ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರ ಕೆಲಸಕ್ಕೆ ತುಡಿಯುತ್ತಿದ್ದ ಬಂಗೇರ: ಸಿದ್ದರಾಮಯ್ಯ

ಅಗಲಿದ ಮಾಜಿ ಶಾಸಕ ದಿ.‌ವಸಂತ ಬಂಗೇರಗೆ ನುಡಿನಮನ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Published 22 ಮೇ 2024, 4:52 IST
Last Updated 22 ಮೇ 2024, 4:52 IST
ಅಕ್ಷರ ಗಾತ್ರ

ಬೆಳ್ತಂಗಡಿ: ‘ವಸಂತ ಬಂಗೇರ ಅವರು ಸದಾ ಬಡವರ ಪರ, ಸತ್ಯದ ಪರ ಇದ್ದರು. ಬಡವರ ಕೆಲಸ ಮಾಡಿಕೊಡಲು ಯಾವ ಹಂತಕ್ಕೆ ಬೇಕಾದರೂ ಹೋಗುತ್ತಿದ್ದರು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾಲ್ಲೂಕಿನ ಕುವೆಟ್ಟುವಿನಲ್ಲಿ ಏರ್ಪಡಿಸಿದ್ದ ಮಾಜಿ ಶಾಸಕ ದಿ.‌ವಸಂತ ಬಂಗೇರ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಂಗಳವಾರ ಮಾತನಾಡಿದರು.

'ಬಡವರ ಸಮಸ್ಯೆ ಬಗೆಹರಿಸುವುದೇ ಅವರಿಗೆ ಆದ್ಯತೆಯ ವಿಷಯವಾಗಿತ್ತು. ಮಾನವಿಯತೆ ಇದ್ದ ಮನುಷ್ಯ. ಬದುಕನ್ನು ಸಾರ್ಥಕ ಮಾಡಿಕೊಂಡ ವ್ಯಕ್ತಿ' ಎಂದು ಕೊಂಡಾಡಿದರು.

'ಅಭಿವೃದ್ಧಿ ಪರ ಹಾಗೂ ಜನಪರ ಕಾಳಜಿ ಇದ್ದ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಬಂಗೇರ ಅವರು ಅಪರೂಪದ ರಾಜಕಾರಣಿ. ಅವರು ಇಷ್ಟು ಬೇಗ ಅಗಲುತ್ತಾರೆ ಎಂದುಕೊಂಡಿರಲಿಲ್ಲ. ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾದಾಗ ಬಹಳ ದಿನ ಬದುಕುತ್ತಾರೆ ಎಂದುಕೊಂಡಿದ್ದೆ. ಅವರ ಕುಟುಂಬ ವರ್ಗದ ದುಃಖದಲ್ಲಿ ನಾನೂ ಪಾಲುದಾರ' ಎಂದರು.

ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, 'ಜನ ಸಾಮಾನ್ಯರಿಗೆ ಸಮಸ್ಯೆಯಾದಾಗ ಬಂಗೇರ ಅವರಿಗೆ ಕೋಪ ಎಲ್ಲಿಂದ ಬರುತ್ತಿತ್ತೋ ಗೊತ್ತಾಗುತ್ತಿರಲಿಲ್ಲ. ಆಸ್ಪತ್ರೆಯಲ್ಲಿದ್ದಾಗಲೂ ಬಂಗೇರ ಅವರು ಜನರ ಸಮಸ್ಯೆ ಬಗ್ಗೆ ಚರ್ಚೆ ಮಾಡುತ್ತಿದ್ದರು. ಅಧಿಕಾರ ಇಲ್ಲದಿದ್ದಾಗಲೂ ಬಂಗೇರ  ವರ್ಚಸ್ಸು ಉಳಿಸಿಕೊಂಡಿದ್ದರು. ಅವರ ಜೀವನವೇ ರಾಜಕಾರಣಿಗಳಿಗೆ ಸಂದೇಶ' ಎಂದರು.

ಸೋಲೂರು ಮಠದ ವಿಖ್ಯಾತನಂದ ಸ್ವಾಮೀಜಿ, ‘ಬಂಗೇರ ಅವರು ಸಮಾಜದ ಶಕ್ತಿ. ಅವರ ಸೇವಾ ಮನೋಭಾವ ಎಲ್ಲರಿಗೂ ಮಾದರಿ’ ಎಂದರು.
ಪ್ರಾಧ್ಯಾಪಕ ಚೇತನ್ ಸೋಮೇಶ್ವರ, ‘ರಾಜಕೀಯವಾಗಿ ಅವರು ಯಾವುದೇ ಪಕ್ಷದಲ್ಲೇ ಇದ್ದರೂ ಜನ ಅವರ ಹೃದಯದ ಭಾವಕ್ಕೆ ಬೆಲೆ ಕೊಡುತ್ತಿದ್ದರು. ಸೋತಾಗಲೂ ಸ್ಥೈರ್ಯ ಕಳೆದುಕೊಳ್ಳದೆ ಜನರ ಜತೆ ನಿಲ್ಲುತ್ತಿದ್ದ ಅವರದು ಹೆಂಗರುಳಿನ ವ್ಯಕ್ತಿತ್ವ' ಎಂದರು.

ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಲಾರೆನ್ಸ್ ಮುಕ್ಕುಯಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಉಮ್ಮರ್ ಕುಂಞ ಮುಸ್ಲಿಯಾರ್ ನುಡಿ ನಮನ ಸಲ್ಲಿಸಿದರು.

ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ, ಶಾಸಕರಾದ ಅಶೋಕ್ ಕುಮಾರ್ ರೈ, ಹರೀಶ್ ಪೂಂಜ, ಮಾಜಿ ಸಚಿವರಾದ ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಗಂಗಾಧರ ಗೌಡ, ಮಾಜಿ ಶಾಸಕರಾದ ಜೆ.ಆರ್.ಲೋಬೊ, ರುಕ್ಮಯ ಪೂಜಾರಿ, ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಐವನ್ ಡಿಸೋಜ, ಆಯನೂರು ಮಂಜುನಾಥ್, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ನಾರಾಯಣ ಗುರು ವಿಚಾರ ವೇದಿಕೆಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್, ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಉಪಾಧ್ಯಕ್ಷರಾದ ಪೀತಾಂಬರ ಹೇರಾಜೆ, ಯೋಗೀಶ್ ಕುಮಾರ್, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಖಜಾಂಚಿ ಪದ್ಮರಾಜ ಆರ್., ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಪದ್ಮನಾಭ ಮಾಣಿಂಜ, ಬೆಳ್ತಂಗಡಿ ಶ್ರೀಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ಬಂಗೇರ ಅವರ ಆಪ್ತ ರವಿಶಂಕರ ಶೆಟ್ಟಿ ಬಡಾಜೆಗುತ್ತು ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು.

ಕೆ.ವಸಂತ ಬಂಗೇರರ ಪತ್ನಿ ಸುಜಿತಾ ವಿ.ಬಂಗೇರ, ಪುತ್ರಿಯರಾದ ಪ್ರೀತಿತಾ, ಬಿನುತಾ, ಅಳಿಯಂದಿರಾದ ಧರ್ಮ ವಿಜೇತ್, ಸಂಜೀವ ಕಣೆಕಲ್, ಸೋದರರಾದ ಮಾಜಿ ಶಾಸಕ ಕೆ.ಪ್ರಭಾಕರ ಬಂಗೇರ, ರಮೇಶ್ ಬಂಗೇರ, ಸಹೋದರಿ ಶಾರದಾ ಕೃಷ್ಣ, ಭಗೀರಥ ಜಿ, ಪುಷ್ಪ ನಮನ ಸಲ್ಲಿಸಿದರು.

Highlights - ವಸಂತ ಬಂಗೇರ ನುಡಿನಮನಕ್ಕೆ ಭಾರಿ ಜನ ಬಂಗೇರ ವ್ಯಕ್ತಿತ್ವ ಕೊಂಡಾಡಿದ ಮುಖಂಡರು

Cut-off box - ‘ಮಂತ್ರಿಗಿರಿಗೆ ಯಾವತ್ತೂ ಲಾಬಿ ಮಾಡಿರಲಿಲ್ಲ’ 'ಈಗ ಕೆಲವರು ಮೊದಲ ಸಲ‌ ಗೆದ್ದಾಗಲೇ ಮಂತ್ರಿ ಆಗಲು ಲಾಬಿ ಶುರು ಮಾಡುತ್ತಾರೆ. ಆದರೆ ಬಂಗೇರ ಬಿಜೆಪಿ ಜನತಾದಳವೂ ಸೇರಿದಂತೆ ಮೂರು ಪಕ್ಷಗಳಲ್ಲಿ ಐದು ಸಲ ಶಾಸಕರಾದರೂ ಯಾವತ್ತೂ ಮಂತ್ರಿ ಆಗಬೇಕೆಂದು ಲಾಬಿ ಮಾಡಿದವರಲ್ಲ. 2023ರ ಚುನಾವಣೆಯಲ್ಲಿ ರಂಜನ್ ಗೌಡ ಅವರಿಗೆ ಟಿಕೆಟ್ ಕೊಡುವಂತೆ ಕೇಳಿದ್ದರು. ಬಂಗೇರ ಅವರನ್ನೇ ಚುನಾವಣೆಗೆ ನಿಲ್ಲುವಂತೆ ಕೋರಿದ್ದೆ. ಅದಕ್ಕೆ ಒಪ್ಪಲೇ ಇಲ್ಲ. ಈ ಸಲ ಚುನಾವಣೆಗೆ ನಿಂತು ಗೆದ್ದಿದ್ದರೆ ಅವರು ಖಂಡಿತಾ ಮಂತ್ರಿ ಆಗುತ್ತಿದ್ದರು' ಎಂದು ಸಿದ್ದರಾಮಯ್ಯ ಹೇಳಿದರು.

Cut-off box - ಗೆಳೆತನ ಮೆಲುಕು ಹಾಕಿದ ಸಿ.ಎಂ. ತಮ್ಮ ಹಾಗೂ ಬಂಗೇರ ನಡುವಿನ ಸ್ನೇಹವನ್ನು ನೆನಪಿಸಿಕೊಂಡ ಮುಖ್ಯಮಂತ್ರಿ ‘ವಿಧಾನಸಭೆಗೆ ನಾನೂ ಅವರು 1983ನೇ ಇಸವಿಯಲ್ಲಿ ಪ್ರವೇಶಿಸಿದೆವು. ನಾನು ಪಕ್ಷೇತರವಾಗಿ ಸ್ಪರ್ಧಿಸಿ ಗೆದ್ದಿದ್ದೆ. ಆಗ ಬಿಜೆಪಿಯಿಂದ ಗೆದ್ದಿದ್ದ 18 ಮಂದಿಯಲ್ಲಿ ಅವರೂ ಒಬ್ಬರು. ಅವರ ನಿಷ್ಠುರ ನೇರ ನುಡಿಯ ವ್ಯಕ್ತಿತ್ವ ಇಷ್ಟವಾಗಿತ್ತು. ಎಷ್ಟೇ ಜನ ಇರಲಿ ಯಾವುದೇ ಸಂದರ್ಭವಿರಲಿ ಸತ್ಯವನ್ನು ನೇರವಾಗಿ ಹೇಳುತ್ತಿದ್ದರು. ಅವರು ಬಿಜೆಪಿಯಿಂದ ಗೆದ್ದಿದ್ದರೂ ನಾನು ಮೆಚ್ಚಿದ್ದ ಶಾಸಕರಲ್ಲಿ ಅವರೂ ಒಬ್ಬರಾಗಿದ್ದರು’ ಎಂದರು. 'ನನ್ನೊಂದಿಗೆ ಎಷ್ಟೇ ಸ್ನೇಹ ಇದ್ದರೂ ನಾನು ಮುಖ್ಯಮಂತ್ರಿ ಆಗಿದ್ದಾಗ ವೈಯಕ್ತಿಕ ಕೆಲಸಕ್ಕೆ ಯಾವತ್ತೂ ಬಂದವರಲ್ಲ.‌ ಕ್ಷೇತ್ರದ ಅಭಿವೃದ್ಧಿ ಹಾಗೂ ಬಡವರ ಕೆಲಕ್ಕೆ ಮಾತ್ರ ಬರುತ್ತಿದ್ದರು' ಎಂದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT