ಭಾನುವಾರ, ಸೆಪ್ಟೆಂಬರ್ 19, 2021
22 °C
ಕೆಪಿಸಿಸಿ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಸಯ್ಯದ್ ಅಹ್ಮದ್ ಸವಾಲು

ಉಗ್ರ ತರಬೇತಿ: ಸಿ.ಟಿ.ರವಿ ಸಾಬೀತುಪಡಿಸಲಿ-ಸಯ್ಯದ್ ಅಹ್ಮದ್ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ಮದರಸಗಳಲ್ಲಿ ಕುರಾನ್ ಓದಿಸುವುದನ್ನು ಹೊರತುಪಡಿಸಿ ಬೇರೆ ಯಾವುದೇ ಚಟುವಟಿಕೆ ನಡೆಯುವುದಿಲ್ಲ. ಮದರಸಗಳಲ್ಲಿ ಉಗ್ರರಿಗೆ ತರಬೇತಿಯಂತಹ ಕೃತ್ಯ ನಡೆಯುತ್ತದೆ ಎನ್ನುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಅದನ್ನು ಸಾಬೀತುಪಡಿಸಲಿ’ ಎಂದು ಕೆಪಿಸಿಸಿ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಸಯ್ಯದ್ ಅಹ್ಮದ್ ಸವಾಲು ಹಾಕಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮದರಸಗಳು ಎಂದಿಗೂ ಉಗ್ರರಿಗೆ ಪಾಠ ನೀಡುವ ತಾಣಗಳಲ್ಲ. ನಮ್ಮ ಹಿರಿಯರೂ ಕೆಟ್ಟದ್ದನ್ನು ಕಲಿಸಿಲ್ಲ. ಕುರಾನ್ ಕೂಡ ಒಳ್ಳೆಯ ವಿಚಾರಗಳನ್ನೇ ಹೇಳಿದೆ. ಆದರೆ, ಚುನಾವಣೆ ಗಿಮಿಕ್‍ಗಾಗಿ ಮದರಸ ಬಗ್ಗೆ ಸಿ.ಟಿ.ರವಿ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಮದರಸಗಳಲ್ಲಿ ಏನು ನಡೆಯುತ್ತದೆ ಎಂಬುದನ್ನು ತಿಳಿದು ಅವರು ಮಾತನಾಡಲಿ’ ಎಂದರು.

ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದರೆ ಭಾರತದ ಮುಸ್ಲಿಮರಿಗೆ ಏನೂ ಪ್ರಯೋಜನವಿಲ್ಲ. ಭಾರತದ ಮುಸ್ಲಿಮರು ತಾಲಿಬಾನ್ ಪರವಾಗಿಲ್ಲ. ತಾಲಿಬಾನ್‍ಗೆ ಸಹಾಯ ಮಾಡುವವರೂ ಇಲ್ಲಿಲ್ಲ. ಭಯೋತ್ಪಾದನೆ ಜೊತೆ ಇಸ್ಲಾಂ ಎಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಗ್ಯಾಸ್ ದರ ಏರಿಕೆ ವಿರುದ್ಧ ಹೋರಾಟ: ಅಡುಗೆ ಅನಿಲ ಸಿಲಿಂಡರ್ ಬೆಲೆ ₹ 1,000 ತಲುಪುವ ಹಂತದಲ್ಲಿದೆ. ಇದರ ವಿರುದ್ಧ ಪ್ರತಿಭಟಿಸಬೇಕಾಗಿದೆ ಎಂದು ಹೇಳಿದರು.

ಮಾಜಿ ಸಂಸದ ಇಬ್ರಾಹಿಂ, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಐವನ್ ಡಿಸೋಜ, ಅಲ್ಪಸಂಖ್ಯಾತ ಜಿಲ್ಲಾ ಘಟಕ ಅಧ್ಯಕ್ಷ ಶಾಹುಲ್ ಹಮೀದ್, ಯುವಕ ಕಾಂಗ್ರೆಸ್ ಘಟಕದ ಅಧ್ಯಕ್ಷ ಲುಕ್ಮಾನ್, ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಶಶಿಧರ ಹೆಗ್ಡೆ, ಪಿ.ವಿ.ಮೋಹನ್, ನಝೀರ್ ಬಜಾಲ್, ಟಿ.ಕೆ.ಸುಧೀರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.