ಮಂಗಳವಾರ, ಮೇ 17, 2022
23 °C
‘ಒಂದು ಜಿಲ್ಲೆ ಒಂದು ಉತ್ಪನ್ನ’; ಮೀನಿನ ಮೌಲ್ಯವರ್ಧಿತ ಉತ್ಪನ್ನ ಸಾಕಾರಕ್ಕೆ ಕೆವಿಕೆ ನೇತೃತ್ವ

ಆದಾಯ ದ್ವಿಗುಣದತ್ತ ಮಹಿಳೆಯರ ಜಿಗಿತ

ಮಹೇಶ ಎಸ್‌. ಕನ್ನೇಶ್ವರ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕೇಂದ್ರ ಸರ್ಕಾರದ ಸ್ವಾವಲಂಬಿ ಭಾರತ ಅಭಿಯಾನದ ಅಡಿಯಲ್ಲಿ ಜಾರಿಗೆ ತಂದಿರುವ ‘ಒಂದು ಜಿಲ್ಲೆ ಒಂದು ಉತ್ಪನ್ನ’ ಯೋಜನೆಗೆ ಕರಾವಳಿ ಜಿಲ್ಲೆಯಲ್ಲಿ ಹೇರಳವಾಗಿ ಸಿಗುವ ಮತ್ಸ್ಯ, ಸಾಗರೋತ್ಪನ್ನಗಳನ್ನು ಆಯ್ಕೆ ಮಾಡಲಾಗಿದೆ. ಮೀನಿನ ಖಾದ್ಯಗಳ ಮೌಲ್ಯವರ್ಧನೆ ಮಾಡಿ ಅದಕ್ಕೆ ಮಾರುಕಟ್ಟೆ ಒದಗಿಸುವ ಮೂಲಕ ಉದ್ಯಮಶೀಲತೆ, ಸ್ವಾವಲಂಬಿ, ಆರ್ಥಿಕ ಸದೃಢತೆ ತರುವುದು ಈ ಉತ್ಪನ್ನ ಆಯ್ಕೆಯ ಉದ್ದೇಶ.

ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ, ಜಿಲ್ಲೆಯ ಮಹಿಳಾ ಸ್ವಸಹಾಯ ಗುಂಪುಗಳಿಗೆ ಮೌಲ್ಯವರ್ಧನೆಯ ಕೌಶಲ ಹಾಗೂ ತಾಂತ್ರಿಕ ಪಟ್ಟುಗಳನ್ನು ಕಲಿಸಿಕೊಡುವ ಹೊಣೆಯನ್ನು ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರವೂ ಹೊತ್ತುಕೊಂಡಿದೆ.

ಮೀನುಗಾರಿಕೆ ಮೂಲಕ ಜಿಲ್ಲೆಯಲ್ಲಿ ನೂರಾರು ಕಟುಂಬಗಳು ಬದುಕು ಕಟ್ಟಿಕೊಂಡಿವೆ. ಉದ್ಯಮಶೀಲತೆ ಹಾದಿಯಲ್ಲಿ ಕ್ರೀಯಾಶೀಲ ಹೆಜ್ಜೆ ಇಡುತ್ತಿರುವ ಕೃಷಿ ವಿಜ್ಞಾನ ಕೇಂದ್ರವು ಈಗ ಜಿಲ್ಲೆಯ ಆಸಕ್ತ ಮಹಿಳಾ ಸ್ವಸಹಾಯ ಗುಂಪುಗಳನ್ನು ಹುಡುಕಿ ಅವುಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ.

ಮೀನು ಒಂದು ಸದೃಢ ಉತ್ತಮ ಪೌಷ್ಟಿಕ ಆಹಾರ, ಇದರಲ್ಲಿ ಉತ್ತಮ ಗುಣಮಟ್ಟದ ಸಸಾರಜನಕ, ಕೊಬ್ಬು, ಜೀವಸತ್ವ ಮತ್ತು ಲವಣಾಂಶಗಳು ಹೇರಳವಾಗಿದ್ದು, ಮನುಷ್ಯನ ಆರೋಗ್ಯ ವೃದ್ಧಿಗೆ ಹೇಳಿ ಮಾಡಿಸಿದ ಖಾದ್ಯ. ಜಿಲ್ಲೆಯಲ್ಲಿ ಈಗಾಗಲೇ ಸ್ವಸಹಾಯ ಗುಂಪುಗಳ ಮಹಿಳೆಯರು ಮೀನಿನ ಹಲವಾರು ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಮೀನಿನ ಖಾದ್ಯಗಳಿಗೆ ಸಾಕಷ್ಟು ಬೇಡಿಕೆಯೂ ಇದೆ. ಇದರ ಮೌಲ್ಯವರ್ಧನೆ ಮಾಡಿ ಇಡೀ ಉದ್ಯಮಕ್ಕೆ ಹೈಟೆಕ್‌ ಸ್ಪರ್ಶ ನೀಡುವ ಅಗತ್ಯವಿದೆ. ಈ ಕಾರ್ಯವನ್ನು ‘ಒಂದು ಜಿಲ್ಲೆ ಒಂದು ಉತ್ಪನ್ನ’ದ ಮೂಲಕ ಸಾಕಾರಗೊಳಿಸುವ ಕೆಲಸ ಜಿಲ್ಲೆಯಲ್ಲಿ ನಡೆಯುತ್ತಿದೆ.

‘ಒಂದು ಜಿಲ್ಲೆ ಒಂದು ಉತ್ಪನ್ನ’ ಎಂಬ ಯೋಜನೆಯಡಿ ಜಿಲ್ಲೆಯ ಸ್ಥಳೀಯ ಸಾಂಪ್ರದಾಯಿಕ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಿದರೆ ‘ಆತ್ಮನಿರ್ಭರ ಭಾರತ’ದ ಕನಸು ನನಸಾಗಿಸುವುದೂ ಸುಲಭ. ದಕ್ಷಿಣ ಕನ್ನಡ ಮಾತ್ರವಲ್ಲ ಕರಾವಳಿಯುದ್ದಕ್ಕೂ ಮೀನುಗಾರಿಕಾ ಚಟುವಟಿಕೆಗಳು ಹೆಚ್ಚಿರುವುದರಿಂದ ಸಾಗರೋತ್ಪನ್ನಗಳನ್ನು ಜಿಲ್ಲೆಯ ಉತ್ಪನ್ನವಾಗಿ ಗುರುತಿಸುವ ಕಾರ್ಯ ಮಾಡಲಾಗಿದೆ. ಭಾರತೀಯ ಕೃಷಿ ಅನುಸಂಧಾನ ಪರಿಷತ್- ಕೃಷಿ ವಿಜ್ಞಾನ ಕೇಂದ್ರ, ಆಸಕ್ತ ಗ್ರಾಮೀಣ ಭಾಗದ ಮಹಿಳೆಯರು, ಯುವಕರು ಹಾಗೂ ಬುಡಕಟ್ಟು ಜನಾಂಗದವರಿಗೆ ವಿಶೇಷವಾದ ಕೌಶಲ, ತರಬೇತಿ ನೀಡುವ ಮೂಲಕ ಅವರನ್ನು ಉದ್ಯಮಿಶೀಲತೆಗೆ ತೆರೆದುಕೊಳ್ಳುವಂತೆ ಮಾಡುವ ಜವಾಬ್ದಾರಿ ಹೊತ್ತುಕೊಂಡಿದೆ. ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಿಲ್ಲೆಯ ವಿವಿಧ ಭಾಗಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

ಕೃಷಿ ವಿಜ್ಞಾನ ಕೇಂದ್ರ ಹಿರಿಯ ವಿಜ್ಞಾನಿ  ಡಾ. ರಮೇಶ ಹಾಗೂ ಡಾ. ಚೇತನ್ ಅವರ ತಾಂತ್ರಿಕ ನೆರವಿನೊಂದಿಗೆ ಮೊದಲಿಗೆ ಪುತ್ತೂರು ತಾಲ್ಲೂಕಿನ ಬೆಟ್ಟಂಪಾಡಿ, ನಿಡ್ಪಳ್ಳಿ ಗ್ರಾಮಗಳಲ್ಲಿ ಬುಡಕಟ್ಟು ಜನಾಂಗದ ಮಹಿಳೆಯರಿಗೆ ತರಬೇತಿ ನೀಡಲಾಗಿದೆ. ಆಸಕ್ತ ಮಹಿಳೆಯರನ್ನು ಒಟ್ಟುಗೂಡಿಸಿ ಮೀನಿನ ಮೌಲ್ಯವರ್ಧಿತ ವಿವಿಧ ಪದಾರ್ಥಗಳನ್ನ ಉತ್ಪಾದಿಸುವ ಕುರಿತು ಪ್ರಾತ್ಯಕ್ಷಿಕೆಗಳನ್ನು ನಡೆಸಿದೆ.

‘ಜಿಲ್ಲೆಯ ಸ್ವಸಹಾಯ ಗುಂಪುಗಳನ್ನು ಗುರುತಿಸಿ ಮೀನಿನ ಉತ್ಪನ್ನಗಳ ತಯಾರಿಕೆ ಹಾಗೂ ಮಾರಾಟದ ಕುರಿತು ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೌಶಲ ಆಧಾರಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಂಗಳೂರು, ಪುತ್ತೂರು ಮತ್ತು ಬೆಳ್ತಂಗಡಿ ತಾಲ್ಲೂಕು ಆಯ್ದ ಸ್ವಸಹಾಯ ಗುಂಪುಗಳಿಗೆ ಬೇಕಾದ ತಾಂತ್ರಿಕ ಸಹಾಯ ಒದಗಿಸುವ ಕೆಲಸ ಮಾಡಲಾಗುತ್ತಿದೆ’ ಎಂದು ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ರಮೇಶ್‌ ಹೇಳಿದರು.

ಮೀನಿನ ಚಟ್ನಿ ಮತ್ತು ಉಪ್ಪಿನ ಕಾಯಿ, ಸೀಗಡಿ ಚಟ್ನಿ ಮತ್ತು ಉಪ್ಪಿನಕಾಯಿ ಮೀನಿನ ಚಕ್ಕುಲಿ, ಸೂಪ್ ಹುಡಿ, ಸಂಡಿಗೆ, ಹಪ್ಪಳ, ಒಣ ಮೀನು, ಕಟ್ಲೇಟ್, ಬರ್ಗರ್ ಪ್ಯಾಟಿ, ಮೀನಿನ ಎಣ್ಣೆ, ಇತ್ಯಾದಿ ಉತ್ಪನಗಳನ್ನು ರಾಜ್ಯದಲ್ಲಿ ಹೆಚ್ಚಾಗಿ ಉತ್ಪಾದಿಸಲಾಗಿತ್ತಿದೆ. ಕರಾವಳಿ ಜನರ ಮೆಚ್ಚಿನ ಹಾಗೂ ದಿನನಿತ್ಯ ಬಳಸುವ ಮೀನಿನ ಚಟ್ನಿ ಮತ್ತು ಉಪ್ಪಿನಕಾಯಿ, ಸೀಗಡಿ ಚಟ್ನಿ ಮತ್ತು ಉಪ್ಪಿನಕಾಯಿ ಅಧಿಕ ಬೇಡಿಕೆ ಇರುವುದರಿಂದ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಚಟ್ನಿ ಮತ್ತು ಉಪ್ಪಿನಕಾಯಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮೀನುಗಾರಿಕಾ ವಿಜ್ಞಾನಿ ಡಾ. ಚೇತನ್‌ ತಿಳಿಸಿದರು.

‘ಕೆವಿಕೆ ಆವರಣದಲ್ಲಿ ಮಳಿಗೆ’

‘ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿಕರು, ಸ್ವಸಹಾಯ ಗುಂಪುಗಳು, ಕೃಷಿ ಉತ್ಪನ್ನ ತಯಾರಕರು ಹಾಗೂ ವಿವಿಧ ಮೌಲ್ಯವರ್ಧಿತ ಪದಾರ್ಧಗಳನ್ನು ಮಾರಾಟ ಮಾಡಲು ಮಳಿಗೆಯನ್ನು ತೆರೆಯಲಾಗುತ್ತಿದೆ. ಮಹಿಳೆಯರೇ ನಡೆಸುವಂತಹ ಅಂಗಡಿಗಳನ್ನು ಕೂಡ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಸಿದ್ಧಗೊಳಿಸಲಾಗುತ್ತಿದೆ. ಮೌಲ್ಯವರ್ಧಿತ ಮೀನಿನ ಉತ್ಪನ್ನಗಳನ್ನು ಒಂದು ಉದ್ಯಮವಾಗಿ ಉತ್ತೇಜಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಲವು ಯೋಜನೆಗಳಿವೆ. ಕೇಂದ್ರ ಸರ್ಕಾರ ಪ್ರಾಯೋಜಿತ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆ (ಪಿಎಂ ಎಫ್‍ಎಂಇ), ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್‍ವೈ) ಲಭ್ಯವಿದ್ದು ಹೆಚ್ಚಿನ ಮಾಹಿತಿಯನ್ನು ಕೃಷಿ ಇಲಾಖೆ ಮತ್ತು ಮೀನುಗಾರಿಕಾ ಇಲಾಖೆಗಳಲ್ಲಿ ಪಡೆಯಬಹುದಾಗಿದೆ’ ಎಂದು ಕೆವಿಕೆ ಮುಖ್ಯಸ್ಥರಾದ ಡಾ. ರಮೇಶ್‌ ತಿಳಿಸಿದರು.

‘ನೆರೆ ಜಿಲ್ಲೆಯಲ್ಲಿಯೂ ಮಾರಾಟ’

ಮೌಲ್ಯವರ್ಧಿತ ಪದಾರ್ಥಗಳ ಮಾರಾಟವೇ ಸಮಸ್ಯೆಯಾಗಿದೆ. ನೆರೆ ಜಿಲ್ಲೆಗಳ ಹಾಗೂ ನಗರಗಳ ಅಂಗಡಿಗಳಿಗೆ ಮೀನಿನ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯವಸ್ಥೆ ನಡೆಸಲಾಗುತ್ತಿದ್ದು, ಪ್ರಸ್ತುತ್ತ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗಿದೆ. ಪ್ರಸಕ್ತ ಸಾಲಿನಲ್ಲಿ ಕೃಷಿ ವಿಜ್ಞಾನ ಕೇಂದ್ರವು ಕೇಂದ್ರ ಮತ್ಸ್ಯ ತಂತ್ರಜ್ಞಾನ ಸಂಸ್ಥೆಯ ಪ್ರಾಯೋಜಿಕತ್ವದಲ್ಲಿ ಸೌರ ಚಾಲಿತ ಮೀನು ಒಣಗಿಸುವ ಯಂತ್ರಗಳು, ಮೀನಿನ ಶೇಖರಣಾ ಯಂತ್ರಗಳು, ಮಾರಾಟಕ್ಕಾಗಿ ಸಣ್ಣ ಗಾತ್ರದ ಗೂಡಂಗಡಿಗಳು, ಇತ್ಯಾದಿಗಳನ್ನು ಕಲ್ಪಿಸಿಕೊಡುತ್ತಿದೆ ಎಂದು ಕೃಷಿ ವಿಜ್ಞಾನ ಕೇಂದ್ರ ಮೀನುಗಾರಿಕಾ ವಿಜ್ಞಾನಿ ಡಾ. ಚೇತನ್‌ ತಿಳಿಸಿದರು.

‘ಸಬಲೀಕರಣಕ್ಕೆ ಸಹಕಾರಿ’

‘ಸೀಗಡಿ ಚಟ್ನಿ ಪುಡಿ ಹಾಗೂ ಕೊಲ್ಲಸರು ಖಾದ್ಯಗಳನ್ನು ಮಾಡುತ್ತಿದ್ದು, ಸಂತೆಯಲ್ಲಿಯೂ ವ್ಯಾಪಾರ ಮಾಡುತ್ತಿದ್ದೇವೆ. ಬೇರೆ ಕಡೆಗೆ ಮಾರಾಟ ಮಾಡುವುದಕ್ಕೆ ಆದ್ಯತೆ ನೀಡಲಾಗುತ್ತಿದೆ. ಮಹಿಳಾ ಸಬಲೀಕರಣಕ್ಕೆ ಒಂದು ಜಿಲ್ಲೆ ಒಂದು ಉತ್ಪನ್ನ ಸಹಕಾರಿ ಆಗಿದೆ. ವಾರಕ್ಕೆ ₹1 ಸಾವಿರಕ್ಕೂ ಹೆಚ್ಚು ಚಟ್ನಿ ಪುಡಿಯನ್ನು ಮಾರಾಟ ಮಾಡುತ್ತಿದ್ದು, ಮಾರುಕಟ್ಟೆ ವ್ಯವಸ್ಥೆ ಆದರೆ ಮತ್ತಷ್ಟು ಉತ್ತಮ ರೀತಿಯಲ್ಲಿ ಉತ್ಪನ್ನ ಮಾರಾಟ ಮಾಡುವುದಕ್ಕೆ ಸಹಕಾರಿ ಆಗುತ್ತದೆ’ ಎಂದು ಪುತ್ತೂರು ತಾಲ್ಲೂಕಿನ ಬೆಟ್ಟಂಪಾಡಿಯ ಸಂಜೀವನಿ ಶಾಂತಾ ದುರ್ಗಾ ಒಕ್ಕೂಟದ ಸದಸ್ಯೆ ಅನಿತಾ ಎಂ. ತಿಳಿಸಿದರು. 

ಮೀನಿನ ಖಾದ್ಯಗಳನ್ನು ತಯಾರಿಸುತ್ತಿದ್ದು, ಉತ್ತಮ ಸ್ಪಂದನೆ ಸಿಗುತ್ತಿದೆ. ಬ್ಯಾಂಕ್‌ನಿಂದ ಸಾಲ ಪಡೆದು ದೊಡ್ಡ ಮಟ್ಟದಲ್ಲಿ ವ್ಯಾಪಾರ ಮಾಡುವುದಕ್ಕೆ ಮುಂದಾಗಿದ್ದೇವೆ. ಸಾವಿತ್ರಿ ಎಚ್‌.ಎಸ್‌., ಸ್ನೇಹ ಸ್ವಸಹಾಯ ಸಂಘದ ಸದಸ್ಯೆ

ಸೀಗಡಿ ಉಪ್ಪಿನಕಾಯಿ ವಿದೇಶಗಳಿಗೂ ಕಳುಹಿಸಿಕೊಡಲಾಗುತ್ತಿದೆ. ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಮಹಿಳೆಯರ ಸಬಲೀಕರಣಕ್ಕೆ ಸಹಕಾರಿ

-ಶಶಿಕಲಾ ಶೆಟ್ಟಿ, ಶ್ರೀಸಂಘದ ಸದಸ್ಯೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು