ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಪ್‌ಕಿನ್ ವಿಲೇವಾರಿಗೆ ‘ಗುಲಾಬಿ ಬುಟ್ಟಿ’

ಕಿಲ್ಪಾಡಿ ಗ್ರಾಮ ಪಂಚಾಯಿತಿಯಲ್ಲಿ ವಿನೂತನ ಅಭಿಯಾನ
Last Updated 28 ಸೆಪ್ಟೆಂಬರ್ 2021, 12:17 IST
ಅಕ್ಷರ ಗಾತ್ರ

ಮಂಗಳೂರು: ಗ್ರಾಮೀಣ ಭಾಗದಲ್ಲಿ ‘ಸ್ಯಾನಿಟರಿ ನ್ಯಾಪ್‌ಕಿನ್’ ವಿಲೇವಾರಿಗಾಗಿ ಸ್ವಚ್ಛ ಭಾರತ ಮಿಷನ್‌ ಮೂಲಕ ಕ್ರಮ ಕೈಗೊಳ್ಳಲಾಗುತ್ತಿದ್ದು, ತಾಲ್ಲೂಕಿನ ಕಿಲ್ಪಾಡಿ ಗ್ರಾಮ ಪಂಚಾಯಿತಿಯು ವಿಶಿಷ್ಟ ಹೆಜ್ಜೆ ಇರಿಸಿದ್ದು, ಈಚೆಗೆ ‘ಗುಲಾಬಿ ಬುಟ್ಟಿ’ (ಪಿಂಕ್‌ ಬಾಕ್ಸ್) ವಿತರಿಸಲಾಯಿತು.

ದಕ್ಷಿಣ ಕನ್ನಡವು ಸ್ವಚ್ಛ ಭಾರತ ಮಿಷನ್‌ ಅಡಿಯಲ್ಲಿ ‘ಬಯಲು ಬಹಿರ್ದೆಸೆ ಮುಕ್ತ –ಪ್ಲಸ್’ (ಒಡಿಎಫ್–ಪ್ಲಸ್) ಜಿಲ್ಲೆಯಾಗಿ ಗುರುತಿಸಿಕೊಂಡಿದ್ದು, ಹಸಿ– ಒಣ ತ್ಯಾಜ್ಯಗಳ ವಿಲೇವಾರಿ ಜೊತೆಗೆ ಸ್ವಚ್ಛ ಪರಿಸರ ರೂಪಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಪೈಕಿ ಎಲ್ಲೆಂದರಲ್ಲಿ ಬಿಸಾಡುತ್ತಿದ್ದ ಸ್ಯಾನಿಟರಿ ನ್ಯಾಪ್‌ಕಿನ್‌ಗಳೂ ಸ್ಥಳೀಯಾಡಳಿತಗಳಿಗೆ ಸವಾಲಾಗಿದ್ದವು. ನ್ಯಾಪ್‌ಕಿನ್‌ಗಳನ್ನು ವಿಲೇ ಮಾಡಲು ಇನ್ಸಿನರೇಟರ್ ಯಂತ್ರವನ್ನು ನೀಡಲಾಗುತ್ತಿದೆ. ಈಗ ಗ್ರಾಮ ನೈರ್ಮಲ್ಯ ಮತ್ತು ಋತುಚಕ್ರ ನಿರ್ವಹಣೆ ಹಾಗೂ ವೈಯಕ್ತಿಕ ಶುಚಿತ್ವದ ಅಭಿಯಾನದ ಅಂಗವಾಗಿ ನ್ಯಾಪ್‌ಕಿನ್‌ ಸಂಗ್ರಹಕ್ಕಾಗಿ ‘ಋತು’ ಯೋಜನೆ ಅಡಿ ಗುಲಾಬಿ ಬುಟ್ಟಿ ನೀಡಲಾಗುತ್ತಿದೆ.

ಕಿಲ್ಪಾಡಿಯಲ್ಲಿ ಭಾನುವಾರ ನಡೆದ ಮಹಿಳಾ ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷ ಗೋಪಿನಾಥ ಪಡಂಗ, ಸದಸ್ಯರಾದ ದಮಯಂತಿ, ಮಮತಾ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಚಿತ್ರಾ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಚಾಲನೆ ನೀಡಿದರು.

ಪಿಂಕ್ ಬಾಕ್ಸ್:

ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಚೇರಿ, ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ‘ಗುಲಾಬಿ ಬುಟ್ಟಿ’ಗಳನ್ನು ನೀಡಲಾಗುತ್ತದೆ. ಇದನ್ನು ಮಕ್ಕಳ ಕೈಗೆ ಸಿಗದಷ್ಟು ಎತ್ತರದಲ್ಲಿ, ಕೇವಲ ಮಹಿಳೆಯರು ಪ್ರವೇಶಿಸುವ ಸ್ಥಳಗಳಲ್ಲಿ ಅಳವಡಿಸಲಾಗುತ್ತದೆ. ಬಳಸಿದ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಕಾಗದದಲ್ಲಿ ಸುತ್ತಿ ಈ ಡಬ್ಬಕ್ಕೆ ಹಾಕಲಾಗುತ್ತದೆ. ಗ್ರಾಮ ಪಂಚಾಯ್ತಿ ಸಿಬ್ಬಂದಿ ಇವುಗಳನ್ನು ದಿನಕ್ಕೊಮ್ಮೆ ಸಂಗ್ರಹಿಸಿ, ಇನ್ಸಿನರೇಟರ್ ಯಂತ್ರದ ಮೂಲಕ ವಿಲೇವಾರಿ ಮಾಡುತ್ತಾರೆ.

ಇನ್ಸಿನರೇಟರ್ ಯಂತ್ರ

ಸುಮಾರು 900 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಉರಿಯುವ ಈ ಯಂತ್ರದಲ್ಲಿ ಏಕಕಾಲಕ್ಕೆ 50ರಿಂದ 60 ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು 20 ನಿಮಿಷಗಳಲ್ಲಿ ಸುಟ್ಟು ಬೂದಿ ಮಾಡಲಾಗುತ್ತದೆ. ಸುಡುವಾಗ ಹೊರಹೊಮ್ಮುವ ಹೊಗೆಯು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಿಲ್ಲ. ಇದರಿಂದ ಉತ್ಪತ್ತಿಯಾದ ಬೂದಿಯನ್ನು ಶೌಚಾಲಯಕ್ಕೆ ಹಾಕಲಾಗುತ್ತದೆ.

‘ಗುಲಾಬಿ ಬುಟ್ಟಿ: ರಾಜ್ಯದಲ್ಲೇ ಮೊದಲು’

‘ರಾಜ್ಯದಲ್ಲೇ ಮೊದಲ ಬಾರಿಗೆ ನಮ್ಮ ಗ್ರಾಮ ಪಂಚಾಯಿತಿಯು ಸ್ಯಾನಿಟರಿ ನ್ಯಾಪ್‌ಕಿನ್ ಸಂಗ್ರಹಕ್ಕಾಗಿ ಸಂಗ್ರಹದ ಬುಟ್ಟಿ ನೀಡುತ್ತಿದೆ. ಈಗಾಗಲೇ ಹಸಿ ಕಸಕ್ಕಾಗಿ ‘ಹಸಿರು’, ಒಣ ಕಸಕ್ಕಾಗಿ ‘ನೀಲಿ’ ಹಾಗೂ ಅಪಾಯಕಾರಿ ತ್ಯಾಜ್ಯಕ್ಕಾಗಿ ‘ಕೆಂಪು’ ಬುಟ್ಟಿಗಳನ್ನು ನೀಡಲಾಗಿದೆ. ‘ಗುಲಾಬಿ’ (ಪಿಂಕ್) ಬುಟ್ಟಿಯನ್ನು ಸ್ಯಾನಿಟರಿ ನ್ಯಾಪ್‌ಕಿನ್‌ಗೆ ನೀಡುತ್ತಿದ್ದೇವೆ’ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ತಿಳಿಸಿದರು.

‘ಇದು ಗ್ರಾಮ ಪಂಚಾಯಿತಿಯ ವಿಶಿಷ್ಟ ಹೆಜ್ಜೆಯಾಗಿದ್ದು, ಮಹಿಳಾ ಸ್ವಸಹಾಯ ಸಂಘಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರ ಮೂಲಕ ಅರಿವು ಮೂಡಿಸುತ್ತಿದ್ದೇವೆ. ಸಂಗ್ರಹಗೊಂಡ ತ್ಯಾಜ್ಯವನ್ನು ತಾತ್ಕಾಲಿಕ ಶೆಡ್‌ನಲ್ಲಿರುವಇನ್ಸಿನರೇಟರ್ ಯಂತ್ರದಲ್ಲಿ ಸುಡುತ್ತಿದ್ದೇವೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT