ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ಬಾಲಕಿಯ ಅತ್ಯಾಚಾರ: ಅಪರಾಧಿಗೆ 20 ವರ್ಷ ಕಠಿಣ ಸಜೆ

Published : 8 ಆಗಸ್ಟ್ 2024, 4:40 IST
Last Updated : 8 ಆಗಸ್ಟ್ 2024, 4:40 IST
ಫಾಲೋ ಮಾಡಿ
Comments

ಮಂಗಳೂರು: 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣ ಸಂಬಂಧ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಮತ್ತು ಪೊಕ್ಸೊ ತ್ವರಿತಗತಿ ವಿಶೇಷ ನ್ಯಾಯಾಲಯ–2, ಮಂಗಳೂರು ತಾಲ್ಲೂಕಿನ ತೆಂಕ ಎಡಪದವು ಗ್ರಾಮದ ಬೋರುಗುಡ್ಡೆಯ ಪ್ರಕಾಶ್‌ (32 ) ಎಂಬಾತನಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹ 50 ಸಾವಿರ ದಂಡ ವಿಧಿಸಿದೆ.

2023ರ ಜ.17ರಂದು ಬಾಲಕಿಯು ದೊಡ್ಡಮ್ಮನ ಮನೆಗೆ  ಹೋಗಿದ್ದಳು. ಅವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆರೋಪಿ ಬಾಲಕಿಯನ್ನು ಅಡುಗೆ ಮನೆಗೆ ಎಳೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದ. ಮನೆಯವರಿಗೆ ವಿಷಯ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಹೆದರಿದ್ದ ಬಾಲಕಿ ತನ್ನ ಕೈಗಳನ್ನು ಬ್ಲೇಡ್ ನಿಂದ ಕೊಯ್ದು ಗಾಯ ಮಾಡಿಕೊಂಡಿದ್ದಳು. ಆಕೆಯ ಸಹೋದರಿ ಈ ಬಗ್ಗೆ ವಿಚಾರಿಸಿದಾಗ ಅತ್ಯಾಚಾರ ನಡೆದ ಬಗ್ಗೆ ತಿಳಿಸಿದ್ದಳು.

ಬಾಲಕಿ ನೀಡಿದ ದೂರಿನ ಅನ್ವಯ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಮಹಿಳಾ ಪೊಲೀಸ್ ಠಾಣೆಯ ಆಗಿನ ಇನ್‌ಸ್ಪೆಕ್ಟರ್ ಲೋಕೇಶ್ ಮತ್ತು ಶಾಂತಿನಾಥ ಜಿ. ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಧೀಶರಾದ ಮಾನು ಕೆ. ಎಸ್.  ಅವರು ಅಪರಾಧಿಗೆ ಐಪಿಸಿ ಸೆಕ್ಷನ್‌ 376 ಮತ್ತು ಪೊಕ್ಸೊ ಕಾಯ್ದೆಯ ಸೆಕ್ಷನ್‌  4ರ ಪ್ರಕಾರ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹ 50 ಸಾವಿರ ದಂಡ ವಿಧಿಸಿ ಬುಧವಾರ ತೀರ್ಪು ನೀಡಿದರು. ದಂಡದ ಮೊತ್ತವನ್ನು ಸಂತ್ರಸ್ತ ಬಾಲಕಿಗೆ ಪಾವತಿಸುವಂತೆ ಆದೇಶ ಮಾಡಿದರು. ಐಪಿಸಿ ಸೆಕ್ಷನ್ 357(ಎ) ಪ್ರಕಾರ ಮತ್ತು ಅತ್ಯಾಚಾರ ಸಂತ್ರಸ್ತರ ಪರಿಹಾರ ಯೋಜನೆಯಡಿಯಲ್ಲಿ ಸಂತ್ರಸ್ತ ಬಾಲಕಿಗೆ ಹೆಚ್ಚುವರಿಯಾಗಿ ₹ 2.5 ಲಕ್ಷ ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ನೀಡಬೇಕು ‌ಎಂದು ತೀರ್ಪಿನಲ್ಲಿ ನಿರ್ದೇಶನ ನೀಡಿದರು. 

ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ  ಕೆ.ಬದರಿನಾಥ ನಾಯರಿ ಅವರು ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT