ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು: ಸಡಗರದಲ್ಲಿ ಮೇಳೈಸಿದ ದೇಶಭಕ್ತಿ, ರಾಷ್ಟ್ರಶಕ್ತಿ

ರಾಷ್ಟ್ರನಾಯಕರ ಹಿನ್ನೆಲೆಗೆ ಸರಿಸುವ ಒಳಸಂಚು ಕಳವಳಕಾರಿ: ಧ್ವಜಾರೋಹಣ ಮಾಡಿದ ಸಚಿವ ದಿನೇಶ್‌ ಆರೋಪ
Published 26 ಜನವರಿ 2024, 13:24 IST
Last Updated 26 ಜನವರಿ 2024, 13:24 IST
ಅಕ್ಷರ ಗಾತ್ರ

ಮಂಗಳೂರು: ದೇಶಭಕ್ತಿ, ರಾಷ್ಟ್ರಶಕ್ತಿ, ಯೋಧರ ತ್ಯಾಗವನ್ನು ಬಿಂಬಿಸುವ ರೂಪಕಗಳು, ಬ್ಯಾಂಡ್ ಮೇಳದ ಹಿನ್ನೆಲೆಯಲ್ಲಿ ಶಿಸ್ತಿನ ಕವಾಯತು, ನೆಲದ ಸೊಗಡು ಸೂಸುವ ಜಾನಪದ ನೃತ್ಯ ಮುಂತಾದ ವೈವಿಧ್ಯಗಳೊಂದಿಗೆ ನಗರದಲ್ಲಿ ಗಣರಾಜ್ಯೋತ್ಸವವನ್ನು ಶುಕ್ರವಾರ ಸಂಭ್ರಮಿಸಲಾಯಿತು.

ತಾಲ್ಲೂಕು ಆಡಳಿತಗಳು ಮತ್ತು ಸಂಘ ಸಂಸ್ಥೆಗಳ ಆಶ್ರಯದಲ್ಲಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ನೆಹರು ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಧ್ವಜಾರೋಹಣ ಮಾಡಿದರು. ಸಭಾ ಕಾರ್ಯಕ್ರಮದ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ರಾಷ್ಟ್ರಪ್ರೇಮ ಉಕ್ಕಿಸುವ ಕಲಾಕಾರ್ಯಕ್ರಮಗಳ ಮೂಲಕ ತಂಪೆರೆದರು.

ನಗರದ ಬಟ್ರ್ಯಾಂಡ್ ರಸೆಲ್ ಇಂಗ್ಲಿಂಷ್ ಮೀಡಿಯಂ ಶಾಲೆಯ ವಿದ್ಯಾರ್ಥಿಗಳು ಪೂಜಾ ಕುಣಿತದ ಮೂಲಕ ರೋಮಾಂಚನಗೊಳಿಸಿದರು. ತಾಸೆಯ ಲಯಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ ದೇವತೆಯ ಮುಖವಾಡ ಹೊತ್ತ ಬಿದಿರಿನ ತಳಿಗಳನ್ನು ತಲೆಮೇಲೆ ಇರಿಸಿ ಕುಣಿದ ಇಬ್ಬರು ವಿದ್ಯಾರ್ಥಿಗಳ ಸುತ್ತ ಇತರರು ಬೇರೆ ಬೇರೆ ವಿನ್ಯಾಸಗಳನ್ನು ಪ್ರದರ್ಶಿಸಿದರು. ಒಬ್ಬರ ಮೇಲೊಬ್ಬರು ನಿಂತು ಕುಣಿದಾಗ ಚಪ್ಪಾಳೆಯ ಮಳೆ ಸುರಿಯಿತು. ಕೊನೆಗೆ ಮುಖವಾಡ ಹೊತ್ತವರು ಏಣಿಯನ್ನು ಮೇಲೆ ನಿಂತು ಕುಣಿದಾಗ ವೇದಿಕೆಯಲ್ಲಿ ಕುಳಿತಿದ್ದ ಗಣ್ಯರು ಕೂಡ ಖುಷಿ ವ್ಯಕ್ತಪಡಿಸಿದರು.

ಕೊಂಚಾಡಿಯ ಇಂದಿರಾಗಾಂಧಿ ಸ್ಮಾರಕ ಶಾಲೆ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ನೃತ್ಯ–ರೂಪಕದಲ್ಲಿ ಪುಲ್ವಾಮ ದಾಳಿಯ ಸಂದರ್ಭವನ್ನು ಮನೋಜ್ಞವಾಗಿ ಅಭಿನಯಿಸಲಾಯಿತು. ಶಕ್ತಿ ನಗರದ ಶಕ್ತಿ ಶಾಲೆಯ 50 ವಿದ್ಯಾರ್ಥಿಗಳು ಹಿಂದಿ ಹಾಡುಗಳನ್ನು ಒಳಗೊಂಡ ದೇಶಭಕ್ತಿಯ ರೂಪಕ ಪ್ರದರ್ಶಿಸಿದರು. ಎಸ್‌ಡಿಎಂ, ಸೇಂಟ್‌ ಆ್ಯಗ್ನೆಸ್‌ ಕಾಲೇಜು ಮತ್ತು ರೋಷನಿ ನಿಲಯದ ವಿದ್ಯಾರ್ಥಿಗಳ ಕಾರ್ಯಕ್ರಮಗಳು ಕೂಡ ಮೈನವಿರೇಳಿಸಿದವು. 

ರಾಷ್ಟ್ರನಾಯಕರ ಮರೆಸುವ ಒಳಸಂಚು: ಗೌರವ ವಂದನೆ ಸ್ವೀಕರಿಸಿದ ನಂತರ ಸಂದೇಶ ನೀಡಿದ ಸಚಿವ ದಿನೇಶ್ ಗುಂಡೂರಾವ್ ‘ದೇಶ ನಿರ್ಮಾಣಕ್ಕೆ ಬುನಾದಿ ಹಾಕಿದ ರಾಷ್ಟ್ರನಾಯಕರನ್ನು ತೆರೆಮರೆಗೆ ಸರಿಸಿ ಅವರ ಬಗ್ಗೆ ಯುವತಲೆಮಾರಿಗೆ ತಿಳಿಯದಂತೆ ಮಾಡುವ ಒಳಸಂಚು ರಾಷ್ಟ್ರದಲ್ಲಿ ನಡೆಯುತ್ತಿದೆ. ಇದು ಕಳವಳಕಾರಿ ಸಂಗತಿ‘ ಎಂದರು. 

ಆದರ್ಶ ಪುರುಷ ಶ್ರೀರಾಮನಂತೆ ನಾಡಿನ ಜನರಿಗೆ ನೀಡಿದ ಮಾತನ್ನು ಉಳಿಸಿಕೊಳ್ಳುವ ಮೂಲಕ ರಾಜ್ಯ ಸರ್ಕಾರ ರಾಮರಾಜ್ಯದ ಕನಸು ನನಸು ಮಾಡುತ್ತಿದೆ. ಕೆಲವರು ಎದೆಯಲ್ಲಿ ದ್ವೇಷ, ಮತ್ಸರ, ಅಸಹನೆಯನ್ನು ಇರಿಸಿಕೊಂಡು ರಾಮನ ಭಜನೆ ಮಾಡುತ್ತಿದ್ದಾರೆ. ಇದರಿಂದ ರಾಮನ ಕೃಪೆ ದೊರೆಯುವುದೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದ ದಿನೇಶ್ ಗುಂಡೂರಾವ್ ‘ಸಂವಿಧಾನ ಬದಲಿಸುವ ಬಗ್ಗೆಯೂ ಈಚೆಗೆ ಮಾತುಗಳು ಕೇಳಿ ಬರುತ್ತಿವೆ. ಸಂವಿಧಾನ ಬದಲಿಸುವುದು ಎಂದರೆ ಭಾರತದ ಆತ್ಮಕ್ಕೆ ಚೂರಿ ಹಾಕಿದಂತೆ’ ಎಂದರು.

ಸಂಸದ ನಳಿನ್ ಕುಮಾರ್ ಕಟೀಲ್‌, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ ಕೆ, ಐಜಿಪಿ ಅಮಿತ್ ಸಿಂಗ್, ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಇದ್ದರು.

ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಎನ್‌ಸಿಸಿ ಕೆಡೆಟ್‌ಗಳ ಪಥಸಂಚಲನ –ಪ್ರಜಾವಾಣಿ ಚಿತ್ರ
ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಎನ್‌ಸಿಸಿ ಕೆಡೆಟ್‌ಗಳ ಪಥಸಂಚಲನ –ಪ್ರಜಾವಾಣಿ ಚಿತ್ರ
ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಪೊಲೀಸರು ಪಥಸಂಚಲನ ನಡೆಸಿಕೊಟ್ಟರು –ಪ್ರಜಾವಾಣಿ ಚಿತ್ರ
ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಪೊಲೀಸರು ಪಥಸಂಚಲನ ನಡೆಸಿಕೊಟ್ಟರು –ಪ್ರಜಾವಾಣಿ ಚಿತ್ರ
ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಸಚಿವರಾದ ದಿನೇಶ್ ಗುಂಡೂರಾವ್ ಗೌರವ ವಂದನೆ ಸ್ವೀಕರಿಸಿದರು –ಪ್ರಜಾವಾಣಿ ಚಿತ್ರ
ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಸಚಿವರಾದ ದಿನೇಶ್ ಗುಂಡೂರಾವ್ ಗೌರವ ವಂದನೆ ಸ್ವೀಕರಿಸಿದರು –ಪ್ರಜಾವಾಣಿ ಚಿತ್ರ
ಮಂಗಳೂರಿನ ನೆಹರು ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಶಾಲಾ ವಿದ್ಯಾರ್ಥಿಗಳು ಪ್ರದರ್ಶಿಸಿದ ಪೂಜಾ ಕುಣಿತ
ಮಂಗಳೂರಿನ ನೆಹರು ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಶಾಲಾ ವಿದ್ಯಾರ್ಥಿಗಳು ಪ್ರದರ್ಶಿಸಿದ ಪೂಜಾ ಕುಣಿತ

ಫೆಬ್ರುವರಿಯಲ್ಲಿ ಮೂರು ಡಯಲಿಸಿಸ್ ಯಂತ್ರ ಜಿಲ್ಲೆಗೆ

ಒಟ್ಟು 53 ಡಿಯಲಿಸಿಸ್‌ ಯಂತ್ರಗಳನ್ನು ಒದಗಿಸಲು ಸರ್ಕಾರ ಮುಂದಾಗಿದ್ದು ಕಡಬ ಮೂಲ್ಕಿ ಮತ್ತು ಮೂಡುಬಿದಿರೆ ತಾಲ್ಲೂಕುಗಳಿಗೆ ತಲಾ ಮೂರು ಯಂತ್ರಗಳನ್ನು ಫೆಬ್ರುವರಿಯಲ್ಲಿ ನೀಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ವೆನ್‌ಲಾಕ್ ಆಸ್ಪತ್ರೆ ಬಂಟ್ವಾಳ ಪುತ್ತೂರು ಬೆಳ್ತಂಗಡಿ ಸುಳ್ಯ ಆಸ್ಪತ್ರೆಗಳಿಗೆ ಯಂತ್ರಗಳು ಸಿಗಲಿವೆ ಎಂದ ಅವರು ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಬದಲಿಗೆ ₹ 170ರಂತೆ ನೀಡುತ್ತಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಕಳೆದ ವರ್ಷದ ಜುಲೈನಿಂದ ಡಿಸೆಂಬರ್ ವರೆಗೆ ₹ 321 ಕೋಟಿ ನೀಡಲಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ ಜನವರಿ 15ರ ವರೆಗೆ 3.49 ಲಕ್ಷ ಮಂದಿಗೆ ನಗದು ನೀಡಲಾಗಿದೆ ಎಂದು ಅವರು ವಿವರಿಸಿದರು. ಗೃಹಜ್ಯೋತಿ ಯೋಜನೆಯಲ್ಲಿ ಕಳೆದ ಆಗಸ್ಟ್‌ನಿಂದ ಡಿಸೆಂಬರ್ ವರೆಗೆ ಶೂನ್ಯ ಬಿಲ್‌ಗೆ ಸಂಬಂಧಿಸಿದ ₹ 183 ಕೋಟಿಯನ್ನು ಮೆಸ್ಕಾಂಗೆ ಭರಿಸಲಾಗಿದೆ. ಶಕ್ತಿ ಯೋಜನೆಯಡಿ ನಗರದಲ್ಲಿ ಹೆಚ್ಚುವರಿ ಬಸ್‌ಗಳಿಗೆ ಬೇಡಿಕೆ ಇದ್ದು ಇದಕ್ಕೆ ಸ್ಪಂದಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT