ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿಬದಿ ವ್ಯಾಪಾರಿಗಳಿಂದ ಸಿ.ಎಂ.ಗೆ ಮನವಿ

Last Updated 17 ಮಾರ್ಚ್ 2023, 6:12 IST
ಅಕ್ಷರ ಗಾತ್ರ

ಮಂಗಳೂರು: ಇಲ್ಲಿನ ಪಾಲಿಕೆ ವ್ಯಾಪ್ತಿಯ ಬೀದಿಬದಿ ವ್ಯಾಪಾರಿಗಳಿಗೆ ನಿಯಮಾನುಸಾರ ವ್ಯಾಪಾರ ನಡೆಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಿಗಳ ಶ್ರೇಯೋಭಿವೃದ್ಧಿ ಸಂಘದ ನಿಯೋಗವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಗುರುವಾರ ಮನವಿ ಸಲ್ಲಿಸಿತು.

‘ಪಾಲಿಕೆ ವ್ಯಾಪ್ತಿಯಲ್ಲಿ 2014ರ ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯ ಸಂರಕ್ಷಣೆ ಮತ್ತು ನಿಯಂತ್ರಣ ಕಾಯ್ದೆ ಮತ್ತು 2019ರ ಕರ್ನಾಟಕ ಬೀದಿಬದಿ ವ್ಯಾಪಾರ ನಿಯಮಗಳ ವ್ಯಾಪಾರಕ್ಕೆ ಅವಕಾಶ ನೀಡುತ್ತಿಲ್ಲ. ಅಧಿಕಾರಿಗಳು ಗುರುತಿನ ಚೀಟಿ ಮತ್ತು ಪ್ರಮಾಣ ಪತ್ರಗಳನ್ನು ನೀಡದೆ ಸತಾಯಿಸುತ್ತಿದ್ದಾರೆ. ಹೋರಾಟ ನಡೆಸಿದರೂ, ರಾಜಕೀಯ ಒತ್ತಡದಿಂದಾಗಿ ಬೀದಿಬದಿ ವ್ಯಾಪಾರಿಗಳನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ’ ಎಂದು ಸಂಘದ ಪ್ರಮುಖರು ಮುಖ್ಯಮಂತ್ರಿಯವರಲ್ಲಿ ಅಹವಾಲು ತೋಡಿಕೊಂಡರು.
‘ಮುಖ್ಯಮಂತ್ರಿಗೆ ಅಹವಾಲು ಸಲ್ಲಿಸಲು ಅವಕಾಶ ನೀಡುವುದಕ್ಕೆ ಆರಂಭದಲ್ಲಿ ಪೋಲಿಸರು ಅವಕಾಶ ನಿರಾಕರಿಸಿದರು. ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ನೀಡದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆವು. ಬಳಿಕ 10 ಮಂದಿಯ ನಿಯೋಗವು ಮುಖ್ಯಮಂತ್ರಿಯವರನ್ನು ಭೇಟಿಯಾಗಲು ಅವಕಾಶ ನೀಡಿದರು’ ಎಂದು ಸಂಘದ ಗೌರವಾಧ್ಯಕ್ಷ ಬಿ.ಕೆ.ಇಮ್ತಿಯಾಜ್‌ ತಿಳಿಸಿದರು.

‘ನಮ್ಮಿಂದ ಮನವಿ ಸ್ವೀಕರಿಸಿದ ಮುಖ್ಯಮಂತ್ರಿಯವರು ನಮ್ಮ ಬೇಡಿಕೆ ಈಡೇರಿಸಲು ಕಾನೂನುಪ್ರಕಾರ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ’ ಎಂದರು.

‘ಸ್ವನಿಧಿ ಯೋಜನೆ ಅಡಿಯಲ್ಲಿ ನೀಡಿದ ಸಾಲ ಮರು ಪಾವತಿಗೆ ಹೆಚ್ಚಿನ ಕಾಲಾವಕಾಶ ನೀಡಬೇಕು. 2021ರಲ್ಲಿ ಸಮೀಕ್ಷೆ ನಡೆಸಿ ಗುರುತಿಸಲಾದ 667 ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಬೇಕು. ಪಾಲಿಕೆಯವರು ಬೀದಿ ವ್ಯಾಪಾರಿಗಳ ಮೇಲೆ ನಡೆಸುವ ದೌರ್ಜನ್ಯ ನಿಲ್ಲಿಸಬೇಕು. ಪಟ್ಟಣ ವ್ಯಾಪಾರ ಸಮಿತಿ ಸಭೆ ನಡೆಸಿ ಬೀದಿ ಬದಿ ವ್ಯಾಪಾರಿಗಳ ಸಮಸ್ಯೆ ನೀಗಿಸಲು ಕ್ರಮಕೈಗೊಳ್ಳಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆ’ ಎಂದರು.

ಸಂಘದ ಸಂಸ್ಥಾಪಕ ಸುನಿಲ್ ಕುಮಾರ್ ಬಜಾಲ್, ಅಧ್ಯಕ್ಷರಾದ ಮೊಹಮ್ಮದ್ ಮುಸ್ತಫಾ, ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ, ಮುಖಂಡರಾದ ಆಸೀಫ್ ಬಾವ ಉರುಮನೆ, ಸಂತೋಷ್ ಆರ್.ಎಸ್., ಪ್ರವೀಣ್ ಕದ್ರಿ,ಅಬ್ದುಲ್ ರಹಿಮಾನ್ ಅಡ್ಯಾರ್, ಮೇಬಲ್ ಡಿಸೋಜ, ಸಿದ್ದಮ್ಮ,ಆದಂ ಬಜಾಲ್, ಎಂ.ಕೆ.ರಿಯಾಜ್, ಇಸ್ಮಾಯಿಲ್ ಉಳ್ಳಾಲ, ನೌಷದ್ ಉಳ್ಳಾಲ, ಮೇರಿ ಡಿಸೋಜ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT