ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಳಿ ನಾಮದ ನೀರು ಕೋಳಿ

Last Updated 26 ಅಕ್ಟೋಬರ್ 2012, 7:10 IST
ಅಕ್ಷರ ಗಾತ್ರ

ಸಾಮಾನ್ಯವಾಗಿ ಎಲ್ಲ ಕೆರೆಗಳಲ್ಲಿ ಕಂಡು ಬರುವ, ಹೆಚ್ಚು ಕಡಿಮೆ ಬಾತು ಕೋಳಿ ಗಾತ್ರದ ಅಚ್ಚ ಕಪ್ಪು ಬಣ್ಣದ ಸ್ವದೇಶಿ ನೀರ ಹಕ್ಕಿ. ಗುಂಡು ಗುಂಡಾಗಿ ಬಾಲವೇ ಇಲ್ಲವೇನೋ ಎಂಬಂತೆ ಭಾಸವಾಗುವ ಈ ಹಕ್ಕಿಯ ಸಾಮಾನ್ಯ ಹೆಸರು `ನಾಮದ ಕೋಳಿ~.

ಇದಕ್ಕೆ ಕಾರಣ ಇದರ ಅಚ್ಚ ಬಿಳಿಯ ಕೊಕ್ಕು ಹಾಗೂ ಕೊಕ್ಕಿನಿಂದ ಮೇಲಕ್ಕೆ ಹಣೆಯವರೆಗೂ ಚಾಚಿರುವ ಬಿಳಿಯ ಕೊಂಬಿನ ಫಲಕ. ಹೀಗಾಗಿ ಈ ಬಿಳಿಯ ಪಟ್ಟಿ ಹಕ್ಕಿಯ ಕರಿ ಮೈಯ ಹಿನ್ನೆಲೆಯಲ್ಲಿ ದೂರದಿಂದಲೇ ತುಂಬ ