ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ್ಪಿನಂಗಡಿ | ಚತುಷ್ಪಥ ಕಾಮಗಾರಿ: ಸಂಪರ್ಕ ರಸ್ತೆ ಕೆಸರುಗದ್ದೆ

ಚರಂಡಿ ಕಾಮಗಾರಿ ಅಪೂರ್ಣ: 30ಕ್ಕೂ ಹೆಚ್ಚು ಮನೆ, ಉದ್ಯಮ ಸಂಸ್ಥೆಗಳಿಗೆ ದಿಗ್ಭಂಧನ
Published 30 ಮೇ 2024, 5:52 IST
Last Updated 30 ಮೇ 2024, 5:52 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರ ಮಂಗಳೂರು-ಬೆಂಗಳೂರು ಚತುಷ್ಪಥ ಕಾಮಗಾರಿ ಆಮೆವೇಗದಲ್ಲಿ ನಡೆಯುತ್ತಿದ್ದು, ಚರಂಡಿ ಕಾಮಗಾರಿ ಅಪೂರ್ಣಗೊಂಡಿರುವುದರಿಂದ ಮಳೆ ಸುರಿದ ಬೆನ್ನಲ್ಲೇ ರಸ್ತೆ ಕೆಸರುಗದ್ದೆಯಾಗಿದೆ. 

ಚತುಷ್ಪಥ ಕಾಮಗಾರಿಯ ವಿಳಂಬ ನೀತಿಯ ಕುರಿತು ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಖುದ್ದು ಜಿಲ್ಲಾಧಿಕಾರಿ, ಹೆದ್ದಾರಿ ಪ್ರಾಧಿಕಾರದ ಅಧಿಕಾರಗಳೇ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಸೂಚನೆ ನಿಡಿದ್ದರೂ, ಗುತ್ತಿಗೆದಾರರು ಅದೆಲ್ಲವನ್ನೂ ಗಾಳಿಗೆ ತೂರಿ ಕಾಮಗಾರಿ ನಡೆಸುತ್ತಿದ್ದಾರೆ ಎಂಬ ದೂರು 34-ನೆಕ್ಕಿಲಾಡಿ ಗ್ರಾಮಸ್ಥರಿಂದ ವ್ಯಕ್ತವಾಗಿದೆ.

ಉಪ್ಪಿನಂಗಡಿಯಿಂದ ಮಂಗಳೂರು ಕಡೆಗೆ ಹೋಗುವ ಹೆದ್ದಾರಿ ಬದಿಯಲ್ಲಿ 34-ನೆಕ್ಕಿಲಾಡಿ ಪೇಟೆಯಲ್ಲಿ ರಾಘವೇಂದ್ರ ಮಠ ಸಮೀಪದಿಂದ ಕುಡಿಪ್ಪಾಡಿ ತನಕ ಸುಮಾರು 1 ಕಿ.ಮೀ. ತನಕ ಮಣ್ಣು ಹಾಕಿ ಸರ್ವೀಸ್‌ ರಸ್ತೆ ನಿರ್ಮಿಸಲಾಗಿದೆ. ಆದರೆ, ರಸ್ತೆ ಬದಿಯಲ್ಲಿ ಚರಂಡಿ ನಿರ್ಮಿಸಿಲ್ಲ. ಕೆಲವೆಡೆ ಚರಂಡಿ ಅಪೂರ್ಣವಾಗಿದ್ದು, ರಸ್ತೆಯಿಂದ ಎತ್ತರದಲ್ಲಿದೆ. ಹೀಗಾಗಿ ಮಳೆ ನೀರು ಹರಿದು ಹೋಗಲು ವ್ಯವಸ್ಥೆಯೇ ಇಲ್ಲದೆ, ಇಡೀ ನೀರು ರಸ್ತೆಯಲ್ಲೇ ನಿಂತು ಕೆಸರು ಗದ್ದೆಯಂತಾಗಿದೆ.

ಸರ್ವಿಸ್‌  ರಸ್ತೆ ಇರುವ 1 ಕಿ.ಮೀ. ವ್ಯಾಪ್ತಿಯಲ್ಲಿ 1 ವಸತಿ ಸಮುಚ್ಚಯ ಸೇರಿದಂತೆ 40ಕ್ಕೂ ಹೆಚ್ಚು ಮನೆಗಳಿವೆ. ಗ್ಯಾರೇಜು, ಗ್ರಾನೈಟ್, ಹಾರ್ಡ್‌ವೇರ್‌, ಸಿಮೆಂಟ್‌, ಕಬ್ಬಿಣದ ಅಂಗಡಿ ಸೇರಿದಂತೆ 10ಕ್ಕೂ ಮಳಿಗೆಗಳಿವೆ. ಕಳೆದ 1 ತಿಂಗಳಿನಿಂದ ಈ ರಸ್ತೆಯಲ್ಲಿ ವಾಹನ ಸಂಚಾರ ಸಾಧ್ಯವಾಗುತ್ತಿಲ್ಲ. ಕನಿಷ್ಠ ಸೈಕಲ್ ಕೂಡಾ ತೆಗೆದುಕೊಂಡು ಹೋಗಲು ಆಗುತ್ತಿಲ್ಲ,  ಮನೆಯವರು, ಮಕ್ಕಳು ಹೊರಗೆ ಕಾಲಿಡಲಾಗದೆ ಧಿಗ್ಭಂದನದಲ್ಲಿದ್ದಾರೆ. ವ್ಯಾಪಾರಿಗಳು ವ್ಯಾಪಾರವಿಲ್ಲದೆ  ಕೈಚೆಲ್ಲಿ ಕುಳಿತುಕೊಳ್ಳುವಂತಾಗಿದೆ ಎಂದು ಪರಿಸರದ ನಿವಾಸಿಗಳು ಅಸಹಾಯಕತೆ ವ್ಯಕ್ತಪಡಿಸಿದರು.‌

‘ರಸ್ತೆ ಬದಿಯಲ್ಲಿ ತಡೆಗೋಡೆ, ಮೋರಿ ನಿರ್ಮಿಸುವ ಸಲುವಾಗಿ ಹೊಂಡ ತೆಗೆದು ಹಾಗೆಯೇ ಬಿಡಲಾಗಿದೆ.  ನಡೆದುಕೊಂಡು ಹೋಗುವಾಗಿ ಸ್ವಲ್ಪ ಎಚ್ಚರ ತಪ್ಪಿಸಿದರೂ ಜರಿದು ಬೀಳುವ ಅಪಾಯವಿದೆ. ನಮ್ಮನ್ನು ಈ ಸಮಸ್ಯೆಯಿಂದ ಪಾರು ಮಾಡಿ’ ಎಂದು ಪರಿಸರದ ನಿವಾಸಿಗಳು ಪತ್ರಿಕೆ ಎದುರು ನೋವು ತೋಡಿಕೊಂಡರು.

ಕೆಸರು ಗದ್ದೆಯಾದ ಸರ್ವೀಸ್‌ ರಸ್ತೆ.
ಕೆಸರು ಗದ್ದೆಯಾದ ಸರ್ವೀಸ್‌ ರಸ್ತೆ.

ತಾಳ್ಮೆ ಕಳೆದುಕೊಂಡಿದ್ದೇವೆ

ಮಳೆ ಆರಂಭಕ್ಕೆ ಮುನ್ನವೇ ಇಲ್ಲಿ ಈ ಸಮಸ್ಯೆ ಇತ್ತು. ಆಗ ದೂಳು ತಿನ್ನುತ್ತಿದ್ದೆವು. ಮಳೆ ಆರಂಭವಾದ ನಂತರ ಕೆಸರಿನ ಸಮಸ್ಯೆ. ಎಲ್ಲಿಗೆ ಹೋಗಬೇಕೆಂದು ತೋಚುತ್ತಿಲ್ಲ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ ಎಂದು ಬಹಳಷ್ಟು ಸಮಸ್ಯೆಗಳನ್ನು ತಾಳ್ಮೆಯಿಂದ ಅನುಭವಿಸಿಕೊಂಡು ಬಂದಿದ್ದೇವೆ. ನಾನೊಂದು ಪುಟ್ಟ ಗ್ಯಾರೇಜ್ ನಡೆಸುತ್ತಿದ್ದು ನಮಗೆ ಹೊರಗೆ ಹೋಗುವುದಕ್ಕೂ ಆಗುತ್ತಿಲ್ಲ ನಮ್ಮಲ್ಲಿಗೆ ಯಾರಿಗೂ ಬರುವುದಕ್ಕೂ ಆಗುತ್ತಿಲ್ಲ. ತಾಳ್ಮೆ ಕಳೆದುಕೊಂಡಿದ್ದೇವೆ. ಸದಾನಂದ ಕಾರ್ ಕ್ಲಬ್ 34-ನೆಕ್ಕಿಲಾಡಿ.

ಶಾಲೆಗೆ ಹೋಗುವುದಾದರೂ ಹೇಗೆ

ಈ ರಸ್ತೆಯಲ್ಲಿ ಬರಲು ವಾಹನ ಚಾಲಕರು ನಿರಾಕರಿಸುತ್ತಿದ್ದಾರೆ. ವ್ಯಾಪಾರವೇ ಇಲ್ಲದಂತಾಗಿ ಕಂಗಾಲಾಗಿದ್ದೇವೆ. ಇನ್ನು ಮನೆಯವರೂ ಹೊರಗಡೆ ಹೋಗುವುದಕ್ಕೆ ಆಗುತ್ತಿಲ್ಲ ಇನ್ನೇನು ಶಾಲೆ ಆರಂಭವಾಗಲಿದೆ. ಮಕ್ಕಳು ಶಾಲೆಗೆ ಹೋಗುವುದಾದರೂ ಹೇಗೆ? -ಇಸ್ಮಾಯಿಲ್ ಇಕ್ಬಾಲ್ ಪಾಂಡೇಲ್ ಸ್ಟೀಲ್ 34-ನೆಕ್ಕಿಲಾಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT