ಶನಿವಾರ, ಅಕ್ಟೋಬರ್ 23, 2021
20 °C
ಅಶೋಕ ನಗರದಲ್ಲಿ ನೂತನ ಶಾಲೆ ಉದ್ಘಾಟಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ

ಮಂಗಳೂರು: ಎಸ್‌ಡಿಎಂನಿಂದ ಸಂಸ್ಕಾರಯುತ ಶಿಕ್ಷಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ಇಂದಿನ ಮಕ್ಕಳಲ್ಲಿ ನಮಗಿಂತ ಹೆಚ್ಚು ಜ್ಞಾನ ಇದೆ. ಆದರೆ, ಅವರಲ್ಲಿ ಸಂಸ್ಕಾರದ ಕೊರತೆ ಇದೆ ಎಂಬುದು ಪೋಷಕರ ಅಳಲು. ನಮ್ಮ ಶಿಕ್ಷಣ ಸಂಸ್ಥೆಗಳಿಗೆ ಮಕ್ಕಳನ್ನು ಸೇರಿಸಲು ಬರುವ ಪೋಷಕರು, ‘ಮಕ್ಕಳಿಗೆ ಸಂಸ್ಕಾರವನ್ನು ಹೇಳಿಕೊಡಿ’ ಎಂದು ಮನವಿ ಮಾಡುತ್ತಾರೆ. ನಮ್ಮ ಶಿಕ್ಷಣ ಸಂಸ್ಥೆಗಳು ಆ ಕೆಲಸವನ್ನು ಮಾಡುತ್ತವೆ’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯು ಮಂಗಳೂರಿನ ಅಶೋಕ ನಗರದಲ್ಲಿ ಆರಂಭಿಸಿರುವ ನೂತನ ಶಾಲೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ವ್ಯಾಪಾರ– ವಹಿವಾಟು, ಭವ್ಯ ಕಟ್ಟಡಗಳ ನಿರ್ಮಾಣ, ಉದ್ದಿಮೆಗಳ ಸ್ಥಾಪನೆ ಮುಂತಾಗಿ ಬೇರೆ ಬೇರೆ ವಿಧಗಳಲ್ಲಿ ಮಂಗಳೂರು ನಗರ ಬೆಳೆಯುತ್ತಿದೆ. ಒಂದು ನಗರಕ್ಕೆ ಇವಿಷ್ಟೇ ಸಾಕಾಗುವುದಿಲ್ಲ. ಒಟ್ಟಾರೆ ಸಮತೋಲನ ಕಾಯ್ದುಕೊಳ್ಳಲು ಒಳ್ಳೆಯ ಶಿಕ್ಷಣ ವ್ಯವಸ್ಥೆಗಳೂ ಇರಬೇಕು. ಮಂಗಳೂರಿನ ಸಮತೋಲನ ಕಾಪಾಡುವಂಥ ಕೆಲಸವನ್ನು ನಮ್ಮ ಸಂಸ್ಥೆ ಮಾಡಿದೆ. ದಾನಿಯೊಬ್ಬರು ನೀಡಿದ ಭೂಮಿಯಲ್ಲಿ ₹15 ಕೋಟಿ ವೆಚ್ಚದಲ್ಲಿ ಭವ್ಯವಾಗಿರುವ ಶಾಲಾ ಕಟ್ಟಡವನ್ನು ನಿರ್ಮಿಸಲಾಗಿದೆ. ಜನರ ನಿರೀಕ್ಷೆಗೆ ತಕ್ಕಂತೆ ಮೌಲ್ಯಯುತವಾದ ಶಿಕ್ಷಣವನ್ನು ನೀಡಲು ಸಕಲ ವ್ಯವಸ್ಥೆಗಳನ್ನು ಮಾಡುತ್ತೇವೆ’ ಎಂದರು.

ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ. ಖಾದರ್‌ ಮಾತನಾಡಿ, ‘ದೇಶದ ಭವಿಷ್ಯ ರೂಪುಗೊಳ್ಳುವುದು ಶಾಲಾ ಕೊಠಡಿಗಳಲ್ಲಿ. ಧರ್ಮಸ್ಥಳದ ಸಂಸ್ಥೆಯು ತನ್ನ ಶಿಕ್ಷಣ ಸಂಸ್ಥೆಗಳ ಮೂಲಕ ಭವಿಷ್ಯದ ಉತ್ತಮ ನಾಗರಿಕರನ್ನು ರೂಪಿಸುತ್ತಿದೆ. ಪರೋಕ್ಷವಾಗಿ ಈ ಸಂಸ್ಥೆಯ ಸೇವೆಯು ದೇಶ ಕಟ್ಟುವ ಕೆಲಸವಾಗಿದೆ’ ಎಂದರು.

‘ಶೈಕ್ಷಣಿಕ ಕೆಂದ್ರ’ ಎಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮಂಗಳೂರಿನ ಮುಕುಟಕ್ಕೆ ಈ ಶಾಲೆ ಇನ್ನೊಂದು ಗರಿಯಾಗಲಿದೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್‌ ಶೆಟ್ಟಿ ಹೇಳಿದರು. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್‌, ಧರ್ಮಸ್ಥಳದ ಸಮಾಜ ಸೇವಾ ಕಾರ್ಯಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳ ಕೆಲಸಗಳನ್ನು ಶ್ಲಾಘಿಸಿದರು. ಮೇಯರ್‌ ಪ್ರೇಮಾನಂದ ಶೆಟ್ಟಿ, ಡಿಡಿಪಿಐ ಮಲ್ಲೇಸ್ವಾಮಿ, ಪಾಲಿಕೆ ಸದಸ್ಯ ಕಿರಣ್‌ ಕುಮಾರ್‌ ಇದ್ದರು.

ಪ್ರಾಂಶುಪಾಲ ಜಾಯ್‌ ಜೀವನ್‌ ರೈ ಸ್ವಾಗತಿಸಿದರು. ಶಿಕ್ಷಣ ಸಂಯೋಜಕಿ ಉಷಾ ಹೆಗ್ಡೆ ವಂದಿಸಿದರು. ಶಾಲೆಗೆ ಭೂಮಿಯನ್ನು ದೇಣಿಗೆಯಾಗಿ ನೀಡಿರುವ ಯು. ರಾಮಕೃಷ್ಣ ಮಲ್ಯ ಅವರ ಕುಟುಂಬದವರನ್ನು ಸನ್ಮಾನಿಸಲಾಯಿತು.

‘ಮಾನವೀಯತೆ ಬೆಳೆಸಿ’
‘ಮಕ್ಕಳ ಅಂಕದ ಕಡೆಗೆ ಪೋಷಕರು ಹೆಚ್ಚು ಗಮನ ಕೊಡುತ್ತಾರೆ. ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಮಾನವೀಯ ಗುಣಗಳನ್ನು ಬೆಳೆಸುವತ್ತಲೂ ಅಷ್ಟೇ ಗಮನ ಹರಿಸಬೇಕು. ಅಂಕಗಳ ಜತೆಗೆ ಒಳ್ಳೆಯ ಗುಣ ನಡತೆಗಳಿದ್ದರೆ ಮಾತ್ರ ಸರ್ವತೋಮುಖ ಏಳಿಗೆ ಸಾಧ್ಯವಾಗುತ್ತದೆ’  ಎಂದು ಶಾಲೆಯನ್ನು ಉದ್ಘಾಟಿಸಿದ ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎಲ್‌. ವಿನಯ ಹೆಗ್ಡೆ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.