ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಉಪವಿಭಾಗದಲ್ಲೂ ಸಾಮಾಜಿಕ ಜಾಲತಾಣ ನಿಗಾ ಕೋಶ

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಕ್ರಮ್‌ ಅಮಟೆ ಭರವಸೆ
Last Updated 4 ಫೆಬ್ರುವರಿ 2023, 11:25 IST
ಅಕ್ಷರ ಗಾತ್ರ

ಮಂಗಳೂರು: ‘ದ್ವೇಷ ಹರಡುವುದು, ಪ್ರಚೋದ‌ನಾಕಾರಿ ಸಂದೇಶಗಳನ್ನು ಹರಡುವುದರ ಮೇಲೆ ನಿಗಾ ಇಡಲು ಜಿಲ್ಲಾ ಪೊಲೀಸ್‌ ವತಿಯಿಂದ ಪುತ್ತೂರು ಮತ್ತು ಬಂಟ್ವಾಳ ಉಪವಿಭಾಗದ ಮಟ್ಟದಲ್ಲೂ ಸಾಮಾಜಿಕ ಜಾಲತಾಣ ನಿಗಾ ಕೋಶವನ್ನು ಬಲಪಡಿಸಲಿದ್ದೇವೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ವಿಕ್ರಮ್‌ ಅಮಟೆ ತಿಳಿಸಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಜಿಲ್ಲೆಯ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಸಂದೇಶಗಳನ್ನು ಹಾಗೂ ದಾರಿತಪ್ಪಿಸುವ ಗಾಳಿ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವವರ ವಿರುದ್ಧವೂ ಕ್ರಮ ಕೈಗೊಳ್ಳಲಿದ್ದೇವೆ. ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಲು ಹಾಗೂ ಅದರಲ್ಲಿ ಹಂಚಿಕೊಳ್ಳುವ ಸಂದೇಶಗಳ ಸತ್ಯಾಸತ್ಯತೆ ಪರಿಶೀಲಿಸಲು ಆಯ್ದ ಪೊಲೀಸ್‌ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ. ಪ್ರಚೋದನಾಕಾರಿ ಸಂದೇಶ ಹಂಚಿಕೊಳ್ಳುವುದರ ಹಿಂದಿನ ಉದ್ದೇಶವನ್ನು ತಿಳಿಯುವ ಪ್ರಯತ್ನಗಳು ನಡೆಯಲಿವೆ. ಅಂತಹ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದರ ಹಿಂದೆ ದುರುದ್ದೇಶ ಇರುವುದು ಕಂಡುಬಂದರೆ ತಪ್ಪಿತಸ್ಥರ ವಿರುದ್ಧ ಮೊಕದ್ದಮೆಯನ್ನೂ ದಾಖಲಿಸಿಕೊಳ್ಳಲಿದ್ದೇವೆ’ ಎಂದರು.

‘ಅಪರಾಧ ಚಟುವಟಿಕೆ ತಡೆಯುವ ಸಲುವಾಗಿ, ಕಿಡಿಗೇಡಿಗಳು, ದುಷ್ಕರ್ಮಿಗಳ ಚಟುವಟಿಕೆ ಮೇಲೆ ನಿಗಾ ಇಡುತ್ತೇವೆ. ಸದ್ಯಕ್ಕೆ ನಮ್ಮ ಮುಂದಿರುವ ದೊಡ್ಡ ಸವಾಲೆಂದರೆ ಮುಂಬರುವ ವಿಧಾನಸಭಾ ಚುನಾವಣೆ. ಜಿಲ್ಲೆಯಲ್ಲಿರುವ ಶಿಕ್ಷೆಗೊಳಪಟ್ಟಿರುವ ಅಪರಾಧಿಗಳು, ಗಲಾಟೆ ಸೃಷ್ಟಿಸುವವರ ಚಲನವಲನಗಳ ಮೇಲೆ ಕಣ್ಗಾವಲು ಹೆಚ್ಚಿಸುತ್ತೇವೆ. ರೌಡಿ ಪಟ್ಟಿಯಲ್ಲಿ ಹೆಸರಿರುವವರ ಪೆರೇಡ್‌ ಹಾಗೂ ಗುಂಪು ಪೆರೇಡ್‌ಗಳ ಮಾದರಿಯಲ್ಲೇ ವಿಶೇಷ ಅಭಿಯಾನಗಳನ್ನು ಹಮ್ಮಿಕೊಳ್ಳಲಿದ್ದೇವೆ’ ಎಂದರು.

‘ಸಂಘಟಿತ ಅಪರಾಧವನ್ನು ಸಹಿಸುವುದಿಲ್ಲ. ಇದರಿಂದ ಕಾನೂನು ಸುವ್ಯವಸ್ಥೆ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ. ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರನ್ನು ವಿಶ್ವಾಸಕ್ಕೆ ಪಡೆದು ಸಮುದಾಯ ಪೊಲೀಸಿಂಗ್‌ ಚಟುವಟಿಕೆಯನ್ನೂ ಹೆಚ್ಚಿಸುತ್ತೇವೆ’ ಎಂದರು.

‘ಮಕ್ಕಳು ಬೇರೆ ಊರಿನಲ್ಲಿದ್ದು ಹಿರಿಯ ನಾಗರಿಕರು ಮಾತ್ರ ಗ್ರಾಮೀಣ ಪ್ರದೇಶಗಳಲ್ಲಿ ಒಂಟಿ ಮನೆಗಳಲ್ಲಿ ವಾಸವಿದ್ದರೆ, ಅಂತಹವರಿಗೆ ನೆರವಾಗುವ ಉದ್ದೇಶದಿಂದ‌ ಗಸ್ತು ವ್ಯವಸ್ಥೆಯನ್ನು ಬಲಪಡಿಸುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುಳ್ಯ, ವಿಟ್ಲ ಹಾಗೂ ‍ಪುತ್ತೂರು ಪ್ರದೇಶದ ಅಂತರರಾಜ್ಯ ಗಡಿಗಳಲ್ಲಿ ತಪಾಸಣಾ ಠಾಣೆಗಳನ್ನು ಬಲಪಡಿಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು,‘ಈ ತಪಾಸಣೆ ಠಾಣೆಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಹಾಗೂ ಭದ್ರತಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸುತ್ತೇವೆ. ಇನ್ನಷ್ಟು ಸೌಕರ್ಯಗಳನ್ನು ಒದಗಿಸುವ ಅಗತ್ಯ ಕಂಡುಬಂದರೆ ಜಿಲ್ಲಾಧಿಕಾರಿ ಗಮನಕ್ಕೆ ತಂದು ಕ್ರಮಕೈಗೊಳ್ಳುತ್ತೇವೆ’ ಎಂದರು.

‘ಉಪ್ಪಿನಂಗಡಿ ಬಿಳಿಯೂರು ಸೇತುವೆ ಬಳಿ ಹುಡುಗರು ಹಾಗೂ ಹುಡುಗಿಯರು ಜೊತೆಯಲ್ಲಿರುವ ಬಗ್ಗೆ ಶುಕ್ರವಾರ ಸಂಜೆ ಮಾಹಿತಿ ಬಂದಿತ್ತು. ಅಲ್ಲಿ ಇಬ್ಬರು ಯುವತಿ ಹಾಗೂ ವಿದ್ಯಾರ್ಥಿ ಪತ್ತೆಯಾಗಿದ್ದಾರೆ. ಅವರನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದೆ. ಪೋಷಕರನ್ನು ಕರೆಸಿ ಅವರಿಂದ ಮಾಹಿತಿ ಪಡೆದಿದ್ದೇವೆ. ಸಾರ್ವಜನಿಕರಿಂದ ಬಂದ ದೂರಿನ ಆಧಾರದಲ್ಲಿ ಈ ಪ್ರದೇಶದಲ್ಲಿ ಗಸ್ತು ಬಲಪಡಿಸಲು ಹಾಗೂ ಪಹರೆ ಹೆಚ್ಚಸಲು ಕ್ರಮಕೈಗೊಳ್ಳಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

****

‘ಸಂಚಾರ ನಿಯಮ ಉಲ್ಲಂಘಿಸುವವರಿಗೆ ಕೌನ್ಸೆಲಿಂಗ್‌’

ಸಂಚಾರ ನಿಯಮ ಪಾಲನೆಯ ಮಹತ್ವದ ಜಾಗೃತಿ ಮೂಡಿಸುವುದಕ್ಕೂ ಪೊಲೀಸರು ಮಹತ್ವ ನೀಡಲಿದ್ದಾರೆ. ಸಂಚಾರ ನಿಯಮಗಳನ್ನು ಪದೇ ಪದೇ ಉಲ್ಲಂಘಿಸುವವರು, ಅದರಲ್ಲೂ ಮುಖ್ಯವಾಗಿ ಹೆಲ್ಮೆಟ್‌ ಧರಿಸದೆಯೇ ದ್ವಿಚಕ್ರವಾಹನ ಚಲಾಯಿಸುವವರನ್ನು ಪತ್ತೆ ಮಾಡಿ, ಅವರಿಗೆ ಆಪ್ತಸಮಾಲೋಚನೆ ನಡೆಸುವ ಮೂಲಕ ಜಾಗೃತಿ ಮೂಡಿಸಲಿದ್ದೇವೆ’ ಎಂದು ವಿಕ್ರಮ್‌ ಅಮಟೆ ತಿಳಿಸಿದರು.

****

‘ಸ್ಯಾಟಲೈಟ್‌ ಪೋನ್‌ ಕರೆ–ಸಮಗ್ರ ತನಿಖೆ’


ಜಿಲ್ಲೆಯಲ್ಲಿ ಪದೇಪದೇ ಸ್ಯಾಟಲೈಟ್‌ ಫೋನ್‌ ಕರೆಗಳ ಸದ್ದು ಮೊಳಗುವ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ , ‘ಕಾಡಿನಲ್ಲಿ ಸ್ಯಾಟಲೈಟ್‌ ಪೋನ್‌ ಕರೆಗಳನ್ನು ಮಾಡುವುದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಗುಪ್ತವಾರ್ತೆ ವಿಭಾಗ, ರಾಷ್ಟ್ರಿಯ ತನಿಖಾ ಸಂಸ್ಥೆ (ಎನ್‌ಐಎ) ಹಾಗೂ ನಕ್ಷಲ್‌ ನಿಗ್ರಹ ದಳ (ಎಎನ್‌ಎಫ್‌) ಹಾಗೂ ಪೊಲೀಸರು ಸಮಗ್ರವಾಗಿ ಈ ಬಗ್ಗೆ ತನಿಖೆ ನಡೆಸಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT