಾಮಿ, 18 ದಾಖಲೆಗಳನ್ನು ಪರಿಶೀಲಿಸಿದ್ದರು. ಬುಧವಾರ ವಿಚಾರಣೆ ಪೂರ್ಣಗೊಳಿಸಿ ಅಂತಿಮ ಆದೇಶ ಹೊರಡಿಸಿದರು. ದಂಡದ ಮೊತ್ತದಲ್ಲಿ ₹ 20,000ವನ್ನು ಸಂತ್ರಸ್ತೆಗೆ ನೀಡುವಂತೆ ಆದೇಶಿಸಿದರು. ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಓ.ಎಂ. ಕ್ರಾಸ್ತಾ ಪ್ರಾಸಿಕ್ಯೂಷನ್‌ ಪರವಾಗಿ ವಾದಿಸಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !