ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಮುಕ್ತ ಭಾರತ ಅಸಾಧ್ಯ: ರಾಜ್ಯ ಯುವ ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್

Last Updated 30 ಮಾರ್ಚ್ 2022, 16:04 IST
ಅಕ್ಷರ ಗಾತ್ರ

ಮಂಗಳೂರು: ‘ಕಾಂಗ್ರೆಸ್ ಮುಕ್ತ ಭಾರತ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ’ ಎಂದು ಕಾಂಗ್ರೆಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ವಿಶ್ವಾಸ ವ್ಯಕ್ತಪಡಿಸಿದರು.

ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡಿದ್ದ ಅವರು, ನಗರದ ಸೇಂಟ್ ಸೆಬಾಸ್ಟಿಯನ್ ಸಭಾಂಗಣದಲ್ಲಿ ಆಯೋಜಿಸಿದ್ದ ಯುವ ಜಾಗೃತಿ ಸಮಾವೇಶದಲ್ಲಿ ಮಾತನಾಡಿದರು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕೊಡುಗೆ ನೀಡಿ ಬಲಿದಾನ ಮಾಡಿರುವ ಚರಿತ್ರೆ ಕಾಂಗ್ರೆಸ್ ಪಕ್ಷಕ್ಕೆ ಇದೆ. ಆಗ ಬಿಜೆಪಿ, ಆರ್‌ಎಸ್‌ಎಸ್, ಎಸ್‌ಡಿಪಿಐ, ಪಿಎಫ್‌ಐಯಂತಹ ಯಾವುದೇ ಪಕ್ಷ ಅಥವಾ ಸಂಘಟನೆ ಇರಲಿಲ್ಲ. ಈಗ ಕಾಂಗ್ರೆಸ್ ಮುಕ್ತ ಭಾರತ ಎನ್ನುತ್ತಿದ್ದಾರೆ. ಯಾರಿಂದಲೂ ಇದು ಸಾಧ್ಯವಿಲ್ಲ ಎಂದರು.

ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯುವ ಪ್ರಯತ್ನ ನಡೆಯುತ್ತಿದೆ. ಇಲ್ಲಿ ಜಾತಿ–ಮತಕ್ಕಿಂತ ಹೆಚ್ಚಾಗಿ ನಾವೆಲ್ಲರೂ ಭಾರತೀಯರು, ಕನ್ನಡಿಗರು ಎಂಬ ಭಾವ ಮೂಡಬೇಕು. ಇಲ್ಲಿ ಯಾರಿಗೆ ಅನ್ಯಾಯ ಆದರೂ ಅದು ಭಾರತೀಯರಿಗೆ ಅನ್ಯಾಯವಾದಂತೆ ಎಂದರು.

ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ‘ಪಕ್ಷದ ಯುವಕರಿಗೆ ನಾಯಕತ್ವ ವಹಿಸಲು ಹಿರಿಯರು ಅವಕಾಶ ನೀಡಬೇಕು. ಕಾಂಗ್ರೆಸ್ ಅನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಶ್ರಮಿಸಬೇಕು’ ಎಂದರು.

ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ‘ಮತೀಯ ಸೂಕ್ಷ್ಮ ಜಿಲ್ಲೆಯಾಗಿರುವ ದಕ್ಷಿಣ ಕನ್ನಡದಲ್ಲಿ ಬಹುಸಂಖ್ಯಾತ ಮತೀಯವಾದದಂತೆ ಅಲ್ಪಸಂಖ್ಯಾತ ಮತೀಯವಾದವೂ ಇದೆ. ಇವೆರಡೂ ದೇಶದ ಹಿತಕ್ಕೆ ಅಪಾಯಕಾರಿಯಾಗಿದೆ. ಜಿಲ್ಲೆಯಲ್ಲಿ ಮತೀಯವಾದದ ಹಿನ್ನೆಲೆಯಲ್ಲಿ ಅನೇಕ ಹತ್ಯೆಗಳು ನಡೆದಿವೆ. ಆದರೆ ಇವುಗಳಲ್ಲಿ ಬಿಜೆಪಿ ಮತ್ತು ಎಸ್‌ಡಿಪಿಐ ಪಕ್ಷಕ್ಕೆ ಸೇರಿದವರು ಆರೋಪಿಗಳಾಗಿದ್ದಾರೆಯೇ ಹೊರತು ಒಬ್ಬನೇ ಒಬ್ಬ ಕಾಂಗ್ರೆಸ್ ಕಾರ್ಯಕರ್ತ ಆರೋಪಿ ಸ್ಥಾನದಲ್ಲಿಲ್ಲ’ ಎಂದರು.

ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ರಾಜ್ಯ ಯುವ ಕಾಂಗ್ರೆಸ್ ಉಸ್ತುವಾರಿ ಅನಿಲ್ ಕುಮಾರ್ ಯಾದವ್, ವಿದ್ಯಾ ಬಾಲಕೃಷ್ಣನ್, ಮಾಜಿ ಶಾಸಕರಾದ ಜೆ.ಆರ್. ಲೋಬೊ, ಮೊಹಿಯುದ್ದೀನ್ ಬಾವ,‌ ಐವನ್ ಡಿಸೋಜ, ಪ್ರಮುಖರಾದ ಮಿಥುನ್ ರೈ, ಶಶಿಧರ ಹೆಗ್ಡೆ, ಮಹಾಬಲ ಮಾರ್ಲ, ನವೀನ್ ಡಿಸೋಜ, ಶಾಲೆಟ್ ಪಿಂಟೊ, ಅಶ್ರಫ್ ಬಜಾಲ್, ಸುರೇಂದ್ರ ಕಂಬಳಿ, ಪ್ರಕಾಶ್ ಸಾಲ್ಯಾನ್, ಉಮೇಶ್ ದಂಡಕೇರಿ, ಸಲೀಂ, ಪ್ರವೀಣ್ ಚಂದ್ರ ಆಳ್ವ ಇದ್ದರು.

‘ದ.ಕ.ಕ್ಕೆ ಕೊನೆಯ ಸ್ಥಾನ’

ಕಾಂಗ್ರೆಸ್ ಆಯೋಜಿಸಿರುವ ಡಿಜಿಟಲ್ ಸದಸ್ಯತ್ವ ಅಭಿಯಾನದಲ್ಲಿ ಇಡೀ ರಾಜ್ಯದಲ್ಲಿ ದಕ್ಷಿಣ ಕನ್ನಡ ಕೊನೆಯ ಸ್ಥಾನದಲ್ಲಿದೆ. ಯುವ ಕಾಂಗ್ರೆಸ್‌ನಿಂದ ಪ್ರತಿ ಹಂತದ ನಾಯಕರಿಗೂ ಸದಸ್ಯತ್ವ ಗುರಿ ನಿಗದಿ ಮಾಡಿದ್ದರೂ ಯಾರೂ ಗುರಿ ಸಾಧನೆ ಮಾಡಿಲ್ಲ. ಪಕ್ಷ ಸಂಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಮೊಹಮ್ಮದ್ ನಲಪಾಡ್ ಹೇಳಿದರು.

ಬೈಕ್ ರ್‍ಯಾಲಿಗೆ ತಡೆ

ಮೊಹಮ್ಮದ್ ನಲಪಾಡ್ ಅವರನ್ನು ಸ್ವಾಗತಿಸಲು ಯುವ ಕಾಂಗ್ರೆಸ್ ಕಾರ್ಯಕರ್ತರು ಮಂಗಳೂರು ವಿಮಾನ ನಿಲ್ದಾಣದಿಂದ ನಗರಕ್ಕೆ ಹಮ್ಮಿಕೊಂಡಿದ್ದ ಬೈಕ್ ರ‍್ಯಾಲಿಗೆ ಪೊಲೀಸರು ತಡೆ ಒಡ್ಡಿದರು.

ವಿಮಾನ ನಿಲ್ದಾಣದಿಂದ ಹೊರಟು ಕೆಳಗಿನ ರಸ್ತೆಗೆ ಬರುವ ದಾರಿಯಲ್ಲಿ ತಡೆದ ಪೊಲೀಸರು, ಹೆಲ್ಮೆಟ್ ಹಾಕಿದವರಿಗೆ ತೆರಳಲು ಅವಕಾಶ ನೀಡಿದರು. ‘ಬೈಕ್ ರ‍್ಯಾಲಿಬಗ್ಗೆ ಮುಂಚಿತವಾಗಿ ಅನುಮತಿ ಪಡೆದಿಲ್ಲ ಮತ್ತು ಕೆಲವರು ಹೆಲ್ಮೆಟ್ ಹಾಕಿರಲಿಲ್ಲ ಎಂಬ ಕಾರಣಕ್ಕಾಗಿ ಬೈಕ್‌ರ‍್ಯಾಲಿ ತಡೆಯಲಾಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT