ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ: 2,690 ಓಆರ್‌ಎಸ್‌, ಝಿಂಕ್‌ ಕಾರ್ನರ್‌

ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣರಾವ್‌ ಹೇಳಿಕೆ
Last Updated 1 ಜೂನ್ 2019, 9:14 IST
ಅಕ್ಷರ ಗಾತ್ರ

ಮಂಗಳೂರು: ಜೂನ್‌ 3ರಿಂದ 17ರವರೆಗೆ ಜಿಲ್ಲೆಯಾದ್ಯಂತ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ನಡೆಯಲಿದ್ದು, ಇದರ ಅಂಗವಾಗಿ 2,690 ಓಆರ್‌ಎಸ್‌ ಮತ್ತು ಝಿಂಕ್‌ ಕಾರ್ನರ್‌ ತೆರೆಯಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್‌ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಿಕ್ಕ ಮಕ್ಕಳಲ್ಲಿ ಅತಿಸಾರ ಭೇದಿ ಉಂಟಾದರೆ ನಿರ್ಜಲೀಕರಣ ತಡೆಯಲು ಓಆರ್‌ಎಸ್‌ ದ್ರಾವಣ ಕುಡಿಯಬೇಕು. ಅತಿಯಾದ ಭೇದಿಯಿಂದ ಬಳಲುವ ಮಕ್ಕಳಿಗೆ ಝಿಂಕ್‌ ಮಾತ್ರೆ ನೀಡಬೇಕು. ಈ ಕುರಿತು ಜಾಗೃತಿ ಮೂಡಿಸಲು ಪಾಕ್ಷಿಕದ ಅವಧಿಯಲ್ಲಿ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳು, ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಓಆರ್‌ಎಸ್‌ ಮತ್ತು ಝಿಂಕ್‌ ಕಾರ್ನರ್‌ ತೆರೆಯಲಾಗುವುದು’ ಎಂದರು.

ಅತಿಸಾರ ಭೇದಿಯಿಂದ ಸಾವಿಗೀಡಾಗುವ ಐದು ವರ್ಷದೊಳಗಿನ ಮಕ್ಕಳ ಸಂಖ್ಯೆ ಕಡಿಮೆ ಮಾಡಲು ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. ಓಆರ್‌ಎಸ್‌ ದ್ರಾವಣದ ತಯಾರಿ ಮತ್ತು ಝಿಂಕ್‌ ಮಾತ್ರೆಗಳ ಬಳಕೆಯ ಕುರಿತು ‘ಕಾರ್ನರ್‌’ಗಳಲ್ಲಿ ಪ್ರಾತ್ಯಕ್ಷಿಕೆ ನೀಡಲಾಗುವುದು ಎಂದು ತಿಳಿಸಿದರು.

ಮನೆ ಮನೆಗೆ ಓಆರ್‌ಎಸ್‌: ಪಾಕ್ಷಿಕದ ಅವಧಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯಲ್ಲಿ ಐದು ವರ್ಷದೊಳಗಿನ ಮಕ್ಕಳಿರುವ ಮನೆಗಳಿಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಒಂದು ಮಗುವಿಗೆ ತಲಾ ಒಂದರಂತೆ ಓಆರ್‌ಎಸ್‌ ದ್ರಾವಣದ ಮಿಶ್ರಣದ ಪೊಟ್ಟಣ ವಿತರಿಸುವರು. ಝಿಂಕ್‌ ಮಾತ್ರೆಯ ಲಭ್ಯತೆಯ ಕುರಿತು ಮಾಹಿತಿಯನ್ನೂ ನೀಡುವರು ಎಂದರು.

ಕಳೆದ ವರ್ಷ ಈ ಅಭಿಯಾನದಲ್ಲಿ ಜಿಲ್ಲೆಯಲ್ಲಿ 1,42,296 ಮಕ್ಕಳನ್ನು ತಲುಪುವ ಗುರಿ ಹೊಂದಲಾಗಿತ್ತು. ಶೇಕಡ 98ರಷ್ಟು ಗುರಿ ಸಾಧಿಸಲಾಗಿತ್ತು. ಈ ಬಾರಿ 1,40,288 ಮಕ್ಕಳನ್ನು ತಲುಪುವ ಗುರಿ ಹೊಂದಲಾಗಿದೆ. 2,101 ಅಂಗನವಾಡಿ ಕಾರ್ಯಕರ್ತೆಯರು, 1,354 ಆಶಾ ಕಾರ್ಯಕರ್ತೆಯರು, 390 ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಮತ್ತು 16 ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮ (ಆರ್‌ಬಿಎಸ್‌ಕೆ) ತಂಡದ ಸಿಬ್ಬಂದಿ ಅಭಿಯಾನದ ಯಶಸ್ಸಿಗೆ ಶ್ರಮಿಸಲಿದ್ದಾರೆ ಎಂದು ವಿವರ ನೀಡಿದರು.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ‍ಪ್ರಕಾರ, ಭಾರತದಲ್ಲಿ ಐದು ವರ್ಷಕ್ಕಿಂತ ಕೆಳಗಿನವರಲ್ಲಿ ಶೇ 8ರಷ್ಟು ಮಕ್ಕಳು ಅತಿಸಾರ ಭೇದಿಯಿಂದ ಸಾವನ್ನಪ್ಪುತ್ತಾರೆ. ಆದರೆ, ಐದು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಅತಿಸಾರ ಭೇದಿಯಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದರು.

ಹೆಚ್ಚಿನ ಸಂದರ್ಭಗಳಲ್ಲಿ ಕೈ ಶುಚಿಯಾಗಿಲ್ಲದೇ ಇರುವುದು ಅತಿಸಾರ ಭೇದಿಗೆ ಕಾರಣವಾಗುತ್ತದೆ. ಎಳೆಯ ಮಕ್ಕಳು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಬಿಸಿಯೂಟ ತಯಾರಕರಲ್ಲಿ ಪಾಕ್ಷಿಕದ ವಧಿಯಲ್ಲಿ ಈ ಕುರಿತು ಜಾಗೃತಿ ಮೂಡಿಸಲಾಗುವುದು. ಎದೆ ಹಾಲುಣಿಸುವುದರ ಮಹತ್ವ ಕುರಿತು ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.

ಬಾವಿಗಳ ಶುದ್ಧೀಕರಣಕ್ಕೆ ಸುತ್ತೋಲೆ

ಬೇಸಿಗೆಯ ಅವಧಿಯಲ್ಲಿ ಬಹುತೇಕ ತೆರೆದ ಬಾವಿಗಳಲ್ಲಿ ನೀರಿನ ಮಟ್ಟ ತಳಕ್ಕೆ ಕುಸಿದಿದೆ. ಕಡಿಮೆ ನೀರು ಇರುವ ಸಂದರ್ಭದಲ್ಲಿ ಕಲುಷಿತವಾಗಿ, ರೋಗ ಹಬ್ಬುವ ಅಪಾಯವಿದೆ. ಈ ಕಾರಣದಿಂದ ಬಾವಿಗಳನ್ನು ಕ್ಲೋರಿನ್ ಬಳಸಿ ಶುದ್ಧೀಕರಿಸುವಂತೆ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಜಿಲ್ಲಾಡಳಿತ ಸುತ್ತೋಲೆ ಹೊರಡಿಸಿದೆ ಎಂದು ರಾಮಕೃಷ್ಣ ರಾವ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT