ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜನರಿಗೆ ಅಡ್ಡಿಪಡಿಸಿ ನಮಾಜ್‌ ನಡೆಸಲು ಅವಕಾಶವಿಲ್ಲ

ಎಲ್ಲಾ ಧಾರ್ಮಿಕ ಆಚರಣೆಗಳಿಗೂ ಒಂದೇ ರೀತಿಯ ಕ್ರಮವಹಿಸಿ: ಜಿಲ್ಲಾ ವಕ್ಫ್‌ ಸಲಹಾ ಸಮಿತಿ
Published 30 ಮೇ 2024, 6:26 IST
Last Updated 30 ಮೇ 2024, 6:26 IST
ಅಕ್ಷರ ಗಾತ್ರ

ಮಂಗಳೂರು: 'ಮಸೀದಿಯ ಆವರಣ ಗೋಡೆಯ ಹೊರಗಡೆ ಅಥವಾ ರಸ್ತೆಗಳಲ್ಲಿ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುವಂತೆ ಅಥವಾ ವಾಹನ ಸಂಚಾರಕ್ಕೆ ತೊಂದರೆಯಾಗುವ ನಮಾಜ್ ನಿರ್ವಹಿಸಲು ಇಸ್ಲಾಮಿನ ನಿಯಮಗಳಲ್ಲಿ ಅವಕಾಶ ಇಲ್ಲ' ಎಂದು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್‌ ಸಲಹಾ ಸಮಿತಿ ತಿಳಿಸಿದೆ.

ಕಂಕನಾಡಿಯ ಮಸೀದಿಯ ಮುಂಭಾಗದ ರಸ್ತೆಯಲ್ಲಿ ಈಚೆಗೆ ನಮಾಜ್‌ ನಡೆಸಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿರುವ ಕುರಿತು ಸ್ಪಷ್ಟನೆ ನೀಡಿದ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್‌, ‘ಮುಸ್ಲಿಮರು ಶುಕ್ರವಾರ ಮಧ್ಯಾಹ್ನದ ನಮಾಜನ್ನು ಸಾಮೂಹಿಕವಾಗಿ ನಿರ್ವಹಿಸಬೇಕಾಗಿದ್ದು, ಇದಕ್ಕಾಗಿ ತಮ್ಮ ಮನೆ ಪರಿಸರದ ಅಥವಾ ಕೆಲಸ ಮಾಡುವ ಸ್ಥಳದ ಸಮೀಪದ ಮಸೀದಿಗೆ ತೆರಳುತ್ತಾರೆ. ಜಿಲ್ಲೆಯ ಎಲ್ಲ ಜುಮ್ಮಾ ಮಸೀದಿಗಳಲ್ಲೂ ಶುಕ್ರವಾರದ ಸಾಮೂಹಿಕ ನಮಾಜ್‌ ನಿರ್ವಹಿಸಲು ಅಗತ್ಯವಿರುವಷ್ಟು ಸ್ಥಳಾವಕಾಶವಿದೆ. ನಗರದ ಮಸೀದಿಗಳಲ್ಲಿ ಈ ವೇಳೆ ತುಸು ಹೆಚ್ಚಿನ ಜನಸಂದಣಿ ಇರುತ್ತದೆ. ಇನ್ನೂ ಹೆಚ್ಚಿನ ಜನರು ಬಂದರೆ, ಮಸೀದಿಯ ಆವರಣಗೋಡೆಯ ಒಳಗಡೆ ಇರುವ  ಖಾಲಿ ಜಾಗದಲ್ಲಿ ಚಾಪೆ ಹಾಕಿ ನಮಾಜ್‌ ನೆರವೇರಿಸಲು ಬಹುತೇಕ ಮಸೀದಿಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಹೀಗಾಗಿ, ಸಾರ್ವಜನಿಕ ರಸ್ತೆಯಲ್ಲಿ ನಮಾಜ್‌ ನೆರವೇರಿಸುವ ಅಗತ್ಯವೇ ಬರುವುದಿಲ್ಲ’ ಎಂದು ತಿಳಿಸಿದ್ದಾರೆ.

‘ಶುಕ್ರವಾರದ ಸಾಮೂಹಿಕ ನಮಾಜ್‌ ಸಾಮಾನ್ಯವಾಗಿ ಕೇವಲ ಐದಾರು ನಿಮಿಷಗಳಲ್ಲಿ ಮುಗಿಯುತ್ತದೆ. ಇಷ್ಟೊಂದು ಸಣ್ಣ ಅವಧಿಯಲ್ಲಿ ರಸ್ತೆಯ ಒಂದು ಭಾಗದಲ್ಲಿ ನಿಂತು ನಮಾಜ್ ನಿರ್ವಹಿಸಿದವರ ಮೇಲೆ  ಪೊಲೀಸರು ಪ್ರಕರಣ ದಾಖಲಿಸಿರುವುದು ಖಂಡನೀಯ’ ಎಂದು ಅವರು ತಿಳಿಸಿದ್ದಾರೆ.

‘ಜಿಲ್ಲೆಯಲ್ಲಿ ನಡೆಯುವ ಧಾರ್ಮಿಕ ಉತ್ಸವಗಳ ಸಂದರ್ಭದಲ್ಲಿ ಪೂರ್ತಿ ರಸ್ತೆಯನ್ನೇ ಬಂದ್‌ ಮಾಡಿ, ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಲಾಗುತ್ತದೆ. ನಗರದ ಕೇಂದ್ರ ಭಾಗದ ಹಲವು ಧಾರ್ಮಿಕ ಕೇಂದ್ರಗಳಲ್ಲಿ ನಿತ್ಯವೂ ರಸ್ತೆಯಲ್ಲೇ ಧಾರ್ಮಿಕ ಆಚರಣೆಗಳು ನಡೆಯುತ್ತವೆ. ರಸ್ತೆಯಲ್ಲೇ ವಾಹನ ನಿಲುಗಡೆ ಮಾಡಲಾಗುತ್ತದೆ’ ಎಂದು  ಅವರು ಬೊಟ್ಟು ಮಾಡಿದ್ದಾರೆ.

‘ಜಿಲ್ಲೆಯ ಸಾರ್ವಜನಿಕ ರಸ್ತೆಗಳಲ್ಲಿ ನಡೆಯುವ ಎಲ್ಲ ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿಯೂ ಪೊಲೀಸರು ಒಂದೇ ರೀತಿಯ ಕ್ರಮವಹಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT