ಮಂಗಳೂರು: ‘ಕರಾವಳಿಯ ಪದವೀಧರ ಕ್ಷೇತ್ರದಲ್ಲಿ ಆರು ಅವಧಿಯಲ್ಲಿ ನಿರಂತರವಾಗಿ ನಮ್ಮ ಪಕ್ಷದ ಅಭ್ಯರ್ಥಿಯೇ ಗೆದ್ದಿದ್ದಾರೆ. ಶಿಕ್ಷಕರ ಕ್ಷೇತ್ರದಲ್ಲಿ ನಾಲ್ಕು ಸಲ ಗೆದ್ದು ಎರಡು ಸಲ ಸೋತಿದ್ದೇವೆ. ಗೆದ್ದ ದಾಖಲೆ ನಮ್ಮದೇ ಜಾಸ್ತಿ. ಒಂದೊಮ್ಮೆ ಜೆಡಿಎಸ್ ಜೊತೆ ಚುನಾವಣಾ ಮೈತ್ರಿ ಏರ್ಪಟ್ಟರೆ ಈ ಎರಡೂ ಸ್ಥಾನಗಳನ್ನು ನಮ್ಮ ಪಕ್ಷಕ್ಕೇ ನೀಡಬೇಕು ಎಂಬುದು ನಮ್ಮ ಬೇಡಿಕೆ’ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ಕುರಿತು ಪ್ರತಿಕ್ರಿಯಿಸಿದ ಅವರು, ‘ಮತದಾರರ ನೋಂದಣಿ ಮಾಡಿಸುವುದಷ್ಟೇ ನಮ್ಮ ಕೆಲಸ. ಜೆಡಿಎಸ್ ಜೊತೆಗಿನ ಮೈತ್ರಿ ಸಂಬಂಧಿಸಿ ಮಾತುಕತೆ ಹಂತದಲ್ಲಿದೆ. ಅದಿನ್ನೂ ಅಂತಿಮವಾಗಿಲ್ಲ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ನಮ್ಮ ಮುಖಂಡ ಬಿ.ಎಸ್.ಯಡಿಯೂರಪ್ಪ ಅವರೇ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಪಕ್ಷದ ಸಂಸದೀಯ ಮಂಡಳಿ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದರು.
‘ವಿಧಾನ ಪರಿಷತ್‌ನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳು ಸೇರಿದಂತೆ ಆರು ಸದಸ್ಯರ ಆಯ್ಕೆಗೆ ಚುನಾವಣೆಗೆ ಈ ತಿಂಗಳ ಕೊನೆಯಲ್ಲಿ ಅಧಿಸೂಚನೆ ಪ್ರಕಟ ಆಗುವ ಸಾಧ್ಯತೆ ಇದೆ. ಮತದಾರರ ಪಟ್ಟಿ ನೋಂದಣಿ ಸಲುವಾಗಿ ಪೂರ್ವಭಾವಿ ಸಭೆಯನ್ನು ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಇಟ್ಟುಕೊಂಡಿದ್ದೇವೆ. ಪಕ್ಷದ ನಿರ್ಣಯವನ್ನು ಎಲ್ಲರೂ ಪಾಲಿಸುತ್ತೇವೆ. ಚುನಾವಣೆ ಸಿದ್ಧತೆ ನಡೆಸುವುದು ನಮ್ಮ ಧರ್ಮ. ಸದ್ಯಕ್ಕೆ ನೋಂದಣಿಗೆ ಗಮನ ನೀಡುತ್ತೇವೆ’ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ್ ಎಂ, ಜಿಲ್ಲಾ ವಕ್ತಾರ ರವಿಶಂಕರ ಮಿಜಾರ್, ಪಕ್ಷದ ಮುಖಂಡ ಮೋನಪ್ಪ ಭಂಡಾರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.