‘ಸಾರ್ವಜನಿಕ ಪ್ರದೇಶದಲ್ಲಿ ತಿರುಗಾಡಿ ವಿಚಿತ್ರ ವರ್ತನೆ ತೋರಿದ್ದ ಹಸುವನ್ನು ಸ್ಥಳೀಯರು ಕಟ್ಟಿ ಹಾಕಿದ್ದರು. ಅದರ ಲಕ್ಷಣಗಳನ್ನು ಗಮನಿಸಿದಾಗ ಅದಕ್ಕೆ ರೇಬಿಸ್ ಇರುವುದು ದೃಢಪಟ್ಟಿದೆ. ಅದಕ್ಕೆ ದಯಾಮರಣ ನೀಡಲಾಗಿದೆ’ ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಅರುಣ್ ಕುಮಾರ್ ಶೆಟ್ಟಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಜೊಲ್ಲು ಸ್ಪರ್ಶಿಸದಿರಿ: ಕೋಟೆಕಾರು ಸರ್ಕಾರಿ ಪಶು ಆಸ್ಪತ್ರೆಯ ಪಶು ವೈಧ್ಯಾಧಿಕಾರಿ ಡಾ.ಗಜೇಂದ್ರ ಕುಮಾರ್, ‘ಈ ಹಸುವಿಗೆ ರೇಬಿಸ್ ಇರುವ ಶಂಕೆ ಇದೆ. ಇದನ್ನು ದೃಢೀಕರಿಸಲು ಹಸುವಿನ ಮಿದುಳನ್ನು ಪ್ರಯೋಗಾಲಯಕ್ಕೆ ಕಳುಹಿಸಬೇಕಾಗುತ್ತದೆ. ರೇಬಿಸ್ ಪೀಡಿತ ಹಸುವಿನಿಂದ ಮನುಷ್ಯರಿಗೆ ರೇಬಿಸ್ ಹರಡುವ ಸಾಧ್ಯತೆ ಕಡಿಮೆ. ಆದರೆ ರೋಗಗ್ರಸ್ತ ಹಸುವಿನ ಜೊಲ್ಲು ತೆರೆದ ಗಾಯಕ್ಕೆ ತಗುಲಿದರೆ ಮಾತ್ರ, ಅದರಿಂದ ಮನುಷ್ಯರಿಗೂ ರೇಬಿಸ್ ಹರಡಲು ಸಾಧ್ಯವಿದೆ. ಹಾಗಾಗಿ ಅದರ ಜೊಲ್ಲು ತಾಗದಂತೆ ಎಚ್ಚರವಹಿಸಬೇಕು’ ಎಂದು ತಿಳಿಸಿದ್ದಾರೆ.
‘ಹುಚ್ಚು ನಾಯಿಯ ಕಡಿತದಿಂದ ಹಸುವಿಗೆ ರೇಬಿಸ್ ತಗುಲಿರಬಹುದು. ರೇಬಿಸ್ ತಗುಲಿದ ಹಸುವು ಹೆಚ್ಚು ಕಾಲ ಬದುಕಲು ಸಾಧ್ಯವಿಲ್ಲ’ ಎಂದರು.