ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ವಿದ್ಯಾರ್ಥಿಗಳ ‘ವಸತಿ’ ನಿರೀಕ್ಷೆ ಹುಸಿ

ಹಿಂದುಳಿದ ವರ್ಗಗಳ ಇಲಾಖೆ ಸಚಿವರ ತವರಲ್ಲೇ ಸೀಟು ಕೊರತೆ
Last Updated 5 ಮಾರ್ಚ್ 2021, 2:29 IST
ಅಕ್ಷರ ಗಾತ್ರ

ಮಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ತವರು ಜಿಲ್ಲೆಯಲ್ಲೇ 700ಕ್ಕೂ ಹೆಚ್ಚು ಅರ್ಹ ವಿದ್ಯಾರ್ಥಿಗಳು ವಸತಿ ನಿಲಯದಿಂದ ವಂಚಿತರಾಗುವ ಪರಿಸ್ಥಿತಿ ಎದುರಾಗಿದೆ. ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ಅವಕಾಶ ಪಡೆಯಲು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಜಿಲ್ಲೆಯ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ಸೇರಿ ಐದು ತಾಲ್ಲೂಕುಗಳಲ್ಲಿ ಒಟ್ಟು 72 ವಸತಿ ನಿಲಯಗಳಿವೆ. ಅವುಗಳಲ್ಲಿ 35 ಸ್ವಂತ ಕಟ್ಟಡ ಹೊಂದಿದ್ದರೆ, 37 ಬಾಡಿಗೆ ಕಟ್ಟಡದಲ್ಲಿವೆ. ಈ ವಸತಿ ನಿಲಯಗಳಲ್ಲಿ ಹೊಸತಾಗಿ 2411 ಸೀಟುಗಳು ಲಭ್ಯ ಇದ್ದರೆ, ಪ್ರವೇಶ ಕೋರಿ, 2644 ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳಲ್ಲಿ ಮಂಗಳೂರು ತಾಲ್ಲೂಕು ಒಂದರಲ್ಲೇ 762 ಬಾಲಕಿಯರು ಮತ್ತು 797 ಬಾಲಕರು ಸೇರಿ ಒಟ್ಟು 1559 ವಿದ್ಯಾರ್ಥಿಗಳು ವಸತಿ ನಿಲಯ ಪ್ರವೇಶ ಬಯಸಿ ಅರ್ಜಿ ಹಾಕಿದ್ದಾರೆ. ಆದರೆ, ತಾಲ್ಲೂಕಿನಲ್ಲಿರುವ ವಸತಿ ನಿಲಯಗಳ ಪ್ರಸ್ತುತ ಸಾಮರ್ಥ್ಯದಲ್ಲಿ 818 ಹೊಸ ವಿದ್ಯಾರ್ಥಿಗಳಿಗೆ ಮಾತ್ರ ವಸತಿಗೆ ಅವಕಾಶ ಒದಗಿಸಬಹುದಾಗಿದೆ ಎನ್ನುತ್ತವೆ ಇಲಾಖೆ ಮೂಲಗಳು.

ಈ ಸಂಬಂಧ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸಚಿನ್ ಕುಮಾರ್ ಅವರ ಗಮನ ಸೆಳೆದಾಗ, ‘ಸರ್ಕಾರದ ನಿರ್ದೇಶನದಂತೆ ಎಲ್ಲ ವಸತಿ ನಿಲಯಗಳಲ್ಲಿ ಶೇ 100 ಸೀಟು ಭರ್ತಿ ಮಾಡಲಾಗಿದೆ. ಮಂಗಳೂರು ತಾಲ್ಲೂಕಿನಲ್ಲಿ ಮಾತ್ರ 741 ಹೆಚ್ಚುವರಿ ಅರ್ಜಿಗಳು ಇವೆ. ಉಳಿದ ತಾಲ್ಲೂಕುಗಳಲ್ಲಿ ಒಟ್ಟು 590ರಷ್ಟು ಸೀಟುಗಳು ಖಾಲಿ ಇವೆ’ ಎಂದು ಪ್ರತಿಕ್ರಿಯಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ವಸತಿ ನಿಲಯಗಳಲ್ಲಿ ಶೇ 90ರಷ್ಟು ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಇರುತ್ತಿದ್ದರು. ಈ ಬಾರಿ ಕೋವಿಡ್ ಕಾರಣಕ್ಕೆ ಈ ಮೆಟ್ರಿಕ್ ಪೂರ್ವ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಶೇ 75ರಷ್ಟು ಕಡಿಮೆಯಾಗಿದೆ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಯುವ ವಸತಿ ನಿಲಯಗಳಿಗೆ ತಿಂಗಳಿಗೆ ಸುಮಾರು ₹ 25 ಲಕ್ಷದಷ್ಟು ಬಾಡಿಗೆ ಪಾವತಿಸಲಾಗುತ್ತದೆ. ದುಃಸ್ಥಿತಿಯಲ್ಲಿರುವ ಕಟ್ಟಡಗಳಿಗೆ ಸಹ ಅಧಿಕ ಬಾಡಿಗೆ ಪಾವತಿಯಾಗುತ್ತಿದೆ. ಇದರ ಹಿಂದೆ ಒಳ ಒಪ್ಪಂದ ಇರುವ ಸಾಧ್ಯತೆ ಇದೆ. ಈ ಕುರಿತು ಪರಿಶೀಲನೆ ನಡೆಯಬೇಕು’ ಎಂದು ‍‍ಶಾಸಕ ಸಂಜೀವ ಮಠಂದೂರು ಒತ್ತಾಯಿಸಿದ್ದಾರೆ.

*
ಮಂಗಳೂರು ತಾಲ್ಲೂಕಿನಲ್ಲಿ ವಸತಿ ನಿಲಯಗಳಿಗೆ ಹೆಚ್ಚುವರಿ ಅರ್ಜಿಗಳು ಸಲ್ಲಿಕೆಯಾಗಿರುವ ವಿಚಾರವನ್ನು ಸಚಿವರ ಗಮನಕ್ಕೆ ತರಲಾಗಿದೆ.
– ಸಚಿನ್ ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT