ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಕೊಲೆಗಳ ತನಿಖೆ ನಿವೃತ್ತ ನ್ಯಾಯಾಧೀಶರಿಗೆ ವಹಿಸಿ: ಲುಕ್ಮಾನ್‌ ಬಂಟ್ವಾಳ

Last Updated 31 ಜುಲೈ 2022, 5:16 IST
ಅಕ್ಷರ ಗಾತ್ರ

ಮಂಗಳೂರು: ‘ಪ್ರವೀಣ್‌ ನೆಟ್ಟಾರು, ಬೆಳ್ಳಾರೆ ಕಳೆಂಜ ಗ್ರಾಮದ ಮಸೂದ್, ಮಂಗಳಪೇಟೆಯ ಮಹಮ್ಮದ್‌ ಫಾಝಿಲ್ ಕೊಲೆ ಪ್ರಕರಣಗಳ ತನಿಖೆಯನ್ನು ನಿವೃತ್ತ ನ್ಯಾಯಾಧೀಶರಿಂದ ನಡೆಸಬೇಕು’ ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ಒತ್ತಾಯಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಕೇವಲ ಪ್ರವೀಣ್‌ ಹತ್ಯೆಯ ತನಿಖೆಯನ್ನು ಎನ್‌ಎಐಗೆ ವಹಿಸುವುದು ಸರಿಯಲ್ಲ. ವಹಿಸುವುದಿದ್ದರೆ ಮೂರೂ ಕೊಲೆಗಳ ತನಿಖೆಯನ್ನೂ ಎನ್‌ಐಎಗೆ ವಹಿಸಿ’ ಎಂದರು.

‘ಕೋಮುವಾದಿ ಸಂಘಟನೆಗಳ ಕುಮ್ಮಕ್ಕಿನಿಂದಲೇ ಈ ಕೊಲೆಗಳು ನಡೆದಿವೆ. ಮೂರೂ ಯುವಕರ ಹತ್ಯೆಗಳನ್ನೂ ಯುವ ಕಾಂಗ್ರೆಸ್‌ ಖಂಡಿಸುತ್ತದೆ. ದ್ವೇಷ ಭಾಷಣಗಳಿಗೆ ಕಡಿವಾಣ ಹಾಕಿದ್ದರೆ ಅಮಾಯಕರ ಕೊಲೆಗಳನ್ನು ತಪ್ಪಿಸಬಹುದಿತ್ತು. ಜನಪ್ರತಿನಿಧಿಗಳು ಶವ ರಾಜಕಾರಣ ಮಾಡಿದ್ದು ಕೂಡಾ ಅಕ್ಷಮ್ಯ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಾವು ಸಮಸ್ತ ಕನ್ನಡಿಗರ ಪ್ರತಿನಿಧಿ ಎಂಬುದನ್ನೇ ಮರೆತಿದ್ದಾರೆ. ಪ್ರವೀಣ್ ನೆಟ್ಟಾರು ಅವರ ಮನೆಗೆ ಭೇಟಿ ನೀಡಿದ ಅವರು ಅಲ್ಲೇ ಸಮೀಪದ ಮಸೂದ್ ಮನೆಗೆ ಭೇಟಿ ನೀಡಿಲ್ಲ. ಕೊಲೆಯಾದ ಯುವಕರ ಕುಟುಂಬಗಳಿಗೆ ಪರಿಹಾರ ನೀಡುವಲ್ಲಿಯೂ ಸರ್ಕಾರ ತಾರತಮ್ಯ ಎಸಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪೊಲೀಸ್ ಇಲಾಖೆಯ ಗುಪ್ತ ವಾರ್ತೆ ವಿಭಾಗದ ವೈಫಲ್ಯ ಈ ಪ್ರಕರಣಗಳಲ್ಲಿ ಎದ್ದುಕಾಣಿಸುತ್ತಿದೆ. ಗೃಹಸಚಿವ ಆರಗ ಜ್ಞಾನೇಂದ್ರ ಅವರ ಮನೆಗೆ ಅವರದೇ ಪಕ್ಷದ ಅಂಗ ಸಂಸ್ಥೆಯಾದ ಎಬಿವಿಪಿ ಕಾರ್ಯಕರ್ತರು ನುಗ್ಗಿ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಗೃಹಸಚಿವರ ವೈಫಲ್ಯಕ್ಕೆ ಇದಕ್ಕಿಂತ ದೊಡ್ಡ ಸಾಕ್ಷ್ಯ ಬೇಕೇ’ ಎಂದು ಅವರು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಕಾರ್ಯದರ್ಶಿ ಸರ್ಫರಾಜ್ ನವಾಝ್, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಭಿಷೇಕ್ ಬೆಳ್ಳಿಪ್ಪಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಮಾನಂದ ಪೂಜಾರಿ, ನವಾಲ್ ಬಿ.ಕೆ, ನವೀದ್ ಆಕ್ತರ್, ಇಸ್ಮಾಯಿಲ್ ಬಿ.ಎಸ್, ಮೊಹಮ್ಮದ್ ಕಬೀರ್, ಸೌಹಾನ್ ಎಸ್.ಕೆ, ಇಸ್ಮಾಯಿಲ್ ಸಿದ್ದಿಕ್, ಫಯಾಜ್ ಅಮ್ಮೇಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT