ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಸಡಗರ

ಮಂಗಳೂರು: ಜಿಲ್ಲೆಯಾದ್ಯಂತ ಗುರುವಾರ ಶಾಲೆಗಳಲ್ಲಿ ‘ಶಾಲಾ ಆರಂಭೋತ್ಸವ’ ಸಂಭ್ರಮ ನಡೆಯಿತು. ಶಿಕ್ಷಣ ಇಲಾಖೆಯ ಸುತ್ತೋಲೆಯಂತೆ ಮಕ್ಕಳ ಅನುಪಸ್ಥಿತಿಯಲ್ಲಿ ಕಾರ್ಯಕ್ರಮಗಳು ನಡೆದವು. ಈ ಮೂಲಕ ಪ್ರಸಕ್ತ ವರ್ಷದ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ ದೊರಕಿದೆ.
ಬೆಳ್ತಂಗಡಿ: ಮರೋಡಿ ಗ್ರಾಮದ ಕೂಕ್ರಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಮಕ್ಕಳ ಪೋಷಕರ ಉಪಸ್ಥಿತಿಯಲ್ಲಿ ಗುರುವಾರ ನಡೆಯಿತು.
ಮರೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಶ್ರೀ ಜೈನ್ ಕಾರ್ಯಕ್ರಮ ಉದ್ಘಾಟಿಸಿ, ‘ಮಕ್ಕಳ ಕೊರತೆಯಿಂದ ಮುಚ್ಚುವ ಹಂತದಲ್ಲಿದ್ದ ಕೂಕ್ರಬೆಟ್ಟು ಶಾಲೆಗೆ ಮರುಜೀವ ದೊರಕಿರುವುದು ಉತ್ತಮ ಬೆಳವಣಿಗೆ. ಈ ಶಾಲೆಯ ಅಭಿವೃದ್ಧಿಗೆ ಪಂಚಾಯಿತಿಯಿಂದ ಸಂಪೂರ್ಣ ಸಹಕಾರ ನೀಡಲಾಗು ವುದು’ ಎಂದು ಹೇಳಿದರು.
ಕೂಕ್ರಬೆಟ್ಟು ಸರ್ಕಾರಿ ಶಾಲೆ ಉಳಿಸಿ, ಬೆಳೆಸಿ ಸಮಿತಿ ಅಧ್ಯಕ್ಷ ಜಯಂತ ಕೋಟ್ಯಾನ್ ಮಾತನಾಡಿ, ‘ಕೋವಿಡ್ ಕಾಲಘಟ್ಟದಲ್ಲಿ ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಮಹತ್ವ ದೊರೆಯುತ್ತಿದೆ. ಶಿಕ್ಷಣ ವ್ಯವಸ್ಥೆಗೆ ರಾಜ್ಯ ಸರ್ಕಾರವು ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದು, ಅದರ ಸದುಪಯೋಗವಾಗಬೇಕು. ಕೂಕ್ರಬೆಟ್ಟು ಸರ್ಕಾರಿ ಶಾಲೆಯ ನೂತನ ಕಟ್ಟಡದ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಚಾಲನೆ ನೀಡಲಾಗುವುದು. ಗ್ರಾಮೀಣ ಪ್ರದೇಶದ ಈ ಶಾಲೆಯಲ್ಲಿ ರಾಜ್ಯಕ್ಕೆ ಮಾದರಿಯಾಗಿ ಬೆಳೆಸುವ ಗುರಿಯನ್ನು ಹೊಂದಲಾಗಿದೆ’ ಎಂದು ಹೇಳಿದರು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ರಾಜು ಪೂಜಾರಿ, ಮರೋಡಿ ಗ್ರಾಮ ಪಂಚಾಯಿತಿ ಸದಸ್ಯರಾದ ರತ್ನಾಕರ ಬುಣ್ಣಾನ್, ಶುಭರಾಜ ಹೆಗ್ಡೆ, ಅಶೋಕ ಪೂಜಾರಿ, ಉಮಾವತಿ, ಸಮಿತಾ, ಮಾಜಿ ಅಧ್ಯಕ್ಷರಾದ ಎಂ.ಎಸ್.ಪೂಜಾರಿ, ಬಾಲಕೃಷ್ಣ ಬಂಗೇರ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರದೀಶ್ ಮರೋಡಿ, ಕೂಕ್ರಬೆಟ್ಟು ಸರ್ಕಾರಿ ಶಾಲೆ ಉಳಿಸಿ, ಬೆಳೆಸಿ ಸಮಿತಿ ಕಾರ್ಯದರ್ಶಿ ನಾರಾಯಣ ಪೂಜಾರಿ ಇದ್ದರು.
ಪ್ರಭಾರ ಮುಖ್ಯಶಿಕ್ಷಕಿ ಸುಫಲಾ ಸ್ವಾಗತಿಸಿದರು. ಸಹ ಶಿಕ್ಷಕಿ ಹರ್ಷಲಾ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮೊದಲು ಶಾಲಾ ಆವರಣ ವನ್ನು ಮಕ್ಕಳ ಪೋಷಕರ ಶ್ರಮದಾನದ ಮೂಲಕ ಶುಚಿಗೊಳಿಸಲಾಯಿತು. ಶಾಲೆಯನ್ನು ಹೂ, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.
ಪಾಡ್ಯಾರು ಶಾಲಾ ಪ್ರಾರಂಭೋತ್ಸವ
ಮೂಡುಬಿದಿರೆ: ಶಾಲಾ ಅಂಗವಾಗಿ ಗುರುವಾರ ಪಡುಮಾರ್ನಾಡು ಗ್ರಾಮದ ಬನ್ನಡ್ಕದ ಪಾಡ್ಯಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಳಿರು ತೋರಣ ಕಟ್ಟಿ ಸ್ವಾಗತಿಸಲಾಯಿತು.
ಬೆಳಿಗ್ಗೆ ಶಾಲೆಯ ಆವರಣವನ್ನು ಸ್ವಚ್ಛಗೊಳಿಸಲಾಯಿತು. ಶಾಲೆಯ ಗೋಡೆ ಗಳಿಗೆ ಬಲೂನುಗಳನ್ನು ಕಟ್ಟಿ ಅಲಂಕರಿಸಲಾಯಿತು.
ಪಡುಮಾರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿ.ಎಸ್ ಕಲ್ಯಾಣಿ ಮಾತನಾಡಿ, ‘ಹೆತ್ತವರು ಮಕ್ಕಳಿಗೋಸ್ಕರ ಆಸ್ತಿ ಮಾಡಬೇಕಿಲ್ಲ. ಬದಲಾಗಿ, ಅವರಿಗೆ ಒಳ್ಳೆಯ ಶಿಕ್ಷಣ ಕೊಟ್ಟು ಮಕ್ಕಳನ್ನೆ ಆಸ್ತಿಯನ್ನಾಗಿ ಬೆಳೆಸಬೇಕು’ ಎಂದರು.
ಶಾಲಾ ಮುಖ್ಯಶಿಕ್ಷಕ ವಾಸುದೇವ ಆಚಾರ್ಯ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಮಾಲತಿ, ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಸನ್ನ ಶೆಣೈ, ಆಶಾ ಕಾರ್ಯಕರ್ತೆ ಶೋಭಾ ದಿನೇಶ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.