ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ್ತೂರಿ ರಂಗನ್ ವರದಿ ಜಾರಿ ವಿಚಾರದಲ್ಲಿ ಜನರನ್ನು ದಾರಿ ತಪ್ಪಿಸಬಾರದು: ರಮಾನಾಥ ರೈ

Published 31 ಜುಲೈ 2023, 10:14 IST
Last Updated 31 ಜುಲೈ 2023, 10:14 IST
ಅಕ್ಷರ ಗಾತ್ರ

ಮಂಗಳೂರು: 'ಪಶ್ಚಿಮ ಘಟ್ಟದ ಜೀವವೈವಿಧ್ಯ ಸಂರಕ್ಷಣೆಗಾಗಿ ಕಸ್ತೂರಿ ರಂಗನ್ ವರದಿಯ ಶಿಫಾರಸುಗಳ ಜಾರಿ ವಿಚಾರದಲ್ಲಿ ಜನರ ದಿಕ್ಕು ತಪ್ಪಿಸುವ ಹೇಳಿಕೆ ನೀಡಬಾರದು. ಈ ವರದಿಯ ಶಿಫಾರಸುಗಳನ್ನು ರಾಜ್ಯದಲ್ಲಿ ಜಾರಿಗೊಳಿಸುವ ಅಗತ್ಯ ಇಲ್ಲ ಎಂದು ಈ ಹಿಂದೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಇದ್ದಾಗಲೂ ತೀರ್ಮಾನ ಕೈಗೊಳ್ಳಲಾಗಿತ್ತು. ಅದೇ ರೀತಿ ಬಿಜೆಪಿ ನೇತೃತ್ವದ ಸರ್ಕಾರವೂ ಕೂಡ ಇದೇ ನಿಲುವನ್ನು ವ್ಯಕ್ತಪಡಿಸಿತ್ತು' ಎಂದು ಕಾಂಗ್ರೆಸ್ ಮುಖಂಡ ರಮಾನಾಥ ರೈ ಮನವಿ ಮಾಡಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ' ಈ ಸಮಿತಿಯ ವರದಿಯನ್ನು ರಾಜ್ಯದಲ್ಲಿ ಜಾರಿ ಮಾಡುವುದು ಬೇಡ ಎಂಬ ಶಿಫಾರಸನ್ನು ಕೇಂದ್ರ ಪರಿಸರ ಸಚಿವಾಲಯಕ್ಕೆ ಬಾಬು ಅರಣ್ಯ, ಪರಿಸರ ಮತ್ತು ಜೀವಿ ವಿಜ್ಞಾನ ಸಚಿವನಾಗಿದ್ದಾಗಲೂ ಕಳುಹಿಸಲಾಗಿತ್ತು. ಆದರೂ ಪದೇ ಪದೇ ಕೇಂದ್ರ ಸಚಿವಾಲಯದಿಂದ ಈ ವರದಿಯ ಕರಡುಗಳನ್ನು ಕಳುಹಿಸಿ ಪ್ರತಿಕ್ರಿಯೆ ಕೇಳಲಾಗುತ್ತಿತ್ತು. ಆಗ ಕೇಂದ್ರ ಪರಿಸರ ಸಚಿವರಾಗಿದ್ದ ಪ್ರಕಾಶ ಜಾವಡೇಕರ್ ನೇತೃತ್ವದಲ್ಲಿ ನಡೆದಿದ್ದ ಅನೇಕ ಸಭೆಗಳಿಗೆ ನಾನು ಅಧಿಕಾರಿಗಳ ಜೊತೆ ಹಾಜರಾಗಿದ್ದೇನೆ. ನಮ್ಮ ರಾಜ್ಯದ ಸಂಸದರಿಗೂ ಈ ಸಭೆಗಳಿಗೆ ಆಹ್ವಾನ ಇತ್ತು. ಆದರೆ, ಯಾವೊಬ್ಬ ಸಂಸದರು ಈ ಸಭೆಗಳಲ್ಲಿ ಪಾಲ್ಗೊಂಡಿರಲಿಲ್ಲ' ಎಂದು ಅವರು ತಿಳಿಸಿದರು.

'ಈ ವರದಿಯ ಜಾರಿಗೊಳಿಸುವುದು ಅಥವಾ ಬಿಡುವುದು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ಬಿಟ್ಟಿದ್ದು ಇದು ಕರ್ನಾಟಕ ಮಹಾರಾಷ್ಟ್ರ ಕೇರಳ ತಮಿಳುನಾಡು ಗೋವಾ ಸೇರಿದಂತೆ 10 ರಾಜ್ಯಗಳಿಗೆ ಸಂಬಂಧಪಟ್ಟ ವಿಚಾರ. ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ ಈಗಲೂ 24 ಗಂಟೆಗಳ ಅವಧಿಯೊಳಗೆ ಈ ವರದಿಯನ್ನು ನಿರಾಕರಿಸಲು ಸಾಧ್ಯವಿದೆ. ಆ ಕಾರ್ಯವನ್ನು ಮಾಡುವಂತೆ ಕೇಂದ್ರವನ್ನು ಒತ್ತಾಯಿಸುವ ಬದಲು ಈ ವಿಚಾರದಲ್ಲಿ ರಾಜ್ಯ ಸರ್ಕಾರದ ಮೇಲೆ ಕೆಲವು ಬಿಜೆಪಿ ಶಾಸಕರು ಗೂಬೆ ಕೂರಿಸುವುದು ಸರಿಯಲ್ಲ' ಎಂದು ಅವರು ತಿಳಿಸಿದರು.

'ಪಶ್ಚಿಮ ಘಟ್ಟದ ಜೀವ ವೈವಿಧ್ಯ ಸಂರಕ್ಷಣೆ ದೃಷ್ಟಿಯಿಂದ ಕೇಂದ್ರ ಪರಿಸರ ಅರಣ್ಯ ಸಚಿವಾಲಯವು ಮೊದಲು ಮಾಧವ ಗಾಡ್ಗಿಲ್ ನೇತೃತ್ವದ ಸಮಿತಿಯನ್ನು ರಚಿಸಿತ್ತು. ಆ ಸಮಿತಿ ನೀಡಿದ್ದ ಶಿಫಾರಸುಗಳು ಪಶ್ಚಿಮ ಘಟ್ಟ ಪ್ರದೇಶದಲ್ಲಿರುವ ಜನವಸತಿ ಪ್ರದೇಶಗಳಿಗೆ ಮಾರಕಾಗಬಹುದು ಎಂಬ ಟೀಕೆ‌ ವ್ಯಕ್ತ ವಾಗಿದ್ದ ವಿಜ್ಞಾನಿ ಕಸ್ತೂರಿರಂಗನ್ ನೇತೃತ್ವದಲ್ಲಿ ಸಮಿತಿ ರಚಿಸಿ ರಚಿಸಲಾಗಿತ್ತು. ಆ ಸಮಿತಿಯ ಶಿಫಾರಸುಗಳ ಜಾರಿಯ ಕುರಿತು ಚರ್ಚೆ ಈಗಲೂ ನಡೆಯುತ್ತಲೇ ಇದೆ. ಈ ವಿಚಾರದಲ್ಲಿ ರಾಜ್ಯದ ಅರಣ್ಯ ಮತ್ತು ಪರಿಸರ ಸಚಿವರು ಈಗ ಮತ್ತೆ ಏಕೆ ಪ್ರಸ್ತಾಪಿಸಿದ್ದಾರೋ ತಿಳಿಯದು' ಎಂದರು.

'ರಾಜ್ಯದಲ್ಲಿ ಜೀವ ವೈವಿಧ್ಯ ಸಂರಕ್ಷಣೆಗೆ ಈಗಾಗಲೇ ಮೀಸಲು ಅರಣ್ಯ, ವನ್ಯಜೀವಿ ಧಾಮ, ರಾಷ್ಟ್ರೀಯ ಉದ್ಯಾನಗಳನ್ನು ರಚಿಸಲಾಗಿದೆ. ವನ್ಯಜೀವಿ ಸಂರಕ್ಷಣೆ ಹಾಗೂ ಅರಣ್ಯ ಸಂರಕ್ಷಣೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಪರಿಸ್ಥಿತಿ ಹೀಗೆ ಇರುವಾಗ ಪಶ್ಚಿಮಘಟ್ಟ ಪ್ರದೇಶದ ಜೀವವೈವಿಧ್ಯ ಸಂರಕ್ಷಣೆಗಾಗಿ ಮತ್ತೆ ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸುವ ಅಗತ್ಯ ಇಲ್ಲ. ಇದರ ಜಾರಿಯಿಂದ ಈ ಪ್ರದೇಶದ ಜನವಸತಿ ಯಲ್ಲಿರುವ ನಿವಾಸಿಗಳು ವೃತಾ ಆತಂಕದ ಕಾರ್ಮೋಡ ನಡುವೆ ಬದುಕಬೇಕಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT