ಭಾನುವಾರ, ಫೆಬ್ರವರಿ 28, 2021
31 °C
ಮಂಗಳೂರಿನಲ್ಲಿ ಎನ್‌ಐಎ ಕಚೇರಿ ಸ್ಥಾಪಿಸಲು ವಿಎಚ್‌ಪಿ ಆಗ್ರಹ

ಗೋಡೆಬರಹ: ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ನಗರದಲ್ಲಿ ನಡೆದ ವಿವಾದಿತ ಗೋಡೆಬರಹ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸುವಂತೆ ಹಾಗೂ ನಗರದಲ್ಲಿ ಶಾಶ್ವತ ಎನ್‌ಐಎ ಕಚೇರಿ ಸ್ಥಾಪಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ನಂತರ ಜಿಲ್ಲಾಧಿಕಾರಿ ಮೂಲಕ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು, ಜಾಗತಿಕ ಮಟ್ಟದಲ್ಲಿ ಬೇರೂರಿರುವ ಭಯೋತ್ಪಾದನೆ ಚಟುವಟಿಕೆಯು ಕರಾವಳಿ ಜಿಲ್ಲೆಗಳಲ್ಲಿ ನೆಲೆ ಕಾಣಲು ಪ್ರಯತ್ನಿಸುತ್ತಿರುವುದು ಈ ಗೋಡೆಬರಹದಿಂದ ಬಯಲಾಗಿದೆ. ಇದೊಂದು ಆತಂಕಕಾರಿ ಘಟನೆಯಾಗಿದ್ದು, ಜಿಲ್ಲೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರನ್ನು ಬಂಧಿಸಲಾಗಿದೆ. ಅವರಿಂದ ಜಾಗತಿಕ ಭಯೋತ್ಪಾದಕ ಜಮೈಕಾದ ಶೇಕ್‌ ಅಬ್ದುಲ್ಲಾ ಫೈಝಲ್‌ನ ಪ್ರಚೋದನಕಾರಿ ಭಾಷಣ ಮತ್ತು ಉಗ್ರರ ಅಧ್ಯಯನಕ್ಕೆ ಸಂಬಂಧಿಸಿದ ಪುಸ್ತಕಗಳು ಸಿಕ್ಕಿರುವುದು ಜಿಲ್ಲೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳು ನೆಲೆಯೂರಲು ಪ್ರಯತ್ನಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಉಗ್ರರ ಪರ ಗೋಡೆಬರಹದಲ್ಲಿ ‘ನಮ್ಮನ್ನು ವಿಧ್ವಂಸಕ ಕೃತ್ಯ ನಡೆಸಲು ಉತ್ತೇಜಿಸಲು ಬರಬೇಡಿ. ಲಷ್ಕರ್‌ ಎ ತೋಯ್ಬಾ ಮತ್ತು ತಾಲಿಬಾನ್‌ಗಳಿಗೆ ಸಂಘಿಗಳನ್ನು ಯಾವ ರೀತಿ ನೋಡಿಕೊಳ್ಳಬೇಕು ಎನ್ನುವುದು ತಿಳಿದಿದೆ. ಲಷ್ಕರ್‌ ಜಿಂದಾಬಾದ್’ ಎಂದು ಬರೆಯಲಾಗಿದೆ. ಇನ್ನೊಂದೆ ಗೋಡೆಬರಹದಲ್ಲಿ ‘ಪ್ರವಾದಿ ಮಹಮ್ಮದ್‌ರಿಗೆ ವಿರೋಧಿಸಿದರೆ ನಿಮ್ಮ ತಲೆಯನ್ನು ಕಡಿಯಲಾಗುವುದು’ ಎಂದು ಬರೆಯಲಾಗಿದೆ. ಇವು ಪ್ರಚೋದನಕಾರಿ ಬರಹಗಳಾಗಿದ್ದು, ಜಿಲ್ಲೆಯಲ್ಲಿ ಜಿಹಾದಿ ಮಾನಸಿಕತೆ ಇರುವ ಯುವಕರನ್ನು ಭಯೋತ್ಪಾದನಾ ಕೃತ್ಯಕ್ಕೆ ಬಳಸಲು ಪ್ರೇರೇಪಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ತಿಳಿಸಿದರು.

ಈ ಪ್ರಕರಣವನ್ನು ಕೂಡಲೇ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕು. ಮಂಗಳೂರಿನಲ್ಲಿ ಶಾಶ್ವತವಾಗಿ ಎನ್‌ಐಎ ಕಚೇರಿಯನ್ನು ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು.

ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಗೋಪಾಲ್‌ ಕುತ್ತಾರ್‌ ನೇತೃತ್ವದಲ್ಲಿ ಪದಾಧಿಕಾರಿಗಳಾದ ಶಿವಾನಂದ ಮೆಂಡನ್‌, ಭುಜಂಗ್‌ ಕುಲಾಲ್‌, ಪುನೀತ್‌ ಅತ್ತಾವರ, ಕಾರ್ಯಕರ್ತರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು