ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಯ: ಬಿಜೆಪಿ ಅಭ್ಯರ್ಥಿ ಭಾಗೀರಥಿ ನಾಮಪತ್ರ ಸಲ್ಲಿಕೆ

ಬಿಜೆಪಿ ಅಭ್ಯರ್ಥಿಯ ಮೆರವಣಿಗೆಗೆ ಡಿವಿಎಸ್‌, ಅಂಗಾರ, ಅಣ್ಣಾಮಲೈ ಸಾಥ್‌
Last Updated 19 ಏಪ್ರಿಲ್ 2023, 7:40 IST
ಅಕ್ಷರ ಗಾತ್ರ

ಸುಳ್ಯ: ಇಲ್ಲಿನ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಏ.18ರಂದು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೆ ಮುನ್ನ ಬಿಜೆಪಿ ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಸಿದರು.

ಶ್ರೀರಾಮಪೇಟೆಯ ಶ್ರೀರಾಮ ಭಜನಾ ಮಂದಿರದ ಬಳಿಯಿಂದ ಪಟ್ಟಣದ ಬೀದಿಯಲ್ಲಿ ತಾಲ್ಲೂಕು ಕಚೇರಿ ಬಳಿಯ ಪುರಭವನದ ಸಮೀಪದ ವರೆಗೆ ಮೆರವಣಿಗೆ ಸಾಗಿ ಬಂತು. ಬಳಿಕ ನಾಮಪತ್ರ ಸಲ್ಲಿಸಿದರು. ಮೆರವಣಿಗೆಯಲ್ಲಿ ಪಕ್ಷದ ನಾಯಕರ ಕಟೌಟ್‌ಗಳು ರಾರಾಜಿಸಿದವು.

ಬಿಜೆಪಿ ಅಭ್ಯರ್ಥಿ ಭಾಗೀರಥಿ ಅವರು ನಾಮಪತ್ರ ಸಲ್ಲಿಸಿ ಹೊರಬರುತ್ತಿದ್ದಂತೆ ಸಚಿವ ಎಸ್.ಅಂಗಾರ ಅವರ ಕಾಲು ಮುಟ್ಟಿ ಆಶೀರ್ವಾದ ಪಡೆದರು.

ಬಳಿಕ ಮಾತನಾಡಿದ ಭಾಗೀರಥಿ ಮುರುಳ್ಯ, ‘ಕ್ಷೇತ್ರ ತಿರುಗಾಟ ಮಾಡುತ್ತಿದ್ದೇವೆ. ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈ ಬಾರಿ ಬಿಜೆಪಿ ಸುಳ್ಯದಲ್ಲಿ ಗೆಲ್ಲುವುದು ನಿಶ್ಚಿತ. ಒಬ್ಬಳು ಸಾಮಾನ್ಯ ಕಾರ್ಯಕರ್ತೆಗೆ ಪಕ್ಷ ಅವಕಾಶ ಕೊಟ್ಟಿದೆ. ಇಲ್ಲಿ ಬಿಜೆಪಿಗೆ ಎದುರಾಳಿ ಅಭ್ಯರ್ಥಿಗಳೇ ಇಲ್ಲ’ ಎಂದರು.

ಶೆಟ್ಟರ್ ಹೋದ ಜಾಗ ಸರಿಯಿಲ್ಲ: ‘ಜಗದೀಶ್ ಶೆಟ್ಟರ್ ಮತ್ತು ನಾನು ಒಟ್ಟಾಗಿ ಪಕ್ಷದಲ್ಲಿ ಬೆಳೆದವರು. ಪಕ್ಷ ನನಗೂ ಅವರಿಗೂ ಎಲ್ಲಾ ಸ್ಥಾನ, ಅವಕಾಶ ಕೊಟ್ಟಿದೆ. ಆದರೆ, ಅವರು ಹೋದ ಜಾಗ ಸರಿ ಇಲ್ಲ. ಯಾಕೆಪ್ಪಾ ಅಲ್ಲಿಗೆ ಹೋದೆ ಎಂದು ಅನಿಸುವ ದಿನ ದೂರವಿಲ್ಲ. ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ’ ಎಂದು ಸಂಸದ ಡಿ.ವಿ.ಸದಾನಂದ ಗೌಡ ಹೇಳಿದರು.

ಕಾಂಗ್ರೆಸ್ ಅಪಪ್ರಚಾರ: ಸಚಿವ ಎಸ್.ಅಂಗಾರ ಮಾತನಾಡಿ, ‘ಪಕ್ಷದ ಗೆಲುವಿಗೆ ನಿರಂತರ ಶ್ರಮ ವಹಿಸಲಾಗುವುದು. ಬಿಜೆಪಿಯ ಗೆಲುವಿನ ಹೊಣೆಯನ್ನು ನಾನು ಹಾಗೂ ಕಾರ್ಯಕರ್ತರೇ ತೆಗೆದುಕೊಳ್ಳುತ್ತೇವೆ. ಅತ್ಯಧಿಕ ಮತಗಳಿಂದ ನಮ್ಮ ಪಕ್ಷ ಗೆಲುವು ಸಾಧಿಸಲಿದೆ. ಕಾಂಗ್ರೆಸ್ ಅಪಪ್ರಚಾರ ನಡೆಸುತ್ತಿದೆ. ಅದಕ್ಕೆ ಮತದಾರರು ಕಿವಿಗೊಡುವುದಿಲ್ಲ’ ಎಂದು ಹೇಳಿದರು.

ನಾಯಕರು ಹೋದರೂ ಹಿನ್ನೆಡೆ ಇಲ್ಲ: ಪಕ್ಷದ ಎಲ್ಲ ಅವಕಾಶಗಳನ್ನು ಬಳಸಿದ ನಾಯಕರೇ ಇತರ ಪಕ್ಷಕ್ಕೆ ಹೋಗಿದ್ದಾರೆ. ಇದರಿಂದ ಪಕ್ಷಕ್ಕೆ ಹಾನಿ ಇಲ್ಲ. ಯಾಕೆಂದರೆ ಬಿಜೆಪಿ ಕಾರ್ಯಕರ್ತರ ಪಕ್ಷ, ಇಲ್ಲಿ ಕಾರ್ಯಕರ್ತರೇ ಮುಖ್ಯ. ಅವರಿಂದಲೇ ಪಕ್ಷ ಬೆಳೆಯುವುದು, ಉಳಿಯೋದು ಎಂದು ಕೆ.ಅಣ್ಣಾಮಲೈ ಹೇಳಿದರು.

ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ. ತೀರ್ಥರಾಮ ಇದ್ದರು.

ಟ್ರಾಫಿಕ್ ಜಾಮ್: ಸುಳ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯ ಸಲುವಾಗಿ ಮೆರವಣಿಗೆ ಇದ್ದ ಹಿನ್ನೆಲೆಯಲ್ಲಿ ಪೇಟೆಯಲ್ಲಿ ಟ್ರಾಫಿಕ್ ಜಾಮ್ ಕಂಡುಬಂದಿತ್ತು.

ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ಮತ್ತು ಮೆರವಣಿಗೆ ಇದ್ದ ಕಾರಣ ಪಟ್ಟಣದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ, ಪ್ರಯಾಣಿಕರು ಪರದಾಡುವಂತಾಯಿತು.

ಪುತ್ತೂರು ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ್ ನೇತೃತ್ವದಲ್ಲಿ ಪೊಲೀಸ್ ತಂಡ ಭದ್ರತೆ ಒದಗಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT