ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತೂರು | ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಪ್ರೌಢಶಾಲೆ ಶಿಕ್ಷಕನ ಬಂಧನ

Last Updated 16 ಅಕ್ಟೋಬರ್ 2019, 14:15 IST
ಅಕ್ಷರ ಗಾತ್ರ

ಮಂಗಳೂರು: ಎಸ್ಎಸ್‌ಎಲ್‌ಸಿ ಅನುತ್ತೀರ್ಣಳಾಗಿದ್ದ ವಿದ್ಯಾರ್ಥಿನಿ ಮರು ಪರೀಕ್ಷೆ ಬರೆಯಲು ಶುಲ್ಕ ಪಾವತಿಗೆ ಬಂದಿದ್ದ ವೇಳೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪುತ್ತೂರು ತಾಲ್ಲೂಕಿನ ಸರ್ಕಾರಿ ಪ್ರೌಢ ಶಾಲೆಯೊಂದರ ಪ್ರಭಾರ ಮುಖ್ಯ ಶಿಕ್ಷಕನನ್ನು ಬುಧವಾರ ಬಂಧಿಸಲಾಗಿದೆ.

ಪುತ್ತೂರು ತಾಲ್ಲೂಕಿನ ಒಳಮೊಗ್ರು ಸಮೀಪದ ಪರ್ಪುಂಜ ನಿವಾಸಿ ನಝೀರ್‌ (40) ಬಂಧಿತ ಆರೋಪಿ. ಈತ ಪುತ್ತೂರು ಪೊಲೀಸ್‌ ಠಾಣೆ ವ್ಯಾಪ್ತಿಯ ಸರ್ಕಾರಿ ಪ್ರೌಢ ಶಾಲೆಯೊಂದರ ಪ್ರಭಾರ ಮುಖ್ಯ ಶಿಕ್ಷಕನಾಗಿದ್ದ. ಭಾರತೀಯ ದಂಡ ಸಂಹಿತೆಯ ಸೆಕ್ಸನ್‌ 354–ಎ (ಲೈಂಗಿಕ ಉದ್ದೇಶದಲ್ಲಿ ಅಶ್ಲೀಲ ಮಾತುಗಳನ್ನು ಆಡುವುದು) ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್‌ 12ರ (ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ) ಅಡಿಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

‘ವಿದ್ಯಾರ್ಥಿನಿಯು ಮರು ಪರೀಕ್ಷೆ ಬರೆಯುವ ಉದ್ದೇಶದಿಂದ ಸೋಮವಾರ ಪರೀಕ್ಷಾ ಶುಲ್ಕ ಪಾವತಿಸಲು ಬಂದಿದ್ದಳು. ಆಗ ಆರೋಪಿ ಶಿಕ್ಷಕ ಜೀವ ವಿಜ್ಞಾನ ವಿಷಯದಲ್ಲಿ ಸಂತಾನೋತ್ಪತ್ತಿ ಕುರಿತ ಪಾಠ ಮಾಡುವುದಾಗಿ ಹೇಳಿ ಆಕೆಯೊಂದಿಗೆ ಲೈಂಗಿಕ ಉದ್ದೇಶದಲ್ಲಿ ಮಾತನಾಡಿದ್ದಾನೆ. ಅನುಚಿತವಾಗಿ ವರ್ತಿಸಿದ್ದಾನೆ. ಈ ಕುರಿತು ಬಾಲಕಿ ನೀಡಿದ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿ, ಆತನನ್ನು ಬಂಧಿಸಲಾಗಿದೆ’ ಎಂದು ಪುತ್ತೂರು ಉಪ ವಿಭಾಗದ ಡಿವೈಎಸ್‌ಪಿ ದಿನಕರ ಶೆಟ್ಟಿ ತಿಳಿಸಿದರು.

ಸಂತ್ರಸ್ತೆಯು ಮೇ ತಿಂಗಳಿನಲ್ಲಿ ಮರು ಪರೀಕ್ಷೆ ಅರ್ಜಿ ಸಲ್ಲಿಕೆ ಸಂಬಂಧ ಶಾಲೆಗೆ ಬಂದಿದ್ದಳು. ಆಗಲೂ ಆಕೆಯೊಂದಿಗೆ ಇದೇ ರೀತಿ ಕಿರುಕುಳ ನೀಡಿದ್ದ. ಸೋಮವಾರ ಮತ್ತೊಮ್ಮೆ ದೌರ್ಜನ್ಯ ನಡೆಸಿದ್ದಾನೆ. ಈ ಕುರಿತು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT