ಶನಿವಾರ, ನವೆಂಬರ್ 27, 2021
21 °C
ಜೇಸಿಐ ಸುಬ್ರಹ್ಮಣ್ಯ ಕುಕ್ಕೆಶ್ರೀ ವತಿಯಿಂದ ಸನ್ಮಾನ, ಕೃತಿ ಬಿಡುಗಡೆ

‘ಸರಳತೆಯ ಮೂರ್ತರೂಪ ಹಾಜಬ್ಬ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುಬ್ರಹ್ಮಣ್ಯ: ‘ಸಾಧಕರ ಜೀವನ ಸಕಾರಾತ್ಮಕ ಸಂದೇಶವನ್ನು ನೀಡುತ್ತದೆ. ಸರಳತೆಯ ಮೂರ್ತರೂಪವಾಗಿರುವ ಹಾಜಬ್ಬ ಇಂದಿಗೂ ಅದನ್ನು ಮೈಗೂಡಿಸಿಕೊಂಡಿದ್ದಾರೆ. ಅದರಿಂದಲೇ ಅವರೊಬ್ಬ ಅಕ್ಷರ ಸಂತ ಎನಿಸಿಕೊಂಡಿದ್ದಾರೆ. ದಿನದ 24 ಗಂಟೆಯಲ್ಲಿ ಒಬ್ಬ ವ್ಯಕ್ತಿ ಅಲ್ಪ ಸಮಯ ಸಮಾಜದ ಬಗ್ಗೆಯೂ ಯೋಚಿಸಿದಲ್ಲಿ ಸಮಾಜಮುಖಿ ವ್ಯಕ್ತಿ ಆಗಲು ಸಾಧ್ಯ. ಇದನ್ನು ರವಿ ಕಕ್ಕೆಪದವು ಹಾಗೂ ಹರೇಕಳ ಹಾಜಬ್ಬ ಅವರಿಂದ ತಿಳಿಯಬಹುದು’ ಎಂದು ಪುತ್ತೂರು ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್ ಹೇಳಿದರು.

ಜೇಸಿಐ ಸುಬ್ರಹ್ಮಣ್ಯ ಕುಕ್ಕೆಶ್ರೀ ವತಿಯಿಂದ ಬುಧವಾರ ಸುಬ್ರಹ್ಮಣ್ಯದಲ್ಲಿ ನಡೆದ ಸಮಾಜ ಸೇವಕ ರಾಷ್ಟ್ರಪ್ರಶಸ್ತಿ ಪುರಸ್ಕೃತ ಜೆಎಫ್ಎಸ್ ರವಿಕಕ್ಕೆಪದವು ಅವರ ಕುರಿತು ಡಾ. ರಾಜೇಶ್ವರಿ ಗೌತಮ್ ಬರೆದ ‘ಬೆಂಕಿಯಲ್ಲಿ ಅರಳಿದ ಹೂವು’ ಕೃತಿ ಬಿಡುಗಡೆ ಹಾಗೂ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಹರೇಕಳ ಹಾಜಬ್ಬ ಅವರು, ‘ಮಕ್ಕಳಿಗೆ ಶಿಕ್ಷಣ ದೊರೆಯಬೇಕೆಂಬ ತುಡಿತ ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ’ ಎಂದರು.

‘ಬಿ.ಕಾಂ ಕನ್ನಡ ಪಠ್ಯದಲ್ಲಿ ನನ್ನ ಬಗ್ಗೆ ಪಾಠವಿತ್ತು. ಅದರ ಬಗೆ ತಿಳಿಯಲು ಕುಕ್ಕೆ ಸುಬ್ರಹ್ಮಣ್ಯದ ಬಿ.ಕಾಂ. ಕಲಿಯುತ್ತಿರುವ ಸುಮಾರು 36 ವಿದ್ಯಾರ್ಥಿಗಳು 2017ರಲ್ಲಿ ಒಂದು ಸಂಜೆ ನನ್ನ ಮನೆಗೆ ಬಂದಿದ್ದರು. ನಾನೇ ಬೇಕಾದರೆ ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಬಂದಾಗ ಭೇಟಿಯಾಗುತ್ತೇನೆ, ನೀವು ಇಲ್ಲಿಗೆ ಬರಬೇಡಿ ಎಂದರೂ, ಅವರು ಪ್ರೀತಿಯಿಂದ ನನ್ನ ಮನೆಗೇ ಬಂದು ಭೇಟಿ ಮಾಡಿದರು’ ಎಂದು ನೆನಪಿಸಿಕೊಂಡರು.

ಪತ್ರಕರ್ತ ದುರ್ಗಾಕುಮಾರ್ ನಾಯರ್ಕೆರೆ ಕೃತಿ ಪರಿಚಯಿಸಿದರು. ಸುಬ್ರಹ್ಮಣ್ಯ ಜೇಸಿಐ ಅಧ್ಯಕ್ಷ ದೀಪಕ್ ನಂಬಿಯಾರ್ ಅಧ್ಯಕ್ಷತೆ ವಹಿಸಿದ್ದರು. ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಖಜಾಂಚಿ ಪದ್ಮಪ್ರಸಾದ್, ಜೇಸಿಐ ವಲಯಾಧ್ಯಕ್ಷೆ ಸೌಜನ್ಯಾ ಹೆಗ್ಡೆ, ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪಿ.ಜಿ.ಎಸ್.ಎನ್. ಪ್ರಸಾದ್, ವನಜಾ ವಿ.ಭಟ್, ಎಸ್ಎಸ್ ಪಿಯು ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್, ಅನುಗ್ರಹ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಗಣೇಶ್ ಪ್ರಸಾದ್ ಎನ್., ಅಭಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಅಶೋಕ್ ನೆಕ್ರಾಜೆ, ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎನ್.ಎಸ್, ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ವಿಜಯಕುಮಾರ್ ಅಮೈ, ಐನೆಕಿದು ಸುಬ್ರಹ್ಮಣ್ಯ ಸೊಸೈಟಿ ಮಾಜಿ ಅಧ್ಯಕ್ಷ ರವೀಂದ್ರಕುಮಾರ್ ರುದ್ರಪಾದ, ಕುಕ್ಕೆಶ್ರೀ ಜೇಸಿಐ ಕಾರ್ಯದರ್ಶಿ ಸೌಮ್ಯಾ ಭರತ್, ನಿಕಟಪೂರ್ವ ಅಧ್ಯಕ್ಷ ಮಣಿಕಂಠ ಇದ್ದರು. ಚಂದ್ರಶೇಖರ್ ನಾಯರ್ ಸ್ವಾಗತಿಸಿದರು. ಭಾರತಿ ದಿನೇಶ್ ವಂದಿಸಿದರು. ವಿಶ್ವನಾಥ ನಡುತೋಟ ಕಾರ್ಯಕ್ರಮ ನಿರೂಪಿಸಿದರು.

ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ, ಐನೆಕಿದು ಕೃಷಿ ಪತ್ತಿನ ಸಹಕಾರ ಸಂಘ, ಆಟೊ ಚಾಲಕ ಮಾಲೀಕರ ಸಂಘ, ಕಡಬ ತಾಲ್ಲೂಕು ಯುವಜನ ಒಕ್ಕೂಟ, ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಹಾಜಬ್ಬ ಅವರನ್ನು ಗೌರವಿಸಲಾಯಿತು. ಉದ್ಯಮಿ ರವಿ ಕಕ್ಕೆಪದವು, ಲೇಖಕಿ ಡಾ. ರಾಜೇಶ್ವರಿ ಗೌತಮ್ ಅವರನ್ನು ಸನ್ಮಾನಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.