ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆನ್ಲಾಕ್‌ನಲ್ಲಿ ದಾಂದಲೆ: ಇಬ್ಬರ ಬಂಧನ

Last Updated 19 ಜೂನ್ 2019, 16:20 IST
ಅಕ್ಷರ ಗಾತ್ರ

ಮಂಗಳೂರು: ಅಪಘಾತದ ಗಾಯಾಳುವಿಗೆ ಚಿಕಿತ್ಸೆ ನೀಡುವುದು ವಿಳಂಬ ಆಯಿತೆಂದು ಆರೋಪಿಸಿ ಸೋಮವಾರ ನಸುಕಿನ ಜಾವ ವೆನ್ಲಾಕ್‌ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ದಾಂದಲೆ ನಡೆಸಿ, ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಹರಿಯಬಿಟ್ಟಿದ್ದ ಇಬ್ಬರನ್ನು ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಕಂಕನಾಡಿ ನಿವಾಸಿ ದೀಕ್ಷಿತ್‌ ಮತ್ತು ಅರ್ಕುಳ ಗ್ರಾಮದ ಫರಂಗಿಪೇಟೆ ನಿವಾಸಿ ನಿತಿನ್‌ ಪೂಜಾರಿ ಬಂಧಿತರು. ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಧನುಷ್‌ ಶೆಟ್ಟಿ ಎಂಬಾತ ಸೋಮವಾರ ನಸುಕಿನ ಜಾವ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದ ಬಳಿ ಅಪಘಾತದಲ್ಲಿ ಗಾಯಗೊಂಡಿದ್ದ. ಆತನನ್ನು ಆರೋಪಿಗಳು ವೆನ್ಲಾಕ್‌ ಆಸ್ಪತ್ರೆಗೆ ಕರೆತಂದಿದ್ದರು. ಗಾಯಾಳುವನ್ನು ಪರೀಕ್ಷಿಸಿದ್ದ ವೈದ್ಯರು, ಪ್ರಾಥಮಿಕ ಚಿಕಿತ್ಸೆ ನೀಡಿದ್ದರು. ತಲೆಗೆ ಪೆಟ್ಟಾಗಿದ್ದ ಕಾರಣದಿಂದ ಸಿಟಿ ಸ್ಕ್ಯಾನ್‌ ಮಾಡಿಸುವಂತೆ ಸಲಹೆ ನೀಡಿದ್ದರು.

ಆದರೆ, 45 ನಿಮಿಷಗಳಾದರೂ ಗಾಯಾಳುವನ್ನು ಸ್ಕ್ಯಾನಿಂಗ್‌ಗೆ ಕರೆದೊಯ್ಯಲು ಆಂಬುಲೆನ್ಸ್‌ ದೊರಕಿರಲಿಲ್ಲ. ಧನುಷ್‌ ಜೊತೆಗಿದ್ದ ದೀಕ್ಷಿತ್‌ ಮತ್ತು ನಿತಿನ್‌ ಸಿಟ್ಟಿಗೆದ್ದು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ದಾಂದಲೆ ನಡೆಸಿದ್ದರು. ಘಟನಾವಳಿಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟಿದ್ದರು.

ಘಟನೆಗೆ ಸಂಬಂಧಿಸಿದಂತೆ ವೆನ್ಲಾಕ್‌ ಆಸ್ಪತ್ರೆ ಅಧೀಕ್ಷಕಿ ಡಾ.ಎಚ್‌.ಆರ್‌.ರಾಜೇಶ್ವರಿ ದೇವಿ ಅವರು ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಕರ್ನಾಟಕ ವೈದ್ಯಕೀಯ ಸೇವಾ ಸಿಬ್ಬಂದಿಗಳ ವಿರುದ್ಧ ಹಿಂಸೆ ತಡೆ ಮತ್ತು ವೈದ್ಯಕೀಯ ಸೇವಾ ಉಪಕರಣಗಳ ಹಾನಿ ತಡೆ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದ ಪೊಲೀಸರು, ತನಿಖೆ ಆರಂಭಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT