ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಇಲ್ಲಿ ತ್ಯಾಜ್ಯವೂ ಈಗ ಸಂಪನ್ಮೂಲ

ರಾಮಕೃಷ್ಣ ಮಿಷನ್‌ನಿಂದ 15 ವಸತಿ ಸಮುಚ್ಚಯಗಳಲ್ಲಿ ತ್ಯಾಜ್ಯ ನಿರ್ವಹಣೆ
Last Updated 9 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಮಂಗಳೂರು: ಸ್ವಚ್ಛ ಮಂಗಳೂರು ಅಭಿಯಾನದ ಮೂಲಕ ಜನಜಾಗೃತಿ ಮೂಡಿಸಿರುವ ರಾಮಕೃಷ್ಣ ಮಿಷನ್, ನಗರದ 15 ವಸತಿ ಸಮುಚ್ಚಯಗಳಲ್ಲಿ ಪರಿಸರಸ್ನೇಹಿ ತ್ಯಾಜ್ಯ ನಿರ್ವಹಣೆ ಮಾಡುವಲ್ಲಿ ಯಶಸ್ವಿಯಾಗಿದೆ.

ಒಂದೂವರೆ ವರ್ಷಗಳಿಂದ ವಸತಿ ಸಮುಚ್ಚಯಗಳಲ್ಲಿ ಹಸಿ ಕಸ ನಿರ್ವಹಣೆ ಮಾಡುತ್ತಿದ್ದ ರಾಮಕೃಷ್ಣ ಮಿಷನ್, ಪ್ರಾಯೋಗಿಕವಾಗಿ ಎರಡು ಸಮುಚ್ಚಯಗಳಲ್ಲಿ ಒಣ ಕಸ ನಿರ್ವಹಣೆಯನ್ನು ಕೈಗೆತ್ತಿಕೊಂಡಿದೆ.

‘ಹೆಚ್ಚು ತ್ಯಾಜ್ಯ ಉತ್ಪಾದಿಸುವವರು ಸ್ಥಳೀಯವಾಗಿ ವಿಲೇವಾರಿ ಮಾಡುವಂತೆ ಮಹಾನಗರ ಪಾಲಿಕೆ ಸೂಚಿಸಿದಾಗ, ಪರ್ಯಾಯ ಕ್ರಮದ ಬಗ್ಗೆ ಹಲವರು ಹುಡುಕಾಟದಲ್ಲಿದ್ದರು. ಈ ಸಂದರ್ಭದಲ್ಲಿ ತ್ಯಾಜ್ಯ ನಿರ್ವಹಣೆಗೆ ಮುಂದಾದ ನಾವು, 15 ವಸತಿ ಸಮುಚ್ಚಯಗಳ 150 ಮನೆಗಳಿಗೆ ಉಚಿತವಾಗಿ ಮೂರು ಮಡಿಕೆಗಳ ಸಾಧನವನ್ನು ನೀಡಿ, ಅಲ್ಲಿ ಲಭ್ಯವಿರುವ ಸ್ಥಳದಲ್ಲಿಯೇ ಅವುಗಳನ್ನು ಇಟ್ಟು ಸಾವಯವ ಗೊಬ್ಬರ ಉತ್ಪಾದನೆ ಮಾಡುತ್ತಿದ್ದೇವೆ’ ಎಂದು ಕಾರ್ಯಕ್ರಮದ ರೂವಾರಿಯಾಗಿರುವ ರಾಮಕೃಷ್ಣ ಮಿಷನ್‌ನ ಏಕಗಮ್ಯಾನಂದ ಸ್ವಾಮೀಜಿ ತಿಳಿಸಿದರು.

