ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ತರಗತಿಯಲ್ಲಿ ಸಾವರ್ಕರ್‌ ಭಾವಚಿತ್ರ ಅಳವಡಿಸಿ, ನಂತರ ತೆರವು

Last Updated 8 ಜೂನ್ 2022, 14:44 IST
ಅಕ್ಷರ ಗಾತ್ರ

ಮಂಗಳೂರು: ನಗರದ ವಿಶ್ವವಿದ್ಯಾಲಯ ಕಾಲೇಜಿನ ತರಗತಿಯೊಂದರಲ್ಲಿ ವಿದ್ಯಾರ್ಥಿಗಳು ವೀರ ಸಾವರ್ಕರ್‌ ಅವರ ಭಾವಚಿತ್ರವನ್ನು ಅಳವಡಿಸಿ ಅದರ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟಿದ್ದಾರೆ. ಆಡಳಿತ ಮಂಡಳಿಯ ಅನುಮತಿ ಪಡೆಯದೆಯೇ ಅಳವಡಿಸಿದ್ದ ಈ ಭಾವಚಿತ್ರವನ್ನು ನಂತರ ತೆರವುಗೊಳಿಸಲಾಗಿದೆ.

ಕೆಲ ವಿದ್ಯಾರ್ಥಿಗಳು ಭಾರತ ಮಾತೆ ಹಾಗೂ ವೀರ ಸಾವರ್ಕರ್‌ ಭಾವಚಿತ್ರವನ್ನು ತರಗತಿಯೊಂದರ ಗೋಡೆಯಲ್ಲಿ ಕರಿಹಲಗೆ ಬಳಿ ಸೋಮವಾರ ಸಂಜೆ ಅಳವಡಿಸಿದ್ದರು. ಭಾವಚಿತ್ರ ಅಳವಡಿಸುತ್ತಿರುವ ವಿಡಿಯೊವನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟಿದ್ದರು. ಕೆಲವು ವಿದ್ಯಾರ್ಥಿಗಳು ಇದನ್ನು ಪ್ರಾಂಶುಪಾಲರಾದ ಅನಸೂಯ ರೈ ಅವರ ಗಮನಕ್ಕೆ ತಂದಿದ್ದರು ಎಂದು ಗೊತ್ತಾಗಿದೆ.

ಅನುಮತಿ ಪಡೆಯದೆಯೇ ತರಗತಿಯಲ್ಲಿ ಭಾವಚಿತ್ರ ಅಳವಡಿಸಿದ್ದಕ್ಕೆ ಪ್ರಾಂಶುಪಾಲರು ಮಂಗಳವಾರ ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಭಾವಚಿತ್ರಗಳನ್ನು ತೆರವುಗೊಳಿಸುವಂತೆಯೂ ಸೂಚಿಸಿದ್ದರು.

ಭಾವಚಿತ್ರ ಅಳವಡಿಸಿದ್ದಕ್ಕೆ ವಿದ್ಯಾರ್ಥಿಗಳು ಕ್ಷಮಾಪಣೆಯನ್ನೂ ಕೋರಿದ್ದಾರೆ. ಭಾವಚಿತ್ರ ಅಳವಡಿಸಿದ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಮೂಲಕ ಕಾಲೇಜಿನ ಶಿಸ್ತನ್ನು ಉಲ್ಲಂಘಿಸಿದ ಆರೋಪದ ಮೇರೆಗೆ ವಿದ್ಯಾರ್ಥಿಗಳಿಂದ ಕ್ಷಮಾಪಣೆ ಪತ್ರವನ್ನೂ ಪಡೆಯಲಾಗಿದೆ ಎಂದು ಗೊತ್ತಾಗಿದೆ.

ಈ ಘಟನೆಯನ್ನು ಖಂಡಿಸಿರುವ ಯುವ ಕಾಂಗ್ರೆಸ್‌ನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್‌ ಬಿ.ಎಸ್‌., ‘ತರಗತಿಯಲ್ಲಿ ಈ ರೀತಿ ಭಾವಚಿತ್ರ ಅಳವಡಿಸುವುದಕ್ಕೆ ಅನುಮತಿ ನೀಡಿದ್ದು ಯಾರು’ ಎಂದು ಪ್ರಶ್ನಿಸಿದ್ದಾರೆ.

‘ಇದು ಷಡ್ಯಂತ್ರದ ಒಂದು ಭಾಗ. ವಿದ್ಯಾರ್ಥಿಗಳ ವಿರುದ್ಧ ಕಾಲೇಜಿನ ಆಡಳಿತ ಮಂಡಳಿ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳನ್ನು ಪ್ರಚೋದಿಸುತ್ತಿರುವವರು ಯಾರು ಎಂಬ ಬಗ್ಗೆಯೂ ತನಿಖೆ ನಡೆಸಬೇಕಾದ ಅಗತ್ಯ ಇದೆ‘ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಶಿಕ್ಷಣ ಸಂಸ್ಥೆಗಳಲ್ಲಿ ಅನಪೇಕ್ಷಿತ ಘಟನೆಗಳು ನಡೆಯುವುದಕ್ಕೆ ಅವಕಾಶ ಕಲ್ಪಿಸಬಾರದು. ನಮಗೆ ಮಹಾತ್ಮ ಗಾಂಧಿ ಅವರೇ ಮಾದರಿ. ಶಿಕ್ಷಣ ಸಂಸ್ಥೆಗಳಲ್ಲಿ ಯಾವ ಮಹಾನೀಯರ ಭಾವಚಿತ್ರಗಳನ್ನು ಅಳವಡಿಸಬಹುದು ಎಂಬ ಬಗ್ಗೆ ಶಿಕ್ಷಣ ಇಲಾಖೆಯು ಸ್ಪಷ್ಟ ಸುತ್ತೋಲೆಯನ್ನು ಹೊರಡಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT