ಮಂಗಳವಾರ, ಜನವರಿ 31, 2023
18 °C
ಮಂಗಳೂರು ವಿವಿಯಲ್ಲಿ ಕುಂಬ್ಳೆ ಸುಂದರರಾವ್‌ಗೆ ಶ್ರದ್ಧಾಂಜಲಿ

‘ಯಕ್ಷಗಾನಕ್ಕೆ ಕುಂಬ್ಳೆ ಕೊಡುಗೆ ಅನನ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಡಿಪು: ‘ಯಕ್ಷಗಾನ ಕಲಾವಿದ ಕುಂಬ್ಳೆ ಸುಂದರರಾವ್ ಅವರ ಕಲಾನೈಪುಣ್ಯತೆ, ಮಾತುಗಾರಿಕೆ, ಪುರಾಣ ಜ್ಞಾನ, ಶಬ್ದ ಪ್ರಯೋಗ, ಹಾಸ್ಯ ಮತ್ತು ಗಂಭೀರ ಪಾತ್ರಗಳ ನಡುವಿನ ಚಾಕಚಕ್ಯತೆ ಅದ್ಭುತ. ಯಕ್ಷಗಾನ ಲೋಕಕ್ಕೆ ಅವರ ಕೊಡುಗೆ ಅನನ್ಯವಾದುದು ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಹೇಳಿದರು.

ಇತ್ತೀಚೆಗೆ ನಿಧನರಾದ ಕುಂಬ್ಳೆ ಸುಂದರ ರಾವ್ ಅವರಿಗೆ ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಯಕ್ಷಗಾನ ಕಲಾಕೇಂದ್ರದಲ್ಲಿ ಶುಕ್ರವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿನಮನ ಸಲ್ಲಿಸಿದರು.

‘ಯಕ್ಷಗಾನದ ಬಗ್ಗೆ ಅಪಾರ ಜ್ಞಾನವಂತರಾಗಿದ್ದ ಅವರು, ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿದ್ದ ಅವರ ಅವಧಿಯಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ಅನೇಕ ಕೊಡುಗೆ ನೀಡಿದ್ದಾರೆ. ಅಲ್ಲದೆ, ಮಂಗಳೂರು ವಿಶ್ವವಿದ್ಯಾಲಯದ ಯಕ್ಷಗಾನ ಅಧ್ಯಯನ ಕೇಂದ್ರದ ಎಲ್ಲಾ ಚಟುಚಟಿಕೆಯಲ್ಲೂ ಅವರು ಸಕ್ರಿಯವಾಗಿ ತೊಡಗಿಸಿಕೊಂಡು ಮಾರ್ಗದರ್ಶನ ನೀಡಿದ್ದರು’ ಎಂದು ಸ್ಮರಿಸಿದರು.

ಮಂಗಳೂರು ವಿವಿ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಮಾತನಾಡಿ, ‘ಕುಂಬ್ಳೆ ಪ್ರದೇಶವೇ ಯಕ್ಷಗಾನದ ಮಾತೃಭೂಮಿ. ಕುಂಬ್ಳೆ ಸುಂದರ್ ರಾವ್ ಅವರು ಸಾಧನೆಯ ಮೂಲಕ ಇಡೀ ಊರಿಗೇ ಗೌರವ ತಂದುಕೊಟ್ಟವರು. ಅಲ್ಲದೆ, ತಾಳಮದ್ದಳೆ ಎಂಬ ವಿದ್ವತ್‌ನ ಆಯಾಮಕ್ಕೆ ಪರಿಪೂರ್ಣತೆಯನ್ನು ತಂದುಕೊಟ್ಟವರು ಅವರು. ಸೃಜನಶೀಲತೆಯ ಮೂಲಕ ತಾಳಮದ್ದಳೆಯ ಕ್ಷೇತ್ರಕ್ಕೆ ಒಂದು ಮಾದರಿಯನ್ನು ತಂದುಕೊಟ್ಟಿದ್ದಾರೆ’ ಎಂದರು.

ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಶ್ರೀಪತಿ ಕಲ್ಲೂರಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಂಬ್ಳೆ ಸುಂದರ ರಾವ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಸುಂದರ್ ರಾವ್ ಅವರ‌ ಇಷ್ಟವಾದ ಯಕ್ಷಗಾನ ಪ್ರಸಂಗದ ಪದ್ಯವನ್ನು ಯಕ್ಷಮಂಗಳ ತಂಡದ ವಿದ್ಯಾರ್ಥಿನಿ ಜನನಿ ಹಾಡಿದರು. ಯಕ್ಷಗಾನ ಅಧ್ಯಯನ ಕೇಂದ್ರದ ಡಾ.ಸತೀಶ್  ಕಾರ್ಯಕ್ರಮ ನಿರೂಪಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.