‘ಶೂನ್ಯ ಬಂಡವಾಳದ ಈ ವ್ಯವಸ್ಥೆಯಿಂದ ತ್ಯಾಜ್ಯವನ್ನು ಸಂಪನ್ಮೂಲವಾಗಿ ಪರಿವರ್ತಿಸಬಹುದು. ಒಂದು ಮನೆಯಿಂದ ದಿನವೊಂದಕ್ಕೆ ಒಂದು ಕೆ.ಜಿ ಹಸಿ ಹಸ ಉತ್ಪತ್ತಿಯಾಗುತ್ತದೆ. ಮನೆಯಿಂದ ಕಸ ಸಂಗ್ರಹಿಸುವ ನಮ್ಮ ಕೆಲಸಗಾರರು ಈ ತ್ಯಾಜ್ಯದ ನಿರ್ವಹಣೆ ಮಾಡುತ್ತಾರೆ. ವಿದ್ಯುತ್ ಅಥವಾ ರಾಸಾಯನಿಕ ಬಳಕೆಯಿಲ್ಲದೆ, ಕಪ್ಪು ಸೈನಿಕ ಹುಳ (ಬ್ಲ್ಯಾಕ್ ಸೋಲ್ಜರ್ ಫ್ಲೈ)ದ ಮೂಲಕ ತಯಾರಾಗುವ ಸಾವಯವ ಗೊಬ್ಬರವು 7.2 ಎನ್‌ಪಿಕೆ ಹೊಂದಿರುತ್ತದೆ. ಪ್ರತಿ ಮನೆಯ ಕಸದಿಂದ ತಿಂಗಳಿಗೆ ಮೂರು ಕೆ.ಜಿ.ಯಷ್ಟು ಗೊಬ್ಬರ ತಯಾರಾಗುತ್ತದೆ’ ಎಂದು ಅವರು ವಿವರಿಸಿದರು.

‘ಕುಂಬಾರಿಕೆಗೆ ಪ್ರೋತ್ಸಾಹ’

ರಾಮಕೃಷ್ಣ ಮಿಷನ್ ಈವರೆಗೆ ಸುಮಾರು ₹ 80 ಲಕ್ಷ ಮೌಲ್ಯದ ಮಡಿಕೆಗಳನ್ನು ಕುಂಬಾರರಿಂದ ಖರೀದಿಸಿದೆ. ಇದರಿಂದ ಸ್ಥಳೀಯ ಕುಂಬಾರಿಕೆಯನ್ನು ಪ್ರೋತ್ಸಾಹಿಸಿದಂತಾಗಿದೆ. ಉತ್ಪತ್ತಿಯಾಗುವ ತ್ಯಾಜ್ಯವನ್ನು ಆಯಾ ಸ್ಥಳದಲ್ಲೇ ನಿರ್ವಹಣೆ ಮಾಡುವುದರಿಂದ ಸಾಗಣೆ ವೆಚ್ಚ, ಮಾಲಿನ್ಯ ತಗ್ಗುತ್ತದೆ. ಉತ್ಪತ್ತಿಯಾಗುವ ಗೊಬ್ಬರವನ್ನು ಕೆ.ಜಿ.ಯೊಂದಕ್ಕೆ ₹ 20ಕ್ಕೆ ಮಾರಾಟ ಮಾಡಬಹುದು ಎಂದು ಏಕಗಮ್ಯಾನಂದ ಸ್ವಾಮೀಜಿ ತಿಳಿಸಿದರು.

‘ಅಡುಗೆ ಮನೆ ತ್ಯಾಜ್ಯದಿಂದ ತಯಾರಾಗುವ ಗೊಬ್ಬರವನ್ನು ದುಬೈಗೆ ರಫ್ತು ಮಾಡಲು ಪ್ರಯತ್ನಿಸಲಾಗಿದೆ. ಈ ಸಂಬಂಧ ಇ–ಮೇಲ್ ಮೂಲಕ ಸಂಬಂಧಪಟ್ಟವರನ್ನು ಸಂಪರ್ಕಿಸಲಾಗಿದೆ ಎಂದು ಅವರು ಪ್ರತಿಕ್ರಿಯಿಸಿದರು.

ಪರಿಸರ ಸ್ನೇಹಿ ವ್ಯವಸ್ಥೆಯ ಬಗ್ಗೆ ಜನರಿಗೆ ಮನದಟ್ಟು ಮಾಡುವ ನಿಟ್ಟಿನಲ್ಲಿ ಇಂದು (ಏ.10) ಇಲ್ಲಿನ ಓಷಿಯನ್ ಪರ್ಲ್ ಹೋಟೆಲ್‌ನಲ್ಲಿ ಕಾರ್ಯಾಗಾರ ಏರ್ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT