ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ಧರ್ಮ ನಿಂದನೆ ಆರೋಪ: ಶಿಕ್ಷಕಿ ವಜಾ

ಜೆರೋಸಾ ಶಾಲೆ ವಿರುದ್ಧ ಹಿಂದೂಪರ ಸಂಘಟನೆಗಳ ಪ್ರತಿಭಟನೆಗೆ ಶಾಸಕದ್ವಯರ ಬೆಂಬಲ
Published 13 ಫೆಬ್ರುವರಿ 2024, 0:17 IST
Last Updated 13 ಫೆಬ್ರುವರಿ 2024, 0:17 IST
ಅಕ್ಷರ ಗಾತ್ರ

ಮಂಗಳೂರು: ತರಗತಿಯಲ್ಲಿ ಧರ್ಮ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಹಿಂದೂಪರ ಸಂಘಟನೆಗಳು ಮತ್ತು ಶಾಸಕರಿಬ್ಬರ ಪ್ರತಿಭಟನೆಯ ಹಿನ್ನೆಲೆಯಲ್ಲಿ ನಗರದ ಜೆರೋಸಾ ಕಾನ್ವೆಂಟ್‌ನ ಶಿಕ್ಷಕಿ ಸಿಸ್ಟರ್ ಪ್ರಭಾ ಅವರನ್ನು ಶಾಲಾ ಆಡಳಿತ ವಜಾ ಮಾಡಿದೆ.

ಸೋಮವಾರ ಬೆಳಿಗ್ಗೆ ಸಾರ್ವಜನಿಕ ಶಿಕ್ಷಣಾಧಿಕಾರಿ ಕಚೇರಿ ಮತ್ತು ಮಧ್ಯಾಹ್ನದ ನಂತರ ಶಾಲೆಯ ಆವರಣದಲ್ಲಿ ನಡೆದ ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿ ಮತ್ತು ನಗರ ಪೊಲೀಸ್ ಆಯುಕ್ತರ ಸಮಕ್ಷಮದಲ್ಲಿ ಶಾಲೆಯಲ್ಲಿ ಸಂಜೆ ಒಂದೂವರೆ ತಾಸು ಸಭೆ ನಡೆಯಿತು. ನಂತರ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಅನಿತಾ ಅವರು ಪ್ರಭಾ ಅವರನ್ನು ವಜಾ ಮಾಡಿರುವ ವಿಷಯವನ್ನು ಪ್ರಕಟಿಸಿದರು.

‘ಶಿಕ್ಷಕಿಯನ್ನು ಶಾಲಾ ಆಡಳಿತ ಸ್ವಯಂಪ್ರೇರಣೆಯಿಂದ ವಜಾ ಮಾಡಿದ್ದಾರೆ. ಶಾಲೆಯಲ್ಲಿ ನಡೆದಿದೆ ಎನ್ನಲಾದ ಘಟನೆಯ ಬಗ್ಗೆ ಜಿಲ್ಲಾಡಳಿತ ನಡೆಸುವ ತನಿಖೆ ಶೀಘ್ರ ಮುಗಿಯಲಿದೆ. ಶಿಕ್ಷಕಿಯನ್ನು ವಜಾ ಮಾಡುವ ನಿರ್ಧಾರವು ನಿಷ್ಪಕ್ಷಪಾತ ತನಿಖೆಗೆ ನೆರವಾಗಲಿದೆ’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸಭೆಯ ನಂತರ ತಿಳಿಸಿದರು.

ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯವಾಹ ಶರಣ್ ಪಂಪುವೆಲ್ ಮತ್ತು ಮುಖಂಡ ಶಿವಾನಂದ ಮೆಂಡನ್ ಅವರೊಂದಿಗೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬೆಳಿಗ್ಗೆ ಸಾರ್ವಜನಿಕ ಶಿಕ್ಷಣಾಧಿಕಾರಿ ಕಚೇರಿ ಬಳಿ ಸೇರಿ ಸಿಸ್ಟರ್ ಪ್ರಭಾ ಮತ್ತು ಶಿಕ್ಷಕ ಸ್ಟೀಫನ್ ಅವರನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದರು. ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ ಮತ್ತು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರ ಪ್ರವೇಶವಾಗುವುದರೊಂದಿಗೆ ಪ್ರತಿಭಟನೆ ತೀವ್ರಗೊಂಡಿತು. ಮನವಿ ಸಲ್ಲಿಸಿದ ನಂತರ ಪ್ರತಿಭಟನಾಕಾರರು ಶಾಲೆಯತ್ತ ತೆರಳಿದರು. ಅವರಿಗೆ ವೇದವ್ಯಾಸ ಕಾಮತ್ ಜೊತೆಯಾದರು. ಗೇಟ್ ದಾಟಿ ಒಳಗೆ ಪ್ರವೇಶಿಸಲು ಪ್ರಯತ್ನಿಸಿ ‘ಭಾರತ್‌ ಕಾ ಹರ್‌ ಏಕ್ ಬಚ್ಚಾ ಜೈ ಶ್ರೀರಾಮ್ ಬೋಲೇಗ’ (ಭಾರತದ ಪ್ರತಿಯೊಂದು ಮಗು ಜೈಶ್ರೀರಾಮ್ ಘೋಷಣೆ ಮೊಳಗಿಸಲಿದೆ), ಭಾರತ್ ಮಾತಾ ಕಿ ಜೈ, ಜೈ ಶ್ರೀರಾಮ್ ಎಂಬ ಘೋಷಣೆ ಕೂಗಿದರು.

ಒಂದು ತಾಸು ಗೇಟಿನ ಹೊರಗೆ ಕಾದು ನಿಂತ ವೇದವ್ಯಾಸ ಕಾಮತ್, ನಂತರ ಕೆಲ ಪೋಷಕರ ಜೊತೆ ಒಳಗೆ ಹೋಗಿ ಶಾಲಾ ಆಡಳಿತದವರ ಜೊತೆ ಮಾತುಕತೆ ನಡೆಸಿದರು. ಕೆಲ ಹೊತ್ತಿನಲ್ಲಿ ಶಾಲಾ ಆಡಳಿತ ಪ್ರಕಟಣೆಯನ್ನು ಹೊರಡಿಸಿ ‘ಶಿಕ್ಷಕಿ ಯಾವುದೇ ತಪ್ಪು ಮಾಡದೇ ಇದ್ದರೂ ಅವರ ಕುರಿತು ವಾಟ್ಸ್‌ ಆ್ಯಪ್‌ನಲ್ಲಿ ಹರಿದಾಡುತ್ತಿರುವ ಸಂದೇಶವೊಂದು ಶಾಸಕರು ಮತ್ತು ಕೆಲವು ಪೋಷಕರ ಅಸಮಾಧಾನಕ್ಕೆ ಕಾರಣವಾಗಿದೆ’ ಎಂದು ಹೇಳಿದರು.

ಇದರಿಂದ ಶಾಸಕರು ಕುಪಿತರಾದರು. ಪ್ರತಿಭಟನೆ ತೀವ್ರಗೊಂಡಿತು. ಶಾಲೆ ಬಿಟ್ಟ ನಂತರ ವಿದ್ಯಾರ್ಥಿಗಳು ಕೂಡ ಪ್ರತಿಭಟನಾಕಾರರ ಜೊತೆ ಸೇರಿ ಜೈ ಶ್ರೀರಾಮ್ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಜಿಲ್ಲಾಧಿಕಾರಿ, ಶಾಸಕರನ್ನು ಸಮಾಧಾನಪಡಿಸಿ ವಾಪಸ್ ಕಳುಹಿಸಿದರು. ನಂತರ ಸುದೀರ್ಘ ಮಾತುಕತೆ ನಡೆಯಿತು. 

ವಿಚಾರಗೋಷ್ಠಿಯಲ್ಲಿ ಅವಹೇಳನ: ಆರೋಪ

ಶಾಲೆಯಲ್ಲಿ ನಡೆದ ‘ವರ್ಕ್ ಈಸ್ ವರ್ಷಿಪ್’ ವಿಷಯದ ಕುರಿತ ವಿಚಾರಗೋಷ್ಠಿಯಲ್ಲಿ ಹಿಂದೂ ದೇವರನ್ನು ಅವಹೇಳನ ಮಾಡಿರುವುದಾಗಿ ಮಕ್ಕಳು ಪೋಷಕರ ಬಳಿ ದೂರಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಶಿಕ್ಷನ ಸ್ಟೀಫನ್ ಅವರು ಈ ಭಾಗದ ದೈವ ಕೊರಗಜ್ಜ ಬಗ್ಗೆ ನಿಂದನಾತ್ಮಕ ಮಾತುಗಳನ್ನಾಡಿದ್ದಾರೆ ಎಂದು ದೂರಿದ ಪ್ರತಿಭಟನಾಕಾರರು ಸ್ಟೀಫನ್ ಮೇಲೆಯೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಿಸ್ಟರ್ ಪ್ರಭಾ ಅವರ ಮೇಲಷ್ಟೇ ಕ್ರಮ ಕೈಗೊಂಡ ವಿಷಯ ಪ್ರಕಟಿಸಿದ ನಂತರವೂ ಶಾಲೆಯ ಗೇಟಿನ್‌ ಬಳಿ ಸೇರಿದ ಕೆಲವರು ಸ್ಟೀಫನ್ ಅವರನ್ನು ಸುಮ್ಮನೇ ಬಿಟ್ಟ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಮಂಗಳೂರಿನ ಜೆರೋಸಾ ಶಾಲೆಯ ಬಳಿ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್‌ ಮತ್ತು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಜೊತೆ ಶಾಸಕ ವೇದವ್ಯಾಸ ಕಾಮತ್ ಮಾತುಕತೆ ನಡೆಸಿದರು

ಮಂಗಳೂರಿನ ಜೆರೋಸಾ ಶಾಲೆಯ ಬಳಿ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್‌ ಮತ್ತು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಜೊತೆ ಶಾಸಕ ವೇದವ್ಯಾಸ ಕಾಮತ್ ಮಾತುಕತೆ ನಡೆಸಿದರು

–ಪ್ರಜಾವಾಣಿ ಚಿತ್ರ

ಹಿಂದೂ ಸಮಾಜ ಜಾಗೃತವಾಗಿದ್ದು ಧರ್ಮನಿಂದನೆ ಸಹಿಸಲಾಗದು. ಯೇಸು ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಅವರಿಗೆ ಹೇಗೆ ನೋವಾಗುತ್ತದೆಯೋ ಶ್ರೀರಾಮನ ಬಗ್ಗೆ ಮಾತನಾಡಿದರೆ ನಮಗೂ ಬೇಸರವಾಗುತ್ತದೆ.

–ವೇದವ್ಯಾಸ ಕಾಮತ್‌ ಮಂಗಳೂರು ದಕ್ಷಿಣ ಶಾಸಕ

60 ವರ್ಷಗಳ ಇತಿಹಾಸವಿರುವ ಸೇಂಟ್ ಜೆರೋಸಾ ಶಾಲೆಯಲ್ಲಿ ಇಂಥ ಕಹಿ ಘಟನೆ ಇದೇ ಮೊದಲು. ಒಳ್ಳೆಯ ಮನೋಭಾವದಿಂದ ನಡೆಯುತ್ತಿರುವ ಶಾಲೆಯು ತನಿಖೆಗೆ ಸಂಪೂರ್ಣ ಬೆಂಬಲ ನೀಡಲಿದೆ.

-ಸಿಸ್ಟರ್ ಅನಿತಾ ಸೇಂಟ್ ಜೊರೊಸಾ ಶಾಲೆಯ ಮುಖ್ಯ ಶಿಕ್ಷಕಿ

ಸಿಸ್ಟರ್ ಪ್ರಭಾ ಆಸ್ಪತ್ರೆಗೆ ದಾಖಲು?

ಧರ್ಮ ನಿಂದನೆ ಆರೋಪ ಹೊತ್ತಿರುವ ಸಿಸ್ಟರ್ ಪ್ರಭಾ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಶಾಲೆಯ ಮೂಲಗಳು ತಿಳಿಸಿವೆ. ಆರೋಪದ ನಂತರ ನಡೆದ ಪ್ರತಿಭಟನೆ ಹಾಗೂ ಇತರ ಬೆಳವಣಿಗೆಗಳಿಂದಾಗಿ ಪ್ರಭಾ ಅವರು ಒತ್ತಡಕ್ಕೆ ಒಳಗಾಗಿದ್ದು ಅಸ್ವಸ್ಥರಾದ ಕಾರಣ ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಸಭೆಯ ನಂತರ ಸಂಜೆ ಪತ್ರಕರ್ತರ ಜೊತೆ ಮಾತನಾಡಿದ ಮುಖ್ಯ ಶಿಕ್ಷಕಿ ಸಿಸ್ಟರ್ ಅನಿತಾ ಅವರು ಪ್ರಭಾ ಬದಲಿಗೆ ಮತ್ತೊಬ್ಬರನ್ನು ನೇಮಕ ಮಾಡಲಾಗುವುದು ಎಂದು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT