ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಬೇಡ ನೀತಿಯ ಕಟ್ಟುಪಾಡು ಇರಲಿ: ಮೋಹನದಾಸ್ ಪರಮಹಂಸ ಸ್ವಾಮೀಜಿ

ಶ್ರೀರಾಮೋತ್ಸವದ ಧಾರ್ಮಿಕ ಸಭೆಯಲ್ಲಿ ಮಾಣಿಲ ಶ್ರೀಗಳು
Last Updated 31 ಮಾರ್ಚ್ 2023, 5:57 IST
ಅಕ್ಷರ ಗಾತ್ರ

ಮಂಗಳೂರು: ಸ್ವಾರ್ಥಕ್ಕಾಗಿ ಹಿಂದೂಗಳ ನಡುವೆ ಕೆಲವರು ಒಡಕು ತಂದು ಸಮಾಜ ಒಡೆಯಲು ಪ್ರಯತ್ನಿಸುತ್ತಿದ್ದಾರೆ. ಈ ದುಷ್ಟ ಶಕ್ತಿಗಳನ್ನು ನಿಗ್ರಹಿಸಲು ಜಾತಿಯನ್ನು ಬಿಟ್ಟು ನೀತಿಯ ಕಟ್ಟುಪಾಡಿನೊಂದಿಗೆ ಬದುಕನ್ನು ಕಟ್ಟಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಮಹಾಲಕ್ಷ್ಮಿ ಕ್ಷೇತ್ರ ಶ್ರೀಧಾಮ ಮಾಣಿಲದ ಮೋಹನದಾಸ್ ಪರಮಹಂಸ ಸ್ವಾಮೀಜಿ ಹೇಳಿದರು.

ವಿಶ್ವಹಿಂದೂ ಪರಿಷತ್ ಮತ್ತು ಶ್ರೀ ರಾಮೋತ್ಸವ ಸಮಿತಿ ಜಂಟಿಯಾಗಿ ನಗರದ ಕದ್ರಿ ಮೈದಾನದಲ್ಲಿ ಆಯೋಜಿಸಿರುವ ‘ಶ್ರೀರಾಮೋತ್ಸವ‘ದ ಎರಡನೇ ದಿನ ಗುರುವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ‘ಹಿಂದೂ ಸಮಾಜದಲ್ಲಿ ಜಾತಿ ಎನ್ನುವ ಪ್ರಭಾವ ಬೇಡ. ಸಾಧು–ಸಂತರ ನಡುವೆ ಭೇದ ಇರಬಾರದು. ಎಲ್ಲರೂ ನಮ್ಮವರು ಎಂಬ ಭಾವನೆ ಇರಬೇಕು. ಈ ದೇಶ ರಕ್ಷಣೆಯ ಬದ್ಧತೆಯನ್ನು ಹೊಂದಿರುವ ಸಾಧು– ಸಂತರ ಸೇವೆ ಮನೆ–ಮನೆಗೆ ತಲುಪಬೇಕು’ ಎಂದರು.

ದೇಶದ ಭವಿಷ್ಯಕ್ಕಾಗಿ ಮಕ್ಕಳಲ್ಲಿ ದೇಶಪ್ರೇಮ, ಮಣ್ಣಿನ ಅಂತಃಸತ್ವವನ್ನು ಶಿಶುಮಂದಿರಗಳು, ಸಂಸ್ಕಾರ ಕೇಂದ್ರಗಳ ಮೂಲಕ ತಲುಪಿಸುವ ಅಗತ್ಯವಿದೆ. ಮಕ್ಕಳಿಗೆ ಸಂಪತ್ತು ಮಾಡುವುದಕ್ಕಿಂತ ಮಕ್ಕಳನ್ನೇ ಸಂಪತ್ತಾಗಿ ಮಾಡಬೇಕು. ಮಂಗಳೂರಿನ ಗರೋಡಿ ಸಮೀಪ ನಡೆದ ಕುಕ್ಕರ್ ಬಾಂಬ್ ಸ್ಫೋಟದಂತಹ ಪ್ರಕರಣ ನಮ್ಮ ಮನೆಯ ಪರಿಸರದಲ್ಲೂ ಆಗಬಹುದು. ಭವಿಷ್ಯದಲ್ಲಿ ಇಂತಹ ಘಟನೆಗಳು ಘಟಿಸಬಾರದೆಂದರೆ ಹಿಂದೂಗಳು ಸಂಘಟಿತರಾಗಬೇಕು ಎಂದು ಹೇಳಿದರು.

ವಿಶ್ವ ಹಿಂದೂ ಪರಿಷತ್ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ.ಪುರಾಣಿಕ್ ಮಾತನಾಡಿ, ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ರಾಮಮಂದಿರದಲ್ಲಿ ರಾಮನ ವಿಗ್ರಹದ ಪೂಜೆ ಆರಂಭವಾಗುವವರೆಗೆ ಮಾತ್ರ ನಮ್ಮ ಹೋರಾಟವಲ್ಲ. ಭಾರತ ರಾಮರಾಜ್ಯವಾಗಬೇಕು. ರಾಮರಾಜ್ಯದ ಸುಖವನ್ನು ಭಾರತೀಯರು ಅನುಭವಿಸಬೇಕು. ನಮ್ಮ ರಾಷ್ಟ್ರ ಹಿಂದೂ ರಾಷ್ಟ್ರವಾಗಿ ಘೋಷಣೆಯಾಗಬೇಕು. ಅಲ್ಲಿಯ ತನಕ ಹೋರಾಟ ನಡೆಸಬೇಕು. ಹಿಂದೂ ಸಮಾಜದಲ್ಲಿ ನಮ್ಮನ್ನು ಬೇರ್ಪಡಿಸುವ ಶಕ್ತಿಗಳು ವಿಜೃಂಭಿಸುತ್ತಿವೆ. ಸಮಾನ ನಾಗರಿಕತೆ ಕಾನೂನು ಜಾರಿಗೆ ಬರದಿದ್ದಲ್ಲಿ ಹಿಂದೂಗಳಿಗೆ ಮುಂದಿನ ದಿನಗಳಲ್ಲಿ ಕಷ್ಟ ಎದುರಾಗಲಿದೆ’ ಎಂದು ಎಚ್ಚರಿಸಿದರು.

ಪ್ರಮುಖರಾದ ಸುನಿಲ್ ಆಚಾರ್, ಜಿತೇಂದ್ರ ಕೊಟ್ಟಾರಿ, ರತ್ನಾಕರ ಜೈನ್, ಸಮೀರ್ ಪುರಾಣಿಕ್, ಪುಷ್ಪರಾಜ್ ಜೈನ್, ರಾಜಗೋಪಾಲ್ ರೈ, ವಿಶ್ವನಾಥ ಕದ್ರಿ, ಗಣೇಶ್ ಪೊದುವಾಳ್, ಸಂಜೀವ ಸೂಟರಪೇಟೆ, ಪುನೀತ್ ಅತ್ತಾವರ, ದೇವೇಂದ್ರ ಹೆಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT