ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

543 ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ

ಜನರ ಸೌಕರ್ಯಕ್ಕಾಗಿ ದಕ್ಷಿಣ ರೈಲ್ವೆಯಿಂದ ‘ರೇಲ್‌ ವೈಯರ್‌’ ಅಳವಡಿಕೆ
Last Updated 21 ಡಿಸೆಂಬರ್ 2021, 5:05 IST
ಅಕ್ಷರ ಗಾತ್ರ

ಮಂಗಳೂರು: ಜನರಿಗೆ ಮನರಂಜನೆಯ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳ ಅನುಕೂಲಕ್ಕಾಗಿ ದಕ್ಷಿಣ ರೈಲ್ವೆ ತನ್ನ ವ್ಯಾಪ್ತಿಯ ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ಒದಗಿಸಿದ್ದು, ವಲಯದ 543 ನಿಲ್ದಾಣಗಳಲ್ಲಿ ಈ ಸೌಕರ್ಯವನ್ನು ಈಗಾಗಲೇ ಒದಗಿಸಲಾಗಿದೆ. ಈ ಮೂಲಕ ಸಣ್ಣ ನಿಲ್ದಾಣಗಳನ್ನು ಹೊರತುಪಡಿಸಿ, ಇತರೆಲ್ಲ ನಿಲ್ದಾಣಗಳಲ್ಲಿ ಸೌಕರ್ಯ ಕಲ್ಪಿಸಿದಂತಾಗಿದೆ.

5,087 ಕಿ.ಮೀ. ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಸಲಾಗಿದ್ದು, ಈ ಎಲ್ಲ ನಿಲ್ದಾಣಗಳಲ್ಲಿ ಹೈಸ್ಪೀಡ್‌ ಇಂಟರ್‌ನೆಟ್‌ ಸೌಲಭ್ಯ ದೊರೆಯಲಿದೆ. ಪ್ರಯಾಣಿಕರು, ವಿದ್ಯಾರ್ಥಿಗಳಿಗೆ ಸುಲಭದಲ್ಲಿ ಇಂಟರ್‌ನೆಟ್‌ ಸಂಪರ್ಕ ಲಭ್ಯವಾಗುತ್ತಿದೆ ಎಂದು ದಕ್ಷಿಣ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ. ಗುಣಶೇಖರನ್‌ ತಿಳಿಸಿದ್ದಾರೆ.

ದಕ್ಷಿಣ ರೈಲ್ವೆ ವಲಯದಲ್ಲಿ ಚೆನ್ನೈ ವಿಭಾಗದ 135 ನಿಲ್ದಾಣ, ತ್ರಿಚಿ ವಿಭಾಗದ 105, ಸೇಲಂ ವಿಭಾಗದ 79, ಮದುರೈ ವಿಭಾಗದ 95, ಪಾಲ್ಘಾಟ್‌ ವಿಭಾಗದ 59, ತಿರುವನಂತಪುರ ವಿಭಾಗದ 70 ನಿಲ್ದಾಣಗಳು ವೈಫೈ ಸೌಲಭ್ಯವನ್ನು ಹೊಂದಿವೆ. ದಿನದಿಂದ ದಿನಕ್ಕೆ ವೈಫೈ ಬಳಕೆದಾರರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ರೈಲ್ವೆ ನಿಲ್ದಾಣಗಳನ್ನು ಡಿಜಿಟಲ್ ಹಬ್‌ ಆಗಿ ಪರಿವರ್ತಿಸುವ ಉದ್ದೇಶದಿಂದ ಈ ಯೋಜನೆಯನ್ನು ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.

ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿಯನ್ನು ರೈಲ್ವೆಯ ಉದ್ಯಮವಾದ ‘ರೇಲ್‌ಟೆಲ್‌’ಗೆ ವಹಿಸಲಾಗಿದ್ದು, ನಿರಂತರವಾದ ಕಾಮಗಾರಿಯ ಮೂಲಕ ‘ರೇಲ್‌ ವೈಯರ್‌’ ವೈಫೈ ಸೌಲಭ್ಯವನ್ನು ಎಲ್ಲ ನಿಲ್ದಾಣಗಳಲ್ಲಿ ಒದಗಿಸಲು ಸಾಧ್ಯವಾಗಿದೆ. ರೈಲು ನಿಲ್ದಾಣಗಳಲ್ಲಿ ಉದ್ಘೋಷಣೆ, ಸಾಮಾಜಿಕ ಜಾಲತಾಣಗಳು, ಬ್ಯಾನರ್‌ಗಳ ಮೂಲಕ ಈ ಸೌಲಭ್ಯದ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಈ ಮೂಲಕ ವೈಫೈ ಸೌಲಭ್ಯ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ.

2015 ರ ರೈಲ್ವೆ ಬಜೆಟ್‌ನಲ್ಲಿ ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ ಸೌಲಭ್ಯ ಕಲ್ಪಿಸುವ ಯೋಜನೆ ಘೋಷಿಸಲಾಗಿದ್ದು, ದೇಶದಾದ್ಯಂತ ಹಲವು ಪ್ರಮುಖ ನಿಲ್ದಾಣಗಳು ಹಾಗೂ ಗ್ರಾಮೀಣ ಭಾಗದ ರೈಲು ನಿಲ್ದಾಣಗಳಲ್ಲಿಯೂ ವೈಫೈ ಸೌಲಭ್ಯ ಒದಗಿಸಲಾಗುತ್ತಿದೆ.

ಯುಪಿಎಸ್‌ಸಿ, ಆರ್‌ಆರ್‌ಬಿ, ಆರ್‌ಆರ್‌ಸಿ, ಎಸ್‌ಎಸ್‌ಸಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳೂ ಈ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಜೊತೆಗೆ ರೈಲು ಪ್ರಯಾಣಿಕರು ಮೊಬೈಲ್‌, ಟ್ಯಾಬ್‌ಗಳ ಮೂಲಕ ಈ ಸೌಲಭ್ಯಪಡೆಯುತ್ತಿದ್ದಾರೆ.

ಬಳಕೆ ಹೇಗೆ ?:

ರೈಲು ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ಪಡೆಯಲು ಜನರು ತಮ್ಮ ಮೊಬೈಲ್‌ನಲ್ಲಿ ವೈಫೈ ಆನ್‌ ಮಾಡಬೇಕು. ಅಲ್ಲಿ ಕಾಣುವ ರೇಲ್‌ ವೈಯರ್‌ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ರೈಲ್ವೆ ಪೋರ್ಟಲ್‌ ತೆರೆದುಕೊಳ್ಳಲಿದ್ದು, ಮೊಬೈಲ್‌ಗೆ ಒಟಿಪಿ ಬರಲಿದೆ. ಅದನ್ನು ನಮೂದಿಸಿದಲ್ಲಿ 30 ನಿಮಿಷಗಳವರೆಗೆ ವೈಫೈ ಸೌಲಭ್ಯವನ್ನು ನಿರಂತರವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಮೊದಲ 30 ನಿಮಿಷಗಳವರೆಗೆ ವೈಫೈ ಉಚಿತವಾಗಿದ್ದು, 1 ಎಂಬಿಪಿಎಸ್‌ ವೇಗದ ಸೌಲಭ್ಯ ದೊರೆಯಲಿದೆ. ಇದಕ್ಕಿಂತ ವೇಗದ ಇಂಟರ್‌ನೆಟ್‌ ಬೇಕಿದ್ದಲ್ಲಿ, ಪ್ರಯಾಣಿಕರು ಕನಿಷ್ಠ ದರ ನೀಡಿ ಸೌಲಭ್ಯ ಪಡೆಯಬಹುದು. ನಿತ್ಯ ₹10 (34 ಎಂಬಿಪಿಎಸ್‌ ವೇಗದಲ್ಲಿ 5 ಜಿಬಿ ಡಾಟಾ) ರಿಂದ ತಿಂಗಳಿಗೆ ₹75 (34 ಎಂಬಿಪಿಎಸ್‌ ವೇಗದ 60 ಜಿಬಿ ಡಾಟಾ) ಯೋಜನೆಗಳನ್ನು ಪಡೆಯಬಹುದಾಗಿದೆ. ನೆಟ್ ಬ್ಯಾಂಕಿಂಗ್, ವ್ಯಾಲೆಟ್‌, ಕ್ರೆಡಿಟ್‌ ಕಾರ್ಡ್‌ಗಳ ಮೂಲಕ ಆನ್‌ಲೈನ್‌ನಲ್ಲಿಯೇ ಖರೀದಿಸಬಹುದಾಗಿದೆ ಎಂದು ಗುಣಶೇಖರನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT