ಪುತ್ತೂರು: ಕುಟುಂಬದ ಆಧಾರ ಸ್ತಂಭವಾಗಿದ್ದ ರಿಕ್ಷಾ ಚಾಲಕರೊಬ್ಬರು ಅಪಘಾತದಲ್ಲಿ ಗಾಯಗೊಂಡು ಮಲಗಿದಲ್ಲೇ ಕಾಲ ಕಳೆಯುತ್ತಿದ್ದು, ಅವರ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.
ಪುತ್ತೂರು ತಾಲ್ಲೂಕಿನ ಕೊಡಿಪ್ಪಾಡಿ ಗ್ರಾಮದ ಭಟ್ರುಪ್ಪಾಡಿ ಅನಿಲ್ ಪೂಜಾರಿ (42) ಅವರ ರಿಕ್ಷಾ 6 ತಿಂಗಳ ಹಿಂದೆ ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ ತಲೆ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಗಾಯವಾಗಿತ್ತು. ಅವರಿಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆ ಬಳಿಕ ಅವರ ದೇಹ ಶಕ್ತಿಹೀನವಾಗಿದ್ದು, ನಡೆದಾಡಲು ಬೇರಯವರ ಸಹಾಯ ಬೇಕಾಗಿದೆ.
ಅವರಿಗೆ ಪತ್ನಿ, ಪುತ್ರಿ ಹಾಗೂ ಇಬ್ಬರು ಪುತ್ರರಿದ್ದು, ಸಣ್ಣ ಮನೆ ಮಾತ್ರ ಇದೆ. ಇದರಿಂದಾಗಿ ಸಂಸಾರದ ಬದುಕಿನ ಪತ್ನಿ ರೇವತಿ ಅವರು ಹೊತ್ತುಕೊಳ್ಳಬೇಕಾಗಿ ಬಂದಿದೆ. ದಂಪತಿಯ ಪುತ್ರಿ, ಒಬ್ಬ ಪುತ್ರ ಪ್ರಥಮ ಪಿಯು ಶಿಕ್ಷಣ ಪಡೆಯುತ್ತಿದ್ದಾರೆ. ಕೊನೆಯ ಪುತ್ರ 7ನೇ ತರಗತಿ ವಿದ್ಯಾರ್ಥಿ.
ರೇವತಿ ಅವರು ಬೀಡಿ ಸುತ್ತಿ ಸಂಸಾರದ ನಿರ್ವಹಣೆ ಮಾಡುತ್ತಿದ್ದು, ರಿಕ್ಷಾ ಖರೀದಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪಡೆದಿರುವ ₹ 2 ಲಕ್ಷ ಸಾಲದ ವಾರದ ಕಂತು ₹ 1,300 ಪಾವತಿಸಬೇಕಾಗಿದೆ. ತಿಂಗಳೊಂದಕ್ಕೆ ಪತಿಯ ಚಿಕಿತ್ಸೆ ಮತ್ತು ಔಷಧಿಗಾಗಿ ಸುಮಾರು ₹ 2 ಸಾವಿರ ಬೇಕಾಗುತ್ತಿದೆ. ಈಗ ಬೀಡಿ ಕೆಲಸವೂ ಇಲ್ಲದೆ ಕುಟುಂಬ ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿದೆ.
ಕುಟುಂಬಕ್ಕೆ ನೆರವಾಗುವವರು ಕರ್ಣಾಟಕ ಬ್ಯಾಂಕ್‌ನ ಪುತ್ತೂರು ಕಬಕ ಶಾಖೆಯಲ್ಲಿ ರೇವತಿ ಬಿ.ಅವರ ಹೆಸರಿನಲ್ಲಿರುವ ಖಾತೆ ಸಂಖ್ಯೆ 4012500101605401 (ಐಎಫ್‌ಸಿ ಕೋಡ್ ಕೆಎಆರ್‌ಬಿ 0000401)ಗೆ ನೆರವು ಜಮೆ ಮಾಡಬಹುದು. ಅಥವಾ ಮುಖತಃ ಅವರನ್ನು ಭೇಟಿಯಾಗಿ ಸಹಾಯ ಹಸ್ತ ನೀಡಬಹುದು ಎಂದು ಅವರು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.