ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗಬನ ಕಾಂಕ್ರೀಟೀಕರಣ: ನೈಸರ್ಗಿಕ ಸೊಬಗು ಉಳಿಸೋಣ

ನೂರಾರು ವರ್ಷ ಹಳೆಯ ಮರಗಳ ಹನನ, ಕಾಂಕ್ರೀಟೀಕರಣ – ನಾಗ ಸಂಕುಲಕ್ಕೆ ಕಂಟಕ,
Published : 9 ಆಗಸ್ಟ್ 2024, 8:18 IST
Last Updated : 9 ಆಗಸ್ಟ್ 2024, 8:18 IST
ಫಾಲೋ ಮಾಡಿ
Comments

ಮಂಗಳೂರು: ಬಾನೆತ್ತರ ಬೆಳೆದ, ನೂರಾರು ವರುಷ ಹಳೆಯ ಮರಗಳು, ಅವುಗಳ ರೆಂಬೆ ಕೊಂಬೆಗಳಿಗೆ ಹೆಣೆದುಕೊಂಡ ಬಳುಕುವ ಬಳ್ಳಿಗಳು, ಗಿಡ, ಮರ ಬಳ್ಳಿಗಳಿಗೆ ಅಂಟಿಕೊಂಡ ಹಾವಸೆಗಳು, ಸಮೀಪದಲ್ಲಿ ಪುಟ್ಟ ಕೊಳ, ಇಲ್ಲಿನ ತಣ್ಣನೆಯ ವಾತಾವರಣದ ತುಂಬಾ ಹಕ್ಕಿಗಳ ಕಲರವ. ಈ ಕಿರುಕಾಡಿನ ನಡುವೊಂದು ಹುತ್ತ, ಅದರ ಪಕ್ಕ ಚಿಕ್ಕ, ಪುಟ್ಟ ನಾಗನ ಕಲ್ಲುಗಳು.

ತುಳುನಾಡಿನಾದ್ಯಂತ ಕಂಡು ಬರುವ ನಾಗಬನಗಳ ಸ್ಥೂಲ ಚಿತ್ರಣವಿದು. ಸಂಸ್ಕೃತಿ–ಪರಂಪರೆಯನ್ನು ಪ್ರೀತಿಸುವ ತುಳುವರ ನಿಸರ್ಗ ಪ್ರೇಮದ ಕುರುಹುಗಳಂತಿರುವ ಇಂತಹ ನಾಗಬನಗಳನ್ನು ಕಾಂಕ್ರೀಟ್‌ ರಚನೆಗಳು ಆಪೋಶನ ಪಡೆಯುತ್ತಿ. ಒಂದು ಕಾಲದಲ್ಲಿ ಪುಟ್ಟ ಕಾಡುಗಳಂತೆ ಸಮೃದ್ಧವಾಗಿದ್ದ ನಾಗಬನಗಳು ನವೀಕರಣದ ಬಳಿಕ  ಬೆಂಗಾಡಿನಂತಾಗಿವೆ. ಬನಗಳ ಸಮೃದ್ಧಿ ಹಸಿರು ಸಿರಿ ಕಣ್ಮರೆಯಾಗುತ್ತಿದೆ. 

ಅನಾದಿ ಕಾಲದಿಂದಲೂ ನಮ್ಮ ಪೂರ್ವಜರು  ನಾಗಬನಗಳನ್ನು ಹಾಗೆಯೇ  ಉಳಿಸಿಕೊಂಡಿದ್ದರು. ವರ್ಷಕ್ಕೊಮ್ಮೆ ನಾಗರ ಪಂಚಮಿ ದಿನ ಬನಕ್ಕೆ ಹೋಗಿ ಹಾಲೆರೆದು ತನು ಅರ್ಪಿಸುತ್ತಿದ್ದುದು ಬಿಟ್ಟರೆ, ಉಳಿದ ಅಷ್ಟೂ ದಿನಗಳು ಅಲ್ಲಿ ಮಾನವ ಚಟುವಟಿಕೆ ಇರುತ್ತಿರಲಿಲ್ಲ. ಹಾಗಾಗಿ ಆ ನಾಗಬನಗಳು ಸಹಜವಾಗಿಯೇ ಹಾವುಗಳೂ ಸೇರಿದಂತೆ ವಿವಿಧ ಪ್ರಾಣಿ– ಪಕ್ಷಿಗಳಿಗೆ ಸಂರಕ್ಷಿತ ತಾಣದಂತಿತ್ತು. ಇಲ್ಲಿ ನಾಗಾರಾಧನೆಯ ಜೊತೆ ನಿಸರ್ಗದ ಆರಾಧನೆಯೂ ನಡೆಯುತ್ತಿತ್ತು.

‘ನಾಗಬನಗಳ ಬಳಿ ನಾಗರಹಾವು ಕೇರೆ ಹಾವು, ಹೆಬ್ಬಾವು, ಕಾಳಿಂಗ ಸರ್ಪ, ಕುಕ್ರಿ ಹಾವು, ಮಲೆನಾಡ ಆಭರಣದ ಹಾವು (ಟ್ರಿಂಕೆಟ್‌), ಕುರುಡು ಹಾವು ಸುಮಾರು 11 ಪ್ರಭೇದಗಳ ಹಾವು ಸಂತಾನೋತ್ಪತ್ತಿ, ಮಿಲನಕ್ಕೆ ನಾಗಬನಗಳನ್ನು ಬಳಸುವುದನ್ನು ನಾನು ದಾಖಲಿಸಿದ್ದೇನೆ.  ಹಾವುಗಳು ಮಾತ್ರವಲ್ಲ, ಕಬ್ಬೆಕ್ಕು, ಪುನುಗು ಬೆಕ್ಕು, ಚಿಪ್ಪುಹಂದಿ, ಮುಳ್ಳುಹಂದಿ, ಆಮೆ, ಅಳಿಲು ಮೊದಲಾದ ಪ್ರಾಣಿಗಳಿಗೂ ಈ ಬನಗಳು ಸುರಕ್ಷಿತ ತಾಣ. ರೆಂಜ, ಗೋಳಿ, ಅಶ್ವತ್ಥ ಸುರಗಿ, ಸಂಪಿಗೆ ಮರಗಳು ಇಲ್ಲಿ ಸಮೃದ್ಧವಾಗಿದ್ದವು. ಆದರೆ ನಾಗಬನಗಳ  ‘ಜೀರ್ಣೋದ್ಧಾರ’ ಪ್ರಕ್ರಿಯೆ ಹಾವುಗಳ ನೆಲೆಯನ್ನೇ ನಾಶಪಡಿಸುತ್ತಿದೆ’ ಎಂದು ಕಳವಳ ವ್ಯಕ್ತಪಡಿಸುತ್ತಾರೆ ಹಲವಾರು ದಶಕಗಳಿಂದ ಹಾವುಗಳ ರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಉರಗಪ್ರೇಮಿ ಗುರುರಾಜ್‌ ಸನಿಲ್‌.

ಕರಾವಳಿಯ 15 ಗ್ರಾಮಗಳಲ್ಲಿ ಎರಡು ದಶಕಗಳ ಹಿಂದೆ ನಡೆದ ಅಧ್ಯಯನದಲ್ಲಿ 1,111 ದೇವರಕಾಡು/ ಪವಿತ್ರವನಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ 460 ನಾಗಬನಗಳಿದ್ದವು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸುಮಾರು 50 ಸಾವಿರದಷ್ಟು ಇಂತಹ ಸಂರಕ್ಷಿತ ಬನಗಳಿರಬಹುದು ಎಂದು ಅಂದಾಜಿಸಲಾಗಿತ್ತು. ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್‌ 2006ರಲ್ಲಿ ಪ್ರಕಟಿಸಿದ ‘ದಕ್ಷಿಣ ಕನ್ನಡದ ದೇವರ ಕಾಡುಗಳು, ನಾಗಬನಗಳು ಮತ್ತು ಭೂತಸ್ಥಾನಗಳು‘ ಕೃತಿಯಲ್ಲಿ ಇದರ ಉಲ್ಲೇಖವಿದೆ. 

‘ಉಡುಪಿ ತಾಲ್ಲೂಕಿನ ಕಾಪು ಬಳಿಯ ಕರಂದಾಡಿಯ ನಾಗಬನವೊಂದಕ್ಕೆ ಕೆಲವರ್ಷಗಳ ಹಿಂದೆ ಸಸ್ಯವಿಜ್ಞಾನಿ ಪ್ರೊ.ಕೆ.ಜಿ.ಭಟ್‌ ಅವರನ್ನು ಕರೆದೊಯ್ದಿದ್ದೆವು. 40 ಸೆಂಟ್ಸ್‌ ಜಾಗದಲ್ಲಿ ವ್ಯಾಪಿಸಿದ್ದ ನಾಗಬನದಲ್ಲಿ 70ಕ್ಕೂ ಹೆಚ್ಚು ಪ್ರಭೇದಗಳ ಔಷಧೀಯ ಸಸ್ಯಗಳನ್ನು ಹಾಗೂ 36 ಪ್ರಭೇದಗಳ ಮರಗಳನ್ನು ಅವರು ಗುರುತಿಸಿದ್ದರು. ಇವುಗಳ ಮಹತ್ವವನ್ನು ಸ್ಥಳೀಯರಿಗೆ ವಿವರಿಸಿದ ಬಳಿಕ ಅವರು ಅಲ್ಲಿ  ಕಾಂಕ್ರೀಟ್‌ ರಚನೆ ನಿರ್ಮಿಸುವ ಯೋಜನೆ ಕೈಬಿಟ್ಟರು’ ಎಂದು ಸ್ಮರಿಸುತ್ತಾರೆ ಗುರುರಾಜ್ ಸನಿಲ್.

‘ನಂಬಿಕೆಯನ್ನೇ ಅಸ್ತ್ರವನ್ನಾಗಿಸಿ, ನಾಗದೋಷದ ಭಯ ಹುಟ್ಟಿಸಲಾಗುತ್ತಿದೆ. ಇದಾಗಬಾರದು. ನೈಸರ್ಗಿಕ ನಾಗಬನವನ್ನು ಕಾಂಕ್ರೀಟೀಕರಣಗೊಳಿಸುವುದು ನಿಜಕ್ಕೂ ನಾಗ ಸಂಕುಲಕ್ಕೆ ಮಾಡುವ ಅಪಚಾರ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಗ್ರಾಮಗಳಲ್ಲಿ ಈಗಲೂ ನೂರಾರು ನಾಗಬನಗಳು ನೈಸರ್ಗಿಕ ಸೊಬಗನ್ನು ಉಳಿಸಿಕೊಂಡಿವೆ. ಕನಿಷ್ಠ ಪಕ್ಷ ಅವುಗಳನ್ನಾದರೂ ಕಾಪಾಡಬೇಕು’ ಎಂಬುದು ಅವರ ಕೋರಿಕೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಐವತ್ತೊಕ್ಲು ಗ್ರಾಮದ ಕಾಣಿಕೆ ಕುಟುಂಬದ ನಾಗಬನ
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಐವತ್ತೊಕ್ಲು ಗ್ರಾಮದ ಕಾಣಿಕೆ ಕುಟುಂಬದ ನಾಗಬನ

ನಾಗಬನ ಕಾಂಕ್ರೀಟೀಕರಣ– ಪರಿಣಾಮಗಳೇನು?

ನಾಗಬನದ ಜೀರ್ಣೋದ್ಧಾರಕ್ಕಾಗಿ ‌‌‌‌ 300 400 ವರ್ಷಗಳಷ್ಟು ಹಳೆಯ ಮರಗಳನ್ನು ಕಡಿಯಲಾಗುತ್ತಿದೆ. ಇದರಿಂದ ಪರಿಸರ ವ್ಯವಸ್ಥೆಯೇ ನಾಶವಾಗುತ್ತಿದೆ. ಅಲ್ಲಿನ ತಾಪಮಾನ ಹೆಚ್ಚುತ್ತದೆ. ಇದು ಹಾವು ಸೇರಿದಂತೆ ಇತರ ಜೀವಿ ವಾಸಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ. 30–40 ಸೆಂಟ್ಸ್‌ಗಳಷ್ಟು ವಿಶಾಲವಾದ ನಾಗಬನಗಳು ಇದ್ದಲ್ಲಿ  ಆಸುಪಾಸಿನ ಬಾವಿಗಳ ನೀರಿನ ಒರತೆಯೂ ಚೆನ್ನಾಗಿರುತ್ತಿತ್ತು. ನಾಗಬನದ ಮರಗಳನ್ನು ಕಡಿದು ಜೀರ್ಣೋದ್ಧಾರ ಮಾಡಿದ ಬಳಿಕ ಆಸುಪಾಸಿನ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿತವಾಗಿದೆ ಎಂದು ಅಭಿಪ್ರಾಯ ಪಡುತ್ತಾರೆ ಪರಿಸರ ತಜ್ಞರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT