ಮಂಗಳೂರು: ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ವಿವಿಧ ಮಠಗಳ ಸ್ವಾಮೀಜಿಗಳು ಧ್ವನಿ ಎತ್ತಿದ್ದಾರೆ. ಹಿಂದೂಗಳ ಮೇಲಿನ ಹಿಂಸಾಚಾರ ನಿಲ್ಲಿಸಲು ಕೇಂದ್ರ ಸರ್ಕಾರ ಹಾಗು ವಿಶ್ವ ಸಂಸ್ಥೆ ಮಧ್ಯಪ್ರವೇಶಿಸಬೇಕು ಎಂದೂ ಸ್ವಾಮೀಜಿಗಳು ವಿಡಿಯೊ ಸಂದೇಶಗಳನ್ನು ಹಂಚಿಕೊಳ್ಳುವ ಮೂಲಕ ಆಗ್ರಹಿಸಿದ್ದಾರೆ.
‘ಹಿಂದೂಗಳು ಕಳವಳಪಡಬೇಕಾದ ಸ್ಥಿತಿ’
ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ’ನಮ್ಮ ಪಕ್ಕದ ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಕಂಡು ಖೇದವಾಗಿದೆ. ಅಷ್ಟೇ ಅಲ್ಲ, ನಮ್ಮ ದೇಶದಲ್ಲಿ ಇರುವ ಹಿಂದೂಗಳೂ ಕಳವಳಪಡಬೇಕಾದ ಸ್ಥಿತಿ ಇದೆ. ಪಕ್ಕದ ದೇಶದಲ್ಲಿ ಅಷ್ಟೇ ಅಲ್ಲ; ಸ್ವದೇಶದಲ್ಲೂ ಹಿಂದೂಗಳ ಮೇಲಿನ ಆಕ್ರಮಣ ಅತಿಯಾಗಿದೆ. ಅದರ ವಿರುದ್ಧ ಸೊಲ್ಲೆತ್ತುವವರನ್ನು ದಮನಿಸುವ ಪ್ರವೃತ್ತಿಯನ್ನು ಕಾಣುತ್ತಿದ್ದೇವೆ. ಸಮಾಜದ ಎಲ್ಲರೂ ಈ ಬಗ್ಗೆ ಜಾಗೃತರಾಗಬೇಕು. ಯಾವ ಸರ್ಕಾರವನ್ನೂ ನಾವು ಆಕ್ಷೇಪಿಸುವ ಹಂತದಲ್ಲಿಲ್ಲ. ನಾವು ದೇವರಿಗೇ ಶರಣಾಗೋಣ. ಸಮಾಜದಲ್ಲಿ ಶಾಂತಿ ಸುಭಿಕ್ಷೆ ನೆಲಸುವಂತೆ ಪ್ರಾರ್ಥಿಸೋಣ’ ಎಂದು ತಿಳಿಸಿದ್ದಾರೆ.
‘ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಡಲಿ’
ಉಡುಪಿಯ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ, ‘ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಬಹಳ ಕಳವಳಕಾರಿಯಾಗಿವೆ. ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ವಿಶ್ವದಾದ್ಯಂತ ಹಿಂದೂಗಳ ಮೇಲೆ ಆಕ್ರಮಣ ಹಾಗೂ ದಬ್ಬಾಳಿಕೆಯನ್ನು ಗಮನಿಸಿದಾಗ, ಈ ಬಗ್ಗೆ ನಾವು ಏನಾದರೂ ಮಾಡಲೇ ಬೇಕಾದ ಸ್ಥಿತಿ ಇದೆ. ಕಾಶ್ಮೀರದಲ್ಲಿ ಈ ಹಿಂದೆ ಏನು ನಡೆದಿತ್ತೋ, ಅದನ್ನು ಬಾಂಗ್ಲಾದಲ್ಲಿ ಕಾಣುತ್ತಿದ್ದೇವೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಡಬೇಕು. ಇಂತಹ ಘಟನೆ ತಡೆಯಲು ಪರಿಣಾಮಕಾರಿ ಹಾಗೂ ಶಾಶ್ವತ ಕ್ರಮ ಕೈಗೊಳ್ಳಬೇಕು. ಹಿಂದೂ ಸಂಸ್ಕೃತಿ ಉಳಿಸುವುದು ಹಿಂದೂಗಳೆಲ್ಲರ ಕರ್ತವ್ಯ. ಇಂತಹ ಘಟನೆಗಳಿಂದ ಹಿಂದೂಗಳೆಲ್ಲರೂ ಜಾಗೃತರಾಗಬೇಕು ಹಾಗೂ ಸ್ಪಂದಿಸಬೇಕು’ ಎಂದು ಒತ್ತಾಯಿಸಿದ್ದಾರೆ.
‘ಹಿಂದೂಗಳ ರಕ್ಷಣೆಗೆ ಭಾರತ ಒತ್ತಾಯಿಸಲಿ’
ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ‘ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದಿಂದ ದಿಗ್ಭ್ರಮೆಯಾಗುತ್ತಿದೆ. ಪ್ರಪಂಚದ ಬೇರೆ ಬೇರೆ ಕಡೆಯೂ ಹಿಂದೂಗಳ ಪರಿಸ್ಥಿತಿ ಭಯಾನಕವಾಗಿದೆ. ಹಿಂದೂ ದೇವಸ್ಥಾನಗಳ ಲೂಟಿ, ಹಿಂದೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ, ಕೊಲೆಗಳಾಗುತ್ತಿವೆ. ಯಾವುದೇ ಭೀತಿ ಇಲ್ಲದೇ ನಿಷ್ಕಾರುಣ್ಯವಾಗಿ ಇಂತಹ ಕೃತ್ಯ ನಡೆಸುತ್ತಿರುವುದನ್ನು ನೋಡಿ ನೋವಾಗುತ್ತಿದೆ. ಮನುಷ್ಯರಿಗೆ ಇಂತಹ ಮನಸ್ಥಿತಿಯೂ ಇರುತ್ತದೆಯೇ ಎಂದು ಆಶ್ಚರ್ಯವಾಗುತ್ತಿದೆ. ಈ ಕ್ರೌರ್ಯದ ಪರಾಕಾಷ್ಠೆಯಿಂದಾಗಿ ಅಲ್ಪಸಂಖ್ಯಾತರು ಬದುಕುವುದೇ ಕಷ್ಟ ಎಂಬ ಸ್ಥಿತಿಯಲ್ಲಿ ಒದ್ದಾಡುತ್ತಿದ್ದಾರೆ. ಹಿಂದೂ ಮಂದಿಗೆ ಬಲವಾದ ಆಶ್ರಯ ನೀಡಬೇಕು. ಅಲ್ಲಿನ ಪ್ರಧಾನಿಯವರು ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ವಹಿಸಬೇಕು. ಭಾರತವೂ ಈ ಬಗ್ಗೆ ಒತ್ತಾಯಿಸಬೇಕು. ಇನ್ನೂ ಹೆಚ್ಚಿನ ದುರಂತ ಸಂಭವಿಸುವುದಕ್ಕೆ ಮುನ್ನ ಅಲ್ಲಿನ ಅಲ್ಪಸಂಖ್ಯಾತರ ರಕ್ಷಣೆಗೆ ಕ್ರಮವಹಿಸಬೇಕು ವಿಶ್ವ ಸಂಸ್ಥೆ ಹಾಗೂ ಮಾನವ ಹಕ್ಕು ಆಯೋಗ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಹಿಂದೂಗಳ ರಕ್ಷಣೆಗೆ ಕಟಿಬದ್ಧವಾಗಬೇಕು’ ಎಂದು ಒತ್ತಾಯಿಸಿದ್ದಾರೆ.
‘ವಿಶ್ವ ಸಂಸ್ಥೆ ಮೇಲೆ ಭಾರತಒತ್ತಡ ಹೇರಲಿ’
ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ‘ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಕಠೋರ ಶಬ್ಧಗಳಿಂದ ಖಂಡಿಸುತ್ತೇನೆ. ಹಿಂದೂಗಳ ಮೇಲೆ ಅಮಾನುಷವಾಗಿ ಹಾಗೂ ನಿರ್ಲಜ್ಜವಾಗಿ ನಡೆಸುತ್ತಿರುವ ದೌರ್ಜನ್ಯವನ್ನು ತಡೆಯಲು ಅಲ್ಲಿನ ಮೊಹಮ್ಮದ್ ಯೂನುಸ್ ನೇತೃತ್ವದ ಸರ್ಕಾರ ಕ್ರಮವಹಿಸಬೇಕು. ಬಾಂಗ್ಲಾದಲ್ಲಿ ಹೋರಾಟ ನಡೆದದ್ದು ಮೀಸಲಾತಿ ವಿಚಾರವಾಗಿ. ಅದು ದಂಗೆಯಾಗಿ ಪರಿವರ್ತನೆಯಾಗಿ ಅಲ್ಪಸಂಖ್ಯಾತರಾದ ಹಿಂದೂಗಳ ಮೇಳೆ ಅತ್ಯಾಚಾರ ಕೊಲೆ ಮಾಡುವ ದಾರ್ಷ್ಟ್ಯದ ರಾಜಕಾರಣ ಬಾಂಗ್ಲಾದಲ್ಲಿ ನಡೆಯುತ್ತಿರುವುದನ್ನು ಕಂಡು ತುಂಬಾ ನೋವಾಗುತ್ತಿದೆ. ಅಂತಹ ದುಷ್ಟರಿಗೆ ನೀಚರಿಗೆ ಬುದ್ಧಿ ಕರುಣಿಸು ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ನಿರಾಶ್ರಿತ ಹಿಂದೂಗಳಿಗೆ ಪುನರ್ವಸತಿ ಕಲ್ಪಿಸಬೇಕು. ಹಿಂದೂಗಳ ಮೇಲೆ ದಬ್ಬಾಳಿಕೆ ತಡೆಯಲು ವಿಶ್ವ ಸಂಸ್ಥೆಯ ಮೇಲೆ ಭಾರತ ಸರ್ಕಾರ ಒತ್ತಡವನ್ನು ಹೇರಬೇಕು. ವಿಶ್ವಸಂಸ್ಥೆಯು ಮಧ್ಯಪ್ರವೇಶಿಸಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ನಿಲ್ಲಿಸಬೇಕು‘ ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.