ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಐಸಿಯುನಲ್ಲಿ ಅಗ್ನಿ ಅವಘಡ

ಆರು ಶಿಶುಗಳು ವೆನ್ಲಾಕ್‌ ಆಸ್ಪತ್ರೆಗೆ ಸ್ಥಳಾಂತರ
Last Updated 9 ಡಿಸೆಂಬರ್ 2018, 17:10 IST
ಅಕ್ಷರ ಗಾತ್ರ

ಮಂಗಳೂರು: ನಗರದ ಲೇಡಿ ಗೋಶನ್‌ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕ (ಎನ್‌ಐಸಿಯು) ಮತ್ತು ಫೋಟೊಥೆರಪಿ ಘಟಕದಲ್ಲಿ ಭಾನುವಾರ ಅಗ್ನಿ ಅವಘಡ ಸಂಭವಿಸಿದ್ದು, ಕೃತಕ ಉಸಿರಾಟ ವ್ಯವಸ್ಥೆಯಲ್ಲಿದ್ದ ಆರು ಮಕ್ಕಳನ್ನು ವೆನ್ಲಾಕ್‌ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಎನ್‌ಐಸಿಯು ಮತ್ತು ಫೋಟೊಥೆರಪಿ ಘಟಕದಲ್ಲಿ ಬೆಳಿಗ್ಗೆ 10.30ರ ಸುಮಾರಿಗೆ ಆಮ್ಲಜನಕ ಸೋರಿಕೆಯಾಗಿತ್ತು. ತಕ್ಷಣವೇ ದುರಸ್ತಿ ಮಾಡಲಾಗಿತ್ತು. ಮಧ್ಯಾಹ್ನ 12.30ರ ಸುಮಾರಿಗೆ ಫೋಟೊಥೆರಪಿ ಘಟಕದ ಚಿಕಿತ್ಸಾ ತೊಟ್ಟಿಲು ಒಂದರಲ್ಲಿ ಮತ್ತೆ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿತ್ತು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪಾಂಡೇಶ್ವರ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಬೆಂಕಿ ಆರಿಸಿದರು.

ಎನ್‌ಐಸಿಯು ಮತ್ತು ಫೋಟೊಥೆರಪಿ ಘಟಕದಲ್ಲಿ ಒಟ್ಟು ಒಂಬತ್ತು ನವಜಾತ ಶಿಶುಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಎಲ್ಲ ಮಕ್ಕಳನ್ನೂ ಈ ಘಟಕಗಳಿಂದ ಹೊರತರಲಾಯಿತು. ಸಂಪೂರ್ಣವಾಗಿ ಈ ಘಟಕಗಳ ಬಳಕೆಯನ್ನು ಸ್ಥಗಿತಗೊಳಿಸಲಾಗಿದೆ.

‘ಒಂಬತ್ತು ಮಕ್ಕಳ ಪೈಕಿ ಮೂವರು ಮಕ್ಕಳು ಗುಣಮುಖರಾಗಿದ್ದು, ತಾಯಂದಿರಿಗೆ ನೀಡಲಾಗಿದೆ. ಕೃತಕ ಉಸಿರಾಟ ವ್ಯವಸ್ಥೆಯ ನೆರವು ಅಗತ್ಯವಿರುವ ಮತ್ತು ಫೋಟೊಥೆರಪಿ ಚಿಕಿತ್ಸೆಯಲ್ಲಿದ್ದ ಆರು ಮಕ್ಕಳನ್ನು ವೆನ್ಲಾಕ್‌ ಆಸ್ಪತ್ರೆಯ ಪ್ರಾದೇಶಿಕ ಉನ್ನತ ಶಿಶು ಚಿಕಿತ್ಸಾ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ’ ಎಂದು ಲೇಡಿ ಗೋಶನ್‌ ಆಸ್ಪತ್ರೆಯ ಅಧೀಕ್ಷಕಿ ಡಾ.ಸವಿತಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT