ಶುಕ್ರವಾರ, ಮಾರ್ಚ್ 31, 2023
22 °C

ನಂತೂರು: ಟಿಪ್ಪರ್‌-ಸ್ಕೂಟರ್ ಡಿಕ್ಕಿ, ಬಾಲಕಿ ಸೇರಿ ಇಬ್ಬರು ಸ್ಥಳದಲ್ಲೇ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಇಲ್ಲಿನ‌ ನಂತೂರು ವೃತ್ತದಲ್ಲಿ ಶನಿವಾರ ಮಧ್ಯಾಹ್ನ ‌ಟಿಪ್ಪರ್ ನಡಿ ಸ್ಕೂಟರ್ ಸಿಲುಕಿ ಸಂಭವಿಸಿದ ಅಪಘಾತದಲ್ಲಿ ಬಾಲಕಿ ಸೇರಿ ಇಬ್ಬರು ಮೃತಪಟ್ಟಿದ್ದಾರೆ. 

ಸ್ಕೂಟರ್ ಸವಾರ, ನಗರದ ಸುಲ್ತಾನ್ ಬತ್ತೇರಿಯ ಸ್ಯಾಮ್ಯುಯೆಲ್ ಜೇಸುದಾಸ್ (66) ಹಾಗೂ ಅವರ‌ ಮಗನ ಪತ್ನಿಯ ದೊಡ್ಡಮ್ಮನ ಮಗಳು, ತೊಕ್ಕೊಟ್ಟಿನ ಭೂಮಿಕಾ (17) ಮೃತರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತೊಕ್ಕೊಟ್ಟಿನಿಂದ ಭೂಮಿಕಾ ಅವರನ್ನು ತಮ್ಮ‌ ಸುಲ್ತಾನ್ ಬತ್ತೇರಿಯ ಮನೆಗೆ ಸ್ಯಾಮ್ಯುಯೆಲ್ ಅವರು ಕರೆದೊಯ್ಯುವಾಗ ದುರ್ಘಟನೆ ಸಂಭವಿಸಿದೆ. 

ಸ್ಕೂಟರ್ ಹಾಗೂ ಟಿಪ್ಪರ್ ಗಳೆರಡೂ ಪಂಪ್‌ವೆಲ್‌ನಿಂದ ಕೆಪಿಟಿ ಕಡೆಗೆ ಸಂಚರಿಸುತ್ತಿದ್ದವು. ನಂತೂರು ವೃತ್ತದಲ್ಲಿ ಸಾಗುವಾಗ ಟಿಪ್ಪರ್ ಚಾಲಕನಿಗೆ ಎದುರಿನಲ್ಲಿ ಹೋಗುತ್ತಿದ್ದ ಸ್ಕೂಟರ್ ಸರಿಯಾಗಿ ಕಾಣಿಸಿರಲಿಲ್ಲ. ಸ್ಕೂಟರ್‌ಗೆ ಟಿಪ್ಪರ್ ಡಿಕ್ಕಿಯಾಗಿತ್ತು‌. ರಸ್ತೆ ಬಿದ್ದ ಸವಾರರ ಮೇಲೆಯೆ ಟಿಪ್ಪರ್ ಚಕ್ರ ಹಾದು ಹೋಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸಂಚಾರ ದಟ್ಟಣೆ: ನಂತೂರು ವೃತ್ತದಲ್ಲಿ ಅಪಘಾತ ಸಂಭವಿಸಿದ್ದರಿಂದ ಈ ಪರಿಸರದಲ್ಲಿ ಶನಿವಾರ ಮಧ್ಯಾಹ್ನ ಅರ್ಧ ಗಂಟೆಗೂ ಹೆಚ್ಚು ಸಮಯ ಟ್ರಾಫಿಕ್ ಜಾಮ್‌ ಉಂಟಾಗಿತ್ತು. ಕದ್ರಿಯಿಂದ ನಂತೂರುವರೆಗೆ, ನಂತೂರಿನಿಂದ‌ ಬಿಕರ್ನಕಟ್ಟೆ‌ ಕೈಕಂಬ ಜಂಕ್ಷನ್‌ವರೆಗೆ, ಕೆಪಿಟಿಯಿಂದ ಪಂಪ್ವೆಲ್ ವರೆಗೂ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಆಕ್ರೋಶಗೊಂಡ ಸ್ಥಳೀಯರು ಟಿಪ್ಪರ್‌ಗೆ ಕಲ್ಲುತೂರಿದ್ದು, ಗಾಜುಗಳು ಪುಡಿಯಾಗಿವೆ. ಪೊಲೀಸರು ಟಿಪ್ಪರ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಧಾವಿಸಿದ ಸಹಾಯಕ ಪೊಲೀಸ್ ಕಮಿಷನರ್ ಗೀತಾ ಕುಲಕರ್ಣಿ ಹಾಗೂ ಇತರ ಪೊಲೀಸ್ ಅಧಿಕಾರಿಗಳ ಜೊತೆಗೂ ಸಾರ್ವಜನಿಕರು ಮಾತಿನ ಚಕಮಕಿ ನಡೆಸಿದರು.

ಅಜಾಗರೂಕತೆಯಿಂದ ಟಿಪ್ಪರ್ ಚಲಾಯಿಸಿದ್ದಕ್ಕಾಗಿ ಚಾಲಕ ಸತೀಶ್ ಗೌಡ ವಿರುದ್ದ ಸಂಚಾರ ಪೂರ್ವ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು