ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಂದೂ ಮನಸ್ಸು ಮಾಡಿದರೆ ಈದ್‌ ಮೆರವಣಿಗೆ ಅಸಾಧ್ಯ: VHP ಮುಖಂಡ ಶರಣ್ ಪಂಪ್‌ವೆಲ್

Published : 13 ಸೆಪ್ಟೆಂಬರ್ 2024, 4:31 IST
Last Updated : 13 ಸೆಪ್ಟೆಂಬರ್ 2024, 4:31 IST
ಫಾಲೋ ಮಾಡಿ
Comments

ಮಂಗಳೂರು: ‘ಯಾರು ಜಿಹಾದಿಗಳಿದ್ದೀರಿ ನಿಮಗೆ ಎಚ್ಚರಿಕೆ ನೀಡುತ್ತಿದ್ದೇವೆ. ಮುಂದಿನ ವಾರ ನೀವು ಈದ್ ಮಿಲಾದ್‌ ಮೆರವಣಿಗೆ ಮಾಡಲಿಕ್ಕಿದೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಹಿಂದೂ ಸಮಾಜ ಮನಸ್ಸು ಮಾಡಿದರೆ ನಿಮ್ಮ ಈದ್ ಮಿಲಾದ್ ಮೆರವಣಿಗೆ ಹೋಗಲು ಸಾಧ್ಯವಿಲ್ಲ’ ಎಂದು ವಿಶ್ವ ಹಿಂದೂ ಪರಿಷತ್‌ನ (ವಿಎಚ್‌ಪಿ) ಪ್ರಾಂತ ಸಹಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಹೇಳಿದರು.

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಸಾರ್ವಜನಿಕ ಗಣೇಶೋತ್ಸವ ಮೆರವಣಿಗೆ ಸಂದರ್ಭ ನಡೆದ ಗಲಭೆಯನ್ನು ಖಂಡಿಸಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಒಕ್ಕೂಟ, ವಿಎಚ್‌ಪಿ - ಬಜರಂಗದಳದ ಆಶ್ರಯದಲ್ಲಿ ಇಲ್ಲಿನ ಮಲ್ಲಿಕಟ್ಟೆ–ಕದ್ರಿ ವೃತ್ತದ ಬಳಿ ಗುರುವಾರ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. 

‘ಕಳೆದ ಸಲ ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಹಿಂದೂಗಳ ಮೇಲೆ ಹಲ್ಲೆ ನಡೆದಿದೆ. ಮುಂದಿನ ವಾರವೂ ಅಂತಹ ಘಟನೆ ಮರುಕಳಿಸಬಹುದು. ಹಾಗಾಗಿ ಈದ್‌ ಮಿಲಾದ್‌ ಮೆರವಣಿಗೆಗೆ ನಿರ್ಬಂಧ ಹೇರಬೇಕು. ಮೆರವಣಿಗೆಗೆ ಅನುಮತಿ ನೀಡಿ, ಮುಂದೇನಾದರೂ ದುರ್ಘಟನೆ ಸಂಭವಿಸಿದರೆ ಅದಕ್ಕೆ ಸರ್ಕಾರವೇ ಹೊಣೆ. ಇದು ಸರ್ಕಾರಕ್ಕೆ ನಮ್ಮ ಎಚ್ಚರಿಕೆ’ ಎಂದರು.

‘ನಾಗಮಂಗಲದಲ್ಲಿ ನಡೆದದ್ದು ಆಕಸ್ಮಿಕ ಘಟನೆಯಲ್ಲ. ಈ ಭಯೋತ್ಪಾದಕ ಕೃತ್ಯ  ಪೂರ್ವನಿಯೋಜಿತ ಪಿತೂರಿ. ಇದರ ಹಿಂದೆ ನಿಷೇಧಿತ ಪಿಎಫ್‌ಐ ಸಂಘಟನೆ ಕೈವಾಡವಿರುವ ಸಂಶಯವಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಗಲಭೆ ವೇಳೆ ನೂರಾರು ಹಿಂದೂಗಳ ಮೇಲೆ ಹಲ್ಲೆ ನಡೆದಿದೆ. ಹತ್ತಾರು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಸಂತ್ರಸ್ತರಿಗೆ ಸರ್ಕಾರ ಪರಿಹಾರ ನೀಡಬೇಕು. ಈ ಘಟನೆ ಸಂಬಂಧ ಮುಗ್ಧ ಹಿಂದೂ ಯುವಕರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದ್ದು, ಅದನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

‘ನಾಗಮಂಗಲ ಘಟನೆಯಿಂದ ಹಿಂದೂ ಸಮಾಜ ಭಯಭೀತವಾಗಿದೆ. ಕಾರ್ಯಕ್ರಮ ಮಾಡಬೇಕಾದರೆ ಆಲೋಚಿಸುವ ಸ್ಥಿತಿ ಇದೆ. ನಮಗೆ ಪೊಲೀಸ್‌ ಇಲಾಖೆ ಹಾಗೂ ರಾಜ್ಯ ಸರ್ಕಾರದ ಮೇಲೆ ವಿಶ್ವಾಸವಿಲ್ಲ. ನಮ್ಮ ಧಾರ್ಮಿಕ ಕಾರ್ಯಕ್ರಮಗಳಿಗೆ ಮಿಲಿಟರಿ ಭದ್ರತೆ ಒದಗಿಸುವಂತೆ ಕೇಂದ್ರ ಗೃಹಸಚಿವರಿಗೆ ಮನವಿ ಸಲ್ಲಿಸುತ್ತೇವೆ’ ಎಂದರು.

ವಿಎಚ್‌ಪಿ ಮುಖಂಡ ಎಂ.ಬಿ.ಪುರಾಣಿಕ್‌, ‘ಸಾರ್ವಜನಿಕ ಗಣೇಶೋತ್ಸವ ಇರುವುದು ಸಮಾಜವನ್ನು ಒಗ್ಗೂಡಿಸುವುದಕ್ಕೆ. ಅನ್ಯರನ್ನು ಪ್ರಚೋದಿಸುವುದಕ್ಕಲ್ಲ. ಇನ್ನು ಕೆಲವೇ ವರ್ಷಗಳಲ್ಲಿ ಹಿಂದೂ ಸಮಾಜ, ಧರ್ಮ ಸಂಸ್ಕೃತಿ, ಮೌಲ್ಯಗಳನ್ನು ಸಂಪೂರ್ಣ ಅಧಃಪತನಕ್ಕೆ ತಳ್ಳಲಾಗುತ್ತದೆ. ನಾಗಮಂಡಲದ ಘಟನೆ ಇದರ ಮುನ್ನೆಚ್ಚರಿಕೆ. ಸರ್ಕಾರದ ನಿರ್ಲಕ್ಷ್ಯದಿಂದ ಈ ಅನಾಹುತ ಸಂಭವಿಸಿದೆ’ ಎಂದರು.

ವಿಎಚ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ.ಪುರುಷೋತ್ತಮ್ ಮತ್ತಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT