ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಟ್ಲದ ಗ್ಯಾರೇಜ್‌ನಲ್ಲಿ ಆಕಸ್ಮಿಕ ಬೆಂಕಿ ಅವಘಡ: ಸುಟ್ಟು ಕರಕಲಾದ ಕಾರು

ವಿಟ್ಲ: ಗ್ಯಾರೇಜ್‌ನಲ್ಲಿ ಆಕಸ್ಮಿಕ ಬೆಂಕಿ ಅವಘಡ
Last Updated 15 ಮಾರ್ಚ್ 2021, 10:48 IST
ಅಕ್ಷರ ಗಾತ್ರ

ವಿಟ್ಲ: ವಿಟ್ಲ ಚಂದಳಿಕೆ ಎಂಬಲ್ಲಿರುವ ಗ್ಯಾರೇಜ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಗ್ಯಾರೇಜ್ ಹಾಗೂ ಕಾರೊಂದು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಮೇಗಿನಪೇಟೆ ನಿವಾಸಿ ಹರೀಶ್ ಅವರಿಗೆ ಸೇರಿದ ಆಶೀರ್ವಾದ್ ಕಾರು ಗ್ಯಾರೇಜ್‌ನಲ್ಲಿ ಈ ಘಟನೆ ಸೋಮವಾರ ಸಂಭವಿಸಿದೆ.

ಕಾರ್ಮಿಕರು ಗ್ಯಾರೇಜ್‌ನೊಳಗಡೆ ಕೆಲಸ ಮಾಡುತ್ತಿದ್ದ ವೇಳೆ ಹೊಗೆ ಎದ್ದು, ಬಳಿಕ ದಿಢೀರನೇ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಅವರು ಹೊರಗೆ ಓಡಿಕೊಂಡು ಬಂದಿದ್ದಾರೆ. ಒಳಗಡೆ ಇದ್ದ ಗ್ಯಾಸ್ ಸಿಲಿಂಡರ್‌ ಅನ್ನು ತಕ್ಷಣವೇ ಹೊರಗಡೆ ಎಸೆದು ದೊಡ್ಡ ಪ್ರಮಾಣದ ಅನಾಹುತ ತಪ್ಪಿಸಿದ್ದಾರೆ. ಗ್ಯಾರೇಜ್‌ನಲ್ಲಿ 10ಕ್ಕಿಂತಲೂ ಅಧಿಕ ವಾಹನಗಳಿದ್ದು, ಅವುಗಳನ್ನು ಸ್ಥಳೀಯರು ಕಾರ್ಯಾಚಣೆ ನಡೆಸಿ, ಬದಿಗೆ ಸರಿಸಿದ್ದಾರೆ.

ಪುತ್ತೂರು ಅಗ್ಮಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಅವರು ಬರುವಷ್ಟರಲ್ಲಿ ಗ್ಯಾರೇಜ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಗ್ಯಾರೇಜ್ ಒಳಗಡೆ ರಿಪೇರಿಗೆಂದು ಇರಿಸಲಾದ ಸ್ವಿಪ್ಟ್ ಕಾರು ಸಂಪೂರ್ಣವಾಗಿ ಭಸ್ಮಗೊಂಡಿದೆ. ಕೆಲವು ವಾಹನಗಳ ವಿವಿಧ ಭಾಗಗಳಾದ ಎಂಜಿನ್, ಬ್ಯಾಟರಿ ಸೇರಿದಂತೆ ಹಲವು ವಸ್ತುಗಳು, ಗ್ಯಾರೇಜ್ ಕಟ್ಟಡ ಸಂಪೂರ್ಣವಾಗಿ ಸುಟ್ಟುಹೋಗಿದೆ.

ಸುತ್ತಮುತ್ತಲಿನಲ್ಲಿ ಮನೆಗಳು, ಅಂಗಡಿಗಳಿದ್ದು, ಬೆಂಕಿ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಹೈದರ್ ಅಲಿ ಮೇಗಿನಪೇಟೆ, ಯೋಗೀಶ ಕಾಶಿಮಠ ಅವರ ತಂಡ ಪಿಕಪ್ ವಾಹನಗಳ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ. ಅದರ ಮೂಲಕ ಬೆಂಕಿ ನಂದಿಸಲು ಯತ್ನಿಸಿದರು. ಅವರಿಗೆ ಸ್ಥಳೀಯ ಯುವಕರು ಸಾಥ್ ನೀಡಿದ್ದಾರೆ. ಬಳಿಕ ಅಗ್ನಿಶಾಮಕ ದಳವರು ಬಂದಿದ್ದು, ಕಾರ್ಯಾಚರಣೆ ನಡೆಸಿದರು.

ಅಗ್ನಿಶಾಮಕ ವಾಹನದಲ್ಲಿ ನೀರು ಖಾಲಿಯಾಗಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಈ ಮಧ್ಯೆ ಸ್ಥಳೀಯರು ಬೆಂಕಿ ನಂದಿಸಲು ಹರ ಸಾಹಸಪಟ್ಟಿದ್ದಾರೆ. ಅಗ್ನಿಶಾಮಕ ವಾಹನಕ್ಕೆ ಬೇರೆ ಕಡೆಯಿಂದ ನೀರು ತುಂಬಿಸಿ ಕಾರ್ಯಾಚರಣೆ ಮುಂದುವರಿಸಿದರು.

ಸ್ಥಳಕ್ಕೆ ವಿಟ್ಲ ಗ್ರಾಮಕರಣಿಕ ಪ್ರಕಾಶ್, ಪಟ್ಟಣ ಪಂಚಾಯತ್ ಸದಸ್ಯರು, ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.

ಸ್ಥಳೀಯರ ಆಕ್ರೋಶ

‘ವಿಟ್ಲದಲ್ಲಿ ಬೆಂಕಿ ಅವಘಡ ಸಂಭವಿಸಿದಾಗ ಬಂಟ್ವಾಳ ಹಾಗೂ ಪುತ್ತೂರಿನಿಂದ ಅಗ್ನಿಶಾಮಕದಳ ಬರಬೇಕು. ವಿಟ್ಲದಲ್ಲಿ ಅಗ್ನಿಶಾಮಕ ದಳದ ಕೇಂದ್ರ ಸ್ಥಾಪನೆ ಮಾಡಬೇಕೆಂದು ಹಲವು ವರ್ಷಗಳಿಂದ ಒತ್ತಾಯ ಮಾಡುತ್ತಿದ್ದೇವೆ. ಅದು ಇದುವರೆಗೂ ಈಡೇರಿಕೆಯಾಗಿಲ್ಲ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT