ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯು ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೆಸರುವಾಸಿ. ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ 493 ದೇವಾಲಯಗಳ ಜೊತೆಗೆ, ಖಾಸಗಿ ಒಡೆತನದ ನೂರಾರು ದೇವಸ್ಥಾನಗಳ ನೆಲೆವೀಡು ಈ ಜಿಲ್ಲೆ. ದೇಶ– ವಿದೇಶಗಳಿಂದ ಅಪಾರ ಭಕ್ತರನ್ನು ಸೆಳೆಯುವ ದೇವಸ್ಥಾನಗಳು ಇಲ್ಲಿವೆ. ಆತಿಥ್ಯಕ್ಕೆ ಹೆಸರಾದ ಇಲ್ಲಿನ ಪುಣ್ಯ ಕ್ಷೇತ್ರಗಳನ್ನು ಪ್ಲಾಸ್ಟಿಕ್ ಮಾಲಿನ್ಯದ ಪೆಡಂಭೂತದಿಂದ ಕಾಪಾಡುವತ್ತ ಮುಜರಾಯಿ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ.

ಬರುವ ಭಕ್ತರ ಇಷ್ಟಾರ್ಥ ಸಿದ್ಧಿ, ಪಾಪ ವಿಮೋಚನೆಗೆ ಇಲ್ಲಿನ ತೀರ್ಥಕ್ಷೇತ್ರಗಳು ಹೆಸರುವಾಸಿ. ನಿತ್ಯವೂ ಸಾವಿರಾರು ಭಕ್ತರು ಸಂದರ್ಶಿಸುವ ಇಲ್ಲಿನ ದೇವಸ್ಥಾನಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಪ್ಲಾಸ್ಟಿಕ್ ಮಾಲಿನ್ಯ ಮಿತಿ ಮೀರಿತ್ತು. ಇದಕ್ಕೆ ಭಕ್ತರ ಹಾಗೂ ದೇವಸ್ಥಾನಗಳ ಕಡೆಯವರ ಅಸಡ್ಡೆಯೂ ಕಾರಣವಾಗಿತ್ತು. ಭಕ್ತರು ತಮ್ಮೊಂದಿಗೆ ಸಾಮಗ್ರಿ ತರಲು ಬಳಸುತ್ತಿದ್ದ ಪ್ಲಾಸ್ಟಿಕ್ ಚೀಲಗಳನ್ನು ಈ ಪುಣ್ಯ ಕ್ಷೇತ್ರಗಳಲ್ಲೇ ಬಿಟ್ಟು ಹೋಗುತ್ತಿದ್ದರು. ಕುಡಿಯುವ ನೀರು ತುಂಬಲು ಬಳಸುವ ಪ್ಲಾಸ್ಟಿಕ್ ಬಾಟಲಿಗಳ ಹಾವಳಿ ವಿಪರೀತವಾಗಿತ್ತು. ದೇವಸ್ಥಾನಗಳ ಬಳಿಯ ಮಳಿಗೆಗಳಲ್ಲೂ ಸಾಮಗ್ರಿ ಕಟ್ಟಿಕೊಡಲು ಪ್ಲಾಸ್ಟಿಕ್ ಚೀಲಗಳನ್ನೇ ಬಳಸಲಾಗುತ್ತಿತ್ತು.

ದೇವಸ್ಥಾನಗಳಲ್ಲಿ ಭಕ್ತರಿಗೆ ನೀಡುವ ಪಂಚಕಜ್ಜಾಯ, ಲಡ್ಡು ಪ್ರಸಾದಗಳನ್ನು ಕಟ್ಟಲು ಪ್ಲಾಸ್ಟಿಕ್ ಬಳಸಬಾರದು ಎಂದು ಹಿಂದೆಯೇ ಆದೇಶವಾಗಿದ್ದರೂ ಅದು ಸಂಪೂರ್ಣ ಜಾರಿ ಆಗಿರಲಿಲ್ಲ. ಕೆಲವು ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲೇ ಪಂಚ ಕಜ್ಜಾಯ, ಲಡ್ಡು ಪ್ರಸಾದಗಳನ್ನು ಇತ್ತೀಚಿನವರೆಗೂ ನೀಡಲಾಗುತ್ತಿತ್ತು. ಜಾತ್ರೆ, ಹಬ್ಬ, ಪೂಜೆ, ಹೋಮಗಳ ಸಂದರ್ಭದಲ್ಲಿ ಪ್ಲಾಸ್ಟಿಕ್ ಬಳಕೆ ಅವ್ಯಾಹತವಾಗಿತ್ತು. ಧಾರ್ಮಿಕ ದತ್ತಿ ಇಲಾಖೆ ಈಚೆಗೆ ಆದೇಶ ಹೊರಡಿಸಿ ತನ್ನ ಅಧೀನದ ಎಲ್ಲ ದೇವಸ್ಥಾನಗಳಲ್ಲಿ ನೀರಿನ ಬಾಟಲಿಯೂ ಸೇರಿದಂತೆ ಎಲ್ಲ ರೀತಿಯ ಪ್ಲಾಸ್ಟಿಕ್ ಬಳಕೆ ನಿರ್ಬಂಧಿಸಿದೆ. ಆ. 15ರಿಂದಲೇ ಈ ಆದೇಶ ಜಾರಿಗೆ ಬಂದಿದೆ. ‘ಎ’ ದರ್ಜೆಯ ಕೆಲವು ದೇವಾಲಯಗಳಲ್ಲಿ ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಪ್ರಯತ್ನ ನಡೆದಿವೆ. ‘ಬಿ’ ದರ್ಜೆಯ ದೇವಸ್ಥಾನಗಳು ಈ ಆದೇಶದ ಜಾರಿಗೆ ಸಿದ್ಧತೆ ನಡೆಸಿವೆ.

ಜಿಲ್ಲೆಯ ಕೆಲವು ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ಚೀಲಗಳ ಬದಲಿಗೆ ಕಾಗದದ ಪೊಟ್ಟಣಗಳಲ್ಲಿ ಪಂಚ ಕಜ್ಜಾಯ ಕಟ್ಟಿಕೊಡುವ ಪದ್ಧತಿಯನ್ನು ದಶಕಗಳ ಹಿಂದೆಯೇ ಆರಂಭಿಸಿದ್ದರು. ಇನ್ನು ಎಲ್ಲ ದೇವಸ್ಥಾನಗಳಲ್ಲೂ ಲಡ್ಡು ಪ್ರಸಾದ, ಪಂಚಕಜ್ಜಾಯ ಕಟ್ಟಿಕೊಡಲು ಪ್ಲಾಸ್ಟಿಕ್ ಪೊಟ್ಟಣಗಳ ಬಳಕೆ ಕೊನೆಯಾಗಲಿದೆ’ ಎಂದು ಮುಜರಾಯಿ ಇಲಾಖೆ ತಹಶೀಲ್ದಾರ್ ಕಿರಣ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ದೇವಸ್ಥಾನದಲ್ಲಿ ಪ್ಲಾಸ್ಟಿಕ್ ಪೊಟ್ಟಣ ಬದಲು ಜೋಳದಿಂದ ತಯಾರಿಸಿದ ಪೊಟ್ಟಣವನ್ನು ಬಳಸಲು ಸಿದ್ಧತೆ ಆರಂಭಿಸಿದ್ದೇವೆ. ಅರಳು ನೀಡಲು ಇದು ಉಪಯುಕ್ತ. ಪಂಚಕಜ್ಜಾಯವನ್ನು ಬಟರ್ ಪೇಪರ್ನಲ್ಲೇ ನೀಡಲಾಗುತ್ತಿದೆ’ ಎಂದು ಕುಡುಪು ಅನಂತಪದ್ಮನಾಭ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಮಾಹಿತಿ ನೀಡಿದರು.

ಪ್ಲಾಸ್ಟಿಕ್ ಬಳಕೆ ವ್ಯಾಪಕವಾದ ಬಳಿಕ ದೇವಸ್ಥಾನಗಳಲ್ಲೂ ಪಂಚಕಜ್ಜಾಯ, ಲಡ್ಡು ಪ್ರಸಾದವನ್ನು ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ ನೀಡಲಾರಂಭಿಸಿದ್ದರು. ಸುಮಾರು 4–5 ತಿಂಗಳು ಭಾರಿ ಮಳೆಯಾಗುವ ನಮ್ಮ ಜಿಲ್ಲೆಯಲ್ಲಿ ಪಂಚಕಜ್ಜಾಯ ಕೆಡದಂತೆ ಇಡಲು ಇದರಿಂದ ಪ್ರಯೋಜನವಾಗುತ್ತಿತ್ತು. ಬೆಲ್ಲ, ಜೇನುತುಪ್ಪ, ತುಪ್ಪ ಬಳಸಿ ತಯಾರಿಸುವ ಪಂಚಕಜ್ಜಾಯ, ಲಡ್ಡು ಹಾಗೂ ಇತರ ಪ್ರಸಾದಗಳಲ್ಲಿ ಜಿಡ್ಡಿನಂಶ ಇರುವುದರಿಂದ ಅವುಗಳನ್ನು ಕಾಗದದ ಪೊಟ್ಟಣಗಳಲ್ಲಿ ಕಟ್ಟಿಕೊಟ್ಟರೆ ಬೇಗ ಕೆಡುತ್ತದೆ. ನಮ್ಮ ದೇವಸ್ಥಾನಕ್ಕೆ ದೂರದ ಊರಿನಿಂದ ಬರುವ ಭಕ್ತರು ಜಾಸ್ತಿ. ಇಲ್ಲಿನ ಅನೇಕ ದೇವಸ್ಥಾನಗಳನ್ನು ಸಂದರ್ಶಿಸಿ ಅವರು ಊರಿಗೆ ಮರಳುವುದಕ್ಕೆ ನಾಲ್ಕೈದು ದಿನಗಳು ಬೇಕಾಗುತ್ತವೆ. ಅವರು ಊರಿಗೆ ತಲುಪುವಾಗ ಕಾಗದದ ಪೊಟ್ಟಣದಲ್ಲಿರುವ ಪ್ರಸಾದ ಕೆಡುತ್ತದೆ. ಉಳಿದ ಕಡೆ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ಆಸಕ್ತಿ ತೋರಿಸದ ಸರ್ಕಾರ, ದೇವಸ್ಥಾನಗಳಲ್ಲಿ ನಿರ್ಬಂಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿರ್ಧಾರ ಕೈಗೊಂಡರೆ ನಾವೂ ಅದನ್ನು ಜಾರಿ ಮಾಡಲೇ ಬೇಕಾಗುತ್ತದೆ ಎನ್ನುತ್ತಾರೆ ದೇವಸ್ಥಾನವೊಂದರ ಅರ್ಚಕರು.

‘ಕುಕ್ಕೆ ಸುಬ್ರಹ್ಮಣ್ಯದಂತಹ ಪ್ರಸಿದ್ಧ ದೇವಸ್ಥಾನಗಳಲ್ಲಿ ವಾರಾಂತ್ಯ ಹಾಗೂ ರಜಾದಿನಗಳಲ್ಲಿ 20 ಸಾವಿರಕ್ಕೂ ಹೆಚ್ಚು ಜನ ಬರುತ್ತಾರೆ. ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಪ್ಲಾಸ್ಟಿಕ್ ಪೊಟ್ಟಣ ಈ ಕ್ಷೇತ್ರವನ್ನು ಸೇರುತ್ತದೆ. ಅವುಗಳಲ್ಲಿ ಎಲ್ಲವೂ ಕಸದ ಬುಟ್ಟಿಯನ್ನು ತಲುಪುವುದಿಲ್ಲ. ಹಸುಗಳ ಹೊಟ್ಟೆ ಸೇರಿ, ಅವುಗಳ ಆರೋಗ್ಯ ಕೆಡುತ್ತಿತ್ತು. ಇಂಥ ಬಹುರೂಪಿ ಸಮಸ್ಯೆಗಳಿಂದ ಹೊರಬರಲು ನಾವು ಪ್ಲಾಸ್ಟಿಕ್ ಕೈಚೀಲದ ಬದಲು, ಬಟ್ಟೆ ಕೈಚೀಲ ಅಥವಾ ನಾರಿನ ಚೀಲ ಹಿಡಿಯಲೇಬೇಕು’ ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿತ್ ಸದಸ್ಯ ಲಕ್ಷ್ಮೀಶ ಗಬ್ಬಲಡ್ಕ.

‘ಎಲ್ಲದಕ್ಕೂ ಪ್ಲಾಸ್ಟಿಕ್ ಪೊಟ್ಟಣ ಅನಿವಾರ್ಯ ಎಂಬ ಮನಃಸ್ಥಿತಿಯಲ್ಲಿ ನಾವಿದ್ದೇವೆ. ಮುಂದಿನ ಪೀಳಿಗೆಯ ಹಿತಕ್ಕಾದರೂ ಈ ನಿರ್ಬಂಧ ಅಗತ್ಯ. ಆರಂಭದಲ್ಲಿ ಸ್ವಲ್ಪ ಸಮಸ್ಯೆ ಆಗುತ್ತದೆ. ಇದರಿಂದ ಒಳ್ಳೆಯದಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡರೆ, ದೇವಸ್ಥಾನಗಳಲ್ಲೂ ಪ್ಲಾಸ್ಟಿಕ್ಗೆ ಪರ್ಯಾಯ ಕಂಡುಕೊಳ್ಳುವುದು ಕಠಿಣವೇನಲ್ಲ’ ಎಂದರು.

ಮಳಿಗೆಗಳಲ್ಲಿ ಬಳಕೆ ಅವ್ಯಾಹತ

ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿರ್ಬಂಧ ಜಾರಿಗೊಳಿಸಿ 15 ದಿನ ಕಳೆದಿವೆ. ಆದರೆ, ದೇವಸ್ಥಾನದ ಸಮೀಪದ ಮಳಿಗೆಗಳಲ್ಲಿ ಪ್ಲಾಸ್ಟಿಕ್ ಬಳಸುವುದನ್ನು ತಡೆಯಲು ಇನ್ನೂ ಸಾಧ್ಯವಾಗಿಲ್ಲ.

‘ನಮ್ಮ ದೇವಸ್ಥಾನದ ಸಮೀಪದಲ್ಲಿರುವುದು ಹೆಚ್ಚಾಗಿ ಖಾಸಗಿ ಒಡೆತನದ ಮಳಿಗೆಗಳು. ಸರ್ಕಾರವು ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಟ್ಟುನಿಟ್ಟಿನ ನಿರ್ಬಂಧ ಹೇರಿದ ಮಾಹಿತಿಯನ್ನು ಈ ಮಳಿಗೆಗಳ ಮಾಲೀಕರಿಗೆ ನೀಡಿದ್ದೇವೆ. ಆದರೆ, ಅವರ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ ನಮಗಿಲ್ಲ. ಭಕ್ತರು ದೇವಸ್ಥಾನಕ್ಕೆ ಪ್ಲಾಸ್ಟಿಕ್ ಸಾಮಗ್ರಿ ತರುವುದನ್ನು ತಡೆಯಲು ಕ್ರಮ ವಹಿಸುತ್ತಿದ್ದೇವೆ’ ಎನ್ನುತ್ತಾರೆ ಕದ್ರಿ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಪುಷ್ಪಲತಾ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಧೀನದಲ್ಲಿ 100ಕ್ಕೂ ಹೆಚ್ಚು ಮಳಿಗೆಗಳಿವೆ. ಅವುಗಳನ್ನು ನಿರ್ವಹಿಸುವವರಿಗೆ ಪ್ಲಾಸ್ಟಿಕ್ ಸಾಮಗ್ರಿ ಬಳಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ. ಇದಕ್ಕಾಗಿ ಮಳಿಗೆಗಳನ್ನು ನಿರ್ವಹಿಸುವವರ ಸಭೆ ನಡೆಸಿ ಮಾಹಿತಿ ನೀಡಿದ್ದೇವೆ. ಅವರಲ್ಲೂ ಜಾಗೃತಿ ಮೂಡಿಸುವ ಪ್ರಯತ್ನಗಳಾಗುತ್ತಿವೆ ಎನ್ನುತ್ತಾರೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಸುತಗುಂಡಿ.

ಪ್ಲಾಸ್ಟಿಕ್ ಕಸ ಹಾಕಿದರೆ ₹ 1,000 ದಂಡ

ದೇವಸ್ಥಾನದ ಆವರಣದಲ್ಲಿ ಪ್ಲಾಸ್ಟಿಕ್ ಕಸ ಎಸೆದವರಿಗೆ ₹ 1000 ದಂಡ ವಿಧಿಸುವಂತೆ ಧಾರ್ಮಿಕ ದತ್ತಿ ಇಲಾಖೆ ಎಲ್ಲ ದೇವಸ್ಥಾನಗಳ ಆಡಳಿತ ಮಂಡಳಿಗಳಿಗೆ ಸೂಚಿಸಿದೆ. ದಂಡದ ರೂಪದಲ್ಲಿ ಜಮೆಯಾಗುವ ಮೊತ್ತವನ್ನು ದೇವಾಲಯದ ನಿಧಿಗೆ ಜಮೆ ಮಾಡುವಂತೆ ಸೂಚಿಸಿದೆ. ಸದ್ಯಕ್ಕೆ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸಗಳಾಗುತ್ತಿವೆ. ದಂಡ ವಿಧಿಸಲು ಇನ್ನೂ ಆರಂಭಿಸಿಲ್ಲ.

ಇಲಾಖೆ ಆದೇಶದಲ್ಲಿ ಏನಿದೆ?

ದೇವಸ್ಥಾನಗಳ ಆವರಣದಲ್ಲಿ ಪ್ಲಾಸ್ಟಿಕ್ ಬಳಕೆ ತಡೆಯಲು ಕಟ್ಟುನಿಟ್ಟಾಗಿ ಕ್ರಮ ವಹಿಸುವುದು

ದೇವಾಲಯಕ್ಕೆ ಸೇರಿದ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕೈಚೀಲದ ಬದಲು ಬಟ್ಟೆ ಕೈಚೀಲ ಬಳಕೆ ಕಡ್ಡಾಯ

ದೇವಸ್ಥಾನದ ಪರಿಸರದ ಸ್ವಚ್ಛತೆ ಕಾಪಾಡಬೇಕು

ಪ್ಲಾಸ್ಟಿಕ್ ನಿಷೇಧದ ಮಾಹಿತಿಯನ್ನು ದೇವಸ್ಥಾನದ ಪ್ರವೇಶ ದ್ವಾರದ ಬಳಿ ಫಲಕದಲ್ಲಿ ಅಳವಡಿಸಬೇಕು

ದೇವಸ್ಥಾನದಲ್ಲಿ ಪ್ರಸಾದ ವಿತರಿಸಲು ಅಡಿಕೆ ತಟ್ಟೆ, ಬಾಳೆ ಎಲೆ ಅಥವಾ ದೊನ್ನೆ ಬಳಸಬೇಕು

ದೇವಸ್ಥಾನದಲ್ಲಿ ಅಲಂಕಾರಕ್ಕೆ ಪ್ಲಾಸ್ಟಿಕ್ನಿಂದ ತಯಾರಿಸಿದ ಹೂವು, ಆಲಂಕಾರಿಕ ತೋರಣ ಬಳಸುವಂತಿಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.