ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ್ಪಿನಂಗಡಿ: ಟೈರ್‌ ರಿಸೋಲ್‌ ಅಂಗಡಿಯ ಚೇಂಬರ್ ಸಿಡಿದು ವ್ಯಕ್ತಿ ಸಾವು

ಟೈರ್‌ ರಿಸೋಲ್‌ ಅಂಗಡಿಯಲ್ಲಿ ಅವಘಡ
Last Updated 19 ಜನವರಿ 2023, 5:06 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ಇಲ್ಲಿನ ಗಾಂಧಿಪಾರ್ಕ್‌ನಲ್ಲಿ ವಾಹನಗಳ ಚಕ್ರಗಳನ್ನು ರಿಸೋಲ್ ಮಾಡುವ ಅಂಗಡಿಯ ಚೇಂಬರ್ ಸಿಡಿದು ಅದರ ಮುಚ್ಚಳಗಳು ಹೊರಗೆ ಹಾರಿದ್ದು, ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟರು. ಈ ದುರ್ಘಟನೆಯಿಂದ ಅಂಗಡಿಗೂ ಹಾನಿ ಉಂಟಾಗಿದ್ದು, ಎದುರು ಭಾಗದ ಗೋಡೆ ಮಗುಚಿ ಬಿದ್ದಿದೆ.

ಅಂಗಡಿಯ ಪಾಲುದಾರ ಆಲಂಕಾರು ಕೊಂಡಾಡಿ ನಿವಾಸಿ ರಾಜೇಶ್ ಪೂಜಾರಿ(43) ಮೃತ ವ್ಯಕ್ತಿ. ಟಯರ್‌ಗಳನ್ನು ರಿಸೊಲ್‌ ಮಾಡುವಾಗ ಚೇಂಬರ್‌ನೊಳಗೆ ತುಂಬಿಸಿದ ಗಾಳಿ ಹಾಗೂ ಹಬೆಯ ಒತ್ತಡ ಹೆಚ್ಚಾಗಿ, ಅದು ಸಿಡಿದಿತ್ತು ಎಂದು ಗೊತ್ತಾಗಿದೆ.

ಟೈರ್‌ ರಿಸೋಲ್‌ ಮಾಡುವಾಗ ಅದನ್ನು ಯಂತ್ರದ ಚೇಂಬರ್‌ನೊಳಗೆ ಟೈರ್‌ಗಳನ್ನು ಇಡುತ್ತಾರೆ. ಅದರೊಳಗೆ ಗಾಳಿ ಹಾಗೂ ಹಬೆ ತುಂಬಿಸಲಾಗುತ್ತದೆ. ಈ ರೀತಿ ಮಾಡುವ ಸಂದರ್ಭದಲ್ಲಿ ಒತ್ತಡ ಹೆಚ್ಚಾಗಿ ಚೇಂಬರ್ ಸಿಡಿದಿದೆ. ಸುಮಾರು 30 ಕೆ.ಜಿ.ಯಷ್ಟು ತೂಕವಿರುವ ಅದರ ಎರಡೂ ಮುಚ್ಚಳಗಳು ರಭಸದಿಂದ ಹೊರಕ್ಕೆ ಚಿಮ್ಮಿವೆ. ಒಂದು ಮುಚ್ಚಳ ಅಂಗಡಿಯ ಎದುರು ಭಾಗದ ಗೋಡೆಗೆ ಬಡಿದರೆ, ಇನ್ನೊಂದು ಮುಚ್ಚಳ ಕೆಲಸದಲ್ಲಿ ನಿರತರಾಗಿದ್ದ ರಾಜೇಶ್ ಅವರಿಗೆ ಬಡಿದಿದೆ. ತಲೆಗೆ ಹಾಗೂ ಎದೆಯ ಭಾಗಕ್ಕೆ ಗಂಭೀರ ಗಾಯಗೊಂಡ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು.

ಮಂಗಳೂರಿನ ಹುಸೈನ್ ಹಾಗೂ ರಾಜೇಶ್ ಪಾಲುದಾರಿಕೆಯಲ್ಲಿ ಈ ಅಂಗಡಿ ನಡೆಸುತ್ತಿದ್ದರು. ಇವರಿಬ್ಬರೇ ಇಲ್ಲಿ ದುಡಿಯುತ್ತಿದ್ದರು. ಘಟನೆಯ ಸಂದರ್ಭ ಹುಸೈನ್ ಅಲ್ಲಿಯೇ ಇದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಇದಕ್ಕೆ ತಾಗಿಕೊಂಡೇ ಟೈರ್ ಪಂಕ್ಚರ್ ಸರಿಪಡಿಸುವ ಅಂಗಡಿಯಿದ್ದು, ಅಲ್ಲಿದ್ದ ದಿನೇಶ್ ಎಂಬವರೂ ಅಪಾಯದಿಂದ ಪಾರಾಗಿದ್ದಾರೆ.

ಮನೆಯ ಆಧಾರ ಸ್ತಂಭ: ರಾಜೇಶ್ ಕುಟುಂಬಕ್ಕೆ ಅವರ ದುಡಿಮೆಯೇ ಆಧಾರವಾಗಿತ್ತು. ಮನೆಯಲ್ಲಿ ಸ್ವಲ್ಪ ಮಟ್ಟಿನ ಕೃಷಿ ಬಿಟ್ಟರೆ ಕುಟುಂಬದ ಎಲ್ಲಾ ಖರ್ಚು– ವೆಚ್ಚಗಳು ಇವರ ದುಡಿಮೆಯಿಂದಲೇ ಭರಿಸಬೇಕಿತ್ತು. ಅವರ ಈ ಅಕಾಲಿಕ ಮರಣದಿಂದಾಗಿ ಇಬ್ಬರು ಸಣ್ಣ ಮಕ್ಕಳನ್ನು ಹೊಂದಿರುವ ಇವರ ಕುಟುಂಬದ ಆಧಾರ ಸ್ತಂಭವೇ ಕಳಚಿಬಿದ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT