ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬುಕ್ ಆಫ್‌ ರೆಕಾರ್ಡ್‌’ನಲ್ಲಿ ಮಿಂಚಿದ ಮೂವರು

ನೀರಿನೊಳಗೆ ಚಮತ್ಕಾರ ಪ್ರದರ್ಶಿಸಿದ ಮಂಗಳೂರಿನ ಚಂದ್ರಶೇಖರ್‌, ಕವಿತಾ, ಮಧುಲಶ್ರೀ
Published 9 ಜೂನ್ 2023, 14:10 IST
Last Updated 9 ಜೂನ್ 2023, 14:10 IST
ಅಕ್ಷರ ಗಾತ್ರ

ಮಂಗಳೂರು: ನೀರಿನೊಳಗೆ ಉಸಿರು ಬಿಗಿ ಹಿಡಿದು ಅತಿಹೆಚ್ಚು ಸೋಮರ್‌ಸಾಲ್ಟ್‌ ಮಾಡಿದ ಮತ್ತು ವಿವಿಧ ಆಸನಗಳನ್ನು ಪ್ರದರ್ಶಿಸಿದ ನಗರದ ಮೂವರು ಬುಕ್‌ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಗಳಿಸಿದ್ದಾರೆ.

ಒಂದೇ ಉಸಿರಿನಲ್ಲಿ 28 ಬಾರಿ ಫ್ರಂಟ್ ಫ್ಲಿ‍ಪ್ ಸೋಮರ್‌ಸಾಲ್ಟ್‌ (ಮುಂಭಾಗಕ್ಕೆ ತಿರುಗಿದ) ಕೆ.ಚಂದ್ರಶೇಖರ ರೈ ಸೂರಿಕುಮೇರು ಅವರು ವರ್ಲ್ಡ್‌ ವೈಡ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪದ್ಮಶೀರ್ಷಾಸನದಲ್ಲಿ 29 ನಿಮಿಷ 6 ಸೆಕೆಂಡ್ ನಿಂತ ಯೋಗ ಪಟು ಕವಿತಾ ಅಶೋಕ್ ಮತ್ತು ಗಂಡಬೇರುಂಡಾಸನದಲ್ಲಿ 15 ನಿಮಿಷ 36 ಸೆಕೆಂಡು ನಿಂತ ಎಸ್‌.ಮಧುಲಶ್ರೀ ಅವರು ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸೇರಿಕೊಂಡಿದ್ದಾರೆ ಎಂದು ಚಂದ್ರಹಾಸ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಗಳೂರು ಮಹಾನಗರ ಪಾಲಿಕೆ ಈಜುಕೊಳದ ನಿರ್ವಹಣೆ ಮಾಡುತ್ತಿರುವ ಚಂದ್ರಶೇಖರ್ ಜೀವರಕ್ಷಕರಾಗಿಯೂ ಈಜು ತರಬೇತುದಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಏಪ್ರಿಲ್ 13ರಂದು ಒಂದೇ ಉಸಿರಿನಲ್ಲಿ 28 ಬಾರಿ ಮುಂಭಾಗದ ತಿರುವು ಪ್ರದರ್ಶಿಸಿದ್ದಾರೆ. ಈ ಹಿಂದೆ ಎರಡು ಬಾರಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಅವರು ಸ್ಥಾನ ಗಳಿಸಿದ್ದರು ಎಂದು ತಿಳಿಸಿದರು.

ಬೆಥನಿ ಮತ್ತು ನಜರೆತ್ ವಿದ್ಯಾಸಂಸ್ಥೆಗಳಲ್ಲಿ ಯೋಗ ತರಬೇತಿ ನೀಡುತ್ತಿರುವ ಕವಿತಾ, ಈಜುಗಾರ್ತಿಯೂ ಆಗಿದ್ದಾರೆ. 2004ರಲ್ಲಿ ರಾಜ್ಯಮಟ್ಟದ ಯೋಗ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ಅವರು 2007ರಲ್ಲಿ ಅಂತರರಾಷ್ಟ್ರೀಯ ಮಟ್ಟದ ಯೋಗದಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದ್ದರು. ಪದ್ಮಶೀರ್ಷಾಸನದಲ್ಲಿ ಕೇರಳದ ಕಿರಣ್ ಸುರೇಂದ್ರನ್ ಮಾಡಿದ್ದ 25 ನಿಮಿಷ 8 ಸೆಕೆಂಡುಗಳ ದಾಖಲೆಯನ್ನು ಕವಿತಾ ಮುರಿದಿದ್ದಾರೆ. ಮಾರ್ಚ್ 23ರಂದು ಅವರ ಈ ದಾಖಲೆ ಮೂಡಿಬಂದಿದೆ ಎಂದು ಚಂದ್ರಹಾಸ ತಿಳಿಸಿದರು. 

ಎಂ.ಸರವಣನ್ ಹಾಗೂ ತಮಿಳ್ ಸೆಲ್ವಿ ದಂಪತಿಯ ಪುತ್ರಿ ಮಧುಲಶ್ರೀ ಅವರು ಲೇಡಿಹಿಲ್ ಇಂಗ್ಲಿಷ್ ಹೈಯರ್ ಪ್ರೈಮರಿ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ. ಮಾರ್ಚ್ 21ರಂದು ಅವರ ದಾಖಲೆ ಆಗಿತ್ತು ಎಂದು ವಿವರಿಸಿದರು.

‘36 ಫ್ರಂಟ್ ಫ್ಲಿ‍ಪ್ ಸೋಮರ್‌ಸಾಲ್ಟ್‌ ಪ್ರದರ್ಶಿಸಿದ ಕ್ಯಾಲಿಫೋರ್ನಿಯಾದ ಲ್ಯಾನ್ಸ್ ಡೇವಿಸ್ ಗಿನಿಸ್ ದಾಖಲೆ ಮಾಡಿದ್ದರು. ಆ ದಾಖಲೆ ಮುರಿಯಲು ಪ್ರಯತ್ನಿಸುತ್ತಿದ್ದೇನೆ’ ಎಂದು ಚಂದ್ರಶೇಖರ ರೈ ತಿಳಿಸಿದರು.

ಕವಿತಾ ಅಶೋಕ್‌, ಎಸ್‌. ಮಧುಲಶ್ರೀ ಮತ್ತು ಸಿಸ್ಟರ್ ಜೆನಿಫರ್ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT