ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಂಗಣದಲ್ಲಿ ತಾತ್ಕಾಲಿಕ ‘ಫ್ಲಡ್‌ಲೈಟ್’

Last Updated 27 ಏಪ್ರಿಲ್ 2015, 5:53 IST
ಅಕ್ಷರ ಗಾತ್ರ

ಮಂಗಳೂರು: ಫೆಡರೇಷನ್‌ ಕಪ್‌ ಅಥ್ಲೆಟಿಕ್‌ ಕ್ರೀಡಾಕೂಟದ ಸಂದರ್ಭದಲ್ಲಿ ಮಂಗಳೂರಿನ ಮಂಗಳಾ ಕ್ರೀಡಾಂಗಣ ದಲ್ಲಿ ರಾತ್ರಿ 10 ಗಂಟೆವರೆಗೆ ಕತ್ತಲಾಗದು. ಕ್ರೀಡಾಂಗಣದ ಹೊರಗಡೆ ಕತ್ತಲಿದ್ದರೂ ಕ್ರೀಡಾಂಗಣದ ಒಳಗಡೆ ಮಾತ್ರ ಹಗಲಿನಂತೆ ಬೆಳಕು ಇದ್ದೇ ಇರುತ್ತದೆ.

ಹೌದು, ಏ.30ರಿಂದ ಮೇ 4ರ ವರೆಗೆ ಐದು ದಿನ ನಡೆಯಲಿರುವ ಫೆಡರೇಷನ್‌ ಕಪ್‌ ಕ್ರೀಡಾಕೂಟಕ್ಕೆ ತಾತ್ಕಾಲಿಕ ಫ್ಲಡ್‌ ಲೈಟ್‌ ಅಳವಡಿಸಲಾಗಿದ್ದು, ಸಂಜೆಯಾಗು ತ್ತಿದ್ದಂತೆ ಆ ಲೈಟ್‌ಗಳು ಹೊತ್ತಿಕೊಳ್ಳುತ್ತವೆ. ಆಗ ಅವುಗಳ ಬೆಳಕು ಕ್ರೀಡಾಂಗಣದಲ್ಲಿ ಹಗಲಿನ ವಾತಾವರಣ ನಿರ್ಮಿಸಲಿವೆ. ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಯಾವುದೇ ರೀತಿಯ ಕತ್ತಲು ಕ್ರೀಡಾಂಗಣದಲ್ಲಿ ಸುಳಿಯದೇ ಸದಾ ಬೆಳಕಿನಿಂದ ಕಂಗೊಳಿಸಲಿದೆ.

ಕ್ರೀಡಾಕೂಟದಲ್ಲಿ ನಡೆಯುವ ವಿವಿಧ ಕ್ರೀಡಾ ಸ್ಪರ್ಧೆಗಳಿಗೆ ಫ್ಲಡ್‌ಲೈಟ್‌ ಅನುಕೂಲವಾಗಲಿದೆ. ಆದರೂ, ಅಂತಿಮ ಸುತ್ತಿನ ಸ್ಪರ್ಧೆಗಳಿಗೆ ಈ ಬೆಳಕು ಬಳಕೆ ಮಾಡಿಕೊಳ್ಳುತ್ತಿಲ್ಲ. ಕ್ರೀಡಾಕೂ ಟದ ನಂತರ ಪ್ರತಿದಿನ ರಾತ್ರಿ ನಡೆಯುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮಾತ್ರ ಇದೇ ಬೆಳಕಿನಲ್ಲಿ ನಡೆಯಲಿವೆ. 

12 ಫ್ಲಡ್‌ ಲೈಟ್ಸ್‌: ಕ್ರೀಡಾಂಗಣದ ಒಳ ಆವರಣದಲ್ಲಿ 12 ಫ್ಲಡ್‌ ಲೈಟ್‌ ಟವರ್‌ಗಳನ್ನು ನಿರ್ಮಿ ಸಲಾಗಿದ್ದು, ಒಂದೊಂದು ಟವರ್‌ಗೆ 1,000 ವೋಲ್ಟ್‌ನ ನಾಲ್ಕು ಹಾಗೂ 40 ವೋಲ್ಟ್‌ನ 18 ಬಲ್ಬ್‌(ದೀಪ)ಗಳನ್ನು ಅಳವಡಿಸಲಾಗಿದೆ. ಇದರಿಂದ ಒಂದು ಟವರ್‌ಗೆ 22 ಬಲ್ಬ್‌ಗಳಿಂದ 4,732 ವೋಲ್ಟ್‌, ಒಟ್ಟು 12 ಟವರ್‌ಗಳಿಗೆ 236 ಬಲ್ಬ್‌ಗಳಿಂದ 56,784 ವೋಲ್ಟ್‌ ಬೆಳಕು ಹರಿದು ಬರಲಿದೆ. ಹೀಗಾಗಿ ಈ ಲೈಟ್‌ ಹೊತ್ತಿರುವವರೆಗೆ ಕ್ರೀಡಾಂಗಣದಲ್ಲಿ ಕತ್ತಲು ಆವರಿಸಿರುವುದೇ ಗೊತ್ತಾಗು ವುದಿಲ್ಲ.

ಮಂಗಳೂರು ದೇರಬೈಲ್‌ನ ಶಬರಿ ಸ್ಕಾಫೋಲ್ಡಿಂಗ್ಸ್‌ನ ಮಾಧವ ಅವರು ಟವರ್‌ಗಳನ್ನು ಅಳವಡಿಸುತ್ತಿದ್ದು, ಇದಕ್ಕೆ ಬೇಕಾದ ಎಲ್ಲ ರೀತಿಯ ಲೈಟ್ಸ್‌ಗಳನ್ನು ಮೂಡುಬಿದಿರೆಯ ರಾಮಚಂದ್ರ ಭಟ್‌ ಅವರು ಅಳವಡಿಸುತ್ತಿದ್ದಾರೆ. ತಿಂಗಳ ಹಿಂದೆ ಮೂಡುಬಿದಿರೆಯ ಆಳ್ವಾಸ್‌ನಲ್ಲಿ ನಡೆದ 75ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಅಥ್ಲೆಟಿಕ್ಸ್‌ ಚಾಂಪಿ ಯನ್‌ಶಿಪ್‌ಗೆ ಇವರಿಬ್ಬರೇ ಫ್ಲಡ್‌ಲೈಟ್ಸ್‌ ಅಳವಡಿಸಿರುವುದು ವಿಶೇಷ.

₨22 ಲಕ್ಷ ವೆಚ್ಚ:
ಐದು ದಿನಗಳ ಕ್ರೀಡಾಕೂಟಕ್ಕೆ ತಾತ್ಕಾಲಿಕವಾಗಿ ಅಳವಡಿಸಲಾಗಿರುವ ಫ್ಲಡ್‌ಲೈಟ್ಸ್‌ಗೆ ಒಟ್ಟು ₨ 22 ಲಕ್ಷ ವೆಚ್ಚ ಮಾಡಲಾಗುತ್ತದೆ. ಈ ಮೊತ್ತದಲ್ಲಿ ಲೈಟಿಂಗ್‌ ಇಂಧನದ ವೆಚ್ಚವೂ ಸೇರಿದೆ ಎಂದು ಕ್ರೀಡಾ ಸಚಿವ ಅಭಯಚಂದ್ರ ಜೈನ್‌ ತಿಳಿಸಿದ್ದಾರೆ.

ಕ್ರೀಡಾಕೂಟದ ನೆಪದಲ್ಲಿ ಕ್ರೀಡಾಂಗ ಣಕ್ಕೆ ಶಾಶ್ವತವಾದ ಫ್ಲಡ್‌ ಲೈಟ್‌ ಅಳವಡಿ ಸುವ ಚಿಂತನೆ ನಡೆಸಲಾಗಿತ್ತು. ಆದರೆ, ಆರ್ಥಿಕ ಕೊರತೆ ಹಾಗೂ ಅದರ ನಿರ್ವ ಹಣೆ ಸಮಸ್ಯೆಯಿಂದ ಆ ಯೋಜನೆ ಕೈಬಿಡಲಾಯಿತು. ಸಂಜೆ ಸಮಯದಲ್ಲಿ ನಡೆಯುವ ಕ್ರೀಡಾಕೂಟಕ್ಕೆ ಮೋಡ ಕವಿದ ವಾತಾವರಣ ಇದ್ದರೂ ತೊಂದರೆ ಆಗಲಿದೆ ಎಂದು ಭಾರತೀಯ ಅಥ್ಲೆಟಿಕ್‌ ಅಸೋಸಿಯೇಷನ್‌ ಹೇಳಿತ್ತು. ಜತೆಗೆ ಕ್ರೀಡಾಕೂಟದ ನೇರ ಪ್ರಸಾರದ ಹೊಣೆ ಹೊತ್ತಿರುವ ದೂರದರ್ಶನ ಸ್ಪೋರ್ಟ್ಸ್‌ ಚಾನೆಲ್‌ನ ತಾಂತ್ರಿಕ ಅಧಿಕಾರಿಗಳು ಸಂಜೆ ಸಮಯದಲ್ಲಿನ ಮಂದ ಬೆಳಕು ನೇರ ಪ್ರಸಾರಕ್ಕೆ ಅಡ್ಡಿಯುಂಟು ಮಾಡಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವುದು ತಾತ್ಕಾಲಿಕ ಫ್ಲಡ್‌ಲೈಟ್ಸ್‌ ಅಳವಡಿಕೆಗೆ ಕಾರಣವಾಗಿದೆ.

ಈಗ ಕ್ರೀಡಾಂಗಣದಲ್ಲಿ ಹಾಕಿದ ತಾತ್ಕಾಲಿಕ ಫ್ಲಡ್‌ಲೈಟ್‌ ಉತ್ತಮ ಬೆಳಕನ್ನು ನೀಡಲಿದ್ದು,ಇದರ ಬೆಳಕಿನಲ್ಲಿ ಕ್ರೀಡಾ ಕೂಟ ನಡೆಸಲು ಯಾವುದೇ ತೊಂದರೆ ಇಲ್ಲ. ಆದರೆ, ಕೆಲವು ಫೋಟೋ ಫಿನಿ ಶಿಂಗ್‌ ಆಟಗಳಲ್ಲಿ ಒಂದು ಕ್ಷಣಕ್ಕೂ ಮಹತ್ವ ಇರುವುದರಿಂದ ಫಲಿತಾಂಶದ ಸಂದರ್ಭದಲ್ಲಿ ತೊಂದರೆಯಾಗುವ ಸಾಧ್ಯತೆಯಿದೆ. ಹೀಗಾಗಿ ಅಂತಿಮ ಪಂದ್ಯ ಗಳನ್ನು ಈ ಬೆಳಕಿನಲ್ಲಿ ನಡೆಸ ದಿರಲು ನಿರ್ಧರಿಸಲಾಗಿದೆ ಎಂದು ದ.ಕ. ಜಿಲ್ಲಾ ಅಥ್ಲೆಟಿಕ್‌ ಅಸೋಸಿಯೇಷನ್‌ ಅಧ್ಯಕ್ಷ ಮಂಜುನಾಥ್‌ ಭಂಡಾರಿ ಹೇಳುತ್ತಾರೆ.

ಹೊನಲು ಬೆಳಕಿನ ಕ್ರೀಡಾಕೂಟ ಅನ್ನದಿದ್ದರೂ, ಸಂಜೆ ಕ್ರೀಡಾಂಗಣ ದಲ್ಲಿರುವ ಪ್ರಖರ ಬೆಳಕು ಆ ತರಹದ ಸನ್ನಿವೇಶವನ್ನು ನಿರ್ಮಾಣ ಮಾಡಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಈ ಫ್ಲಡ್‌ಲೈಟ್‌ ಬೆಳಕು ವರದಾನವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT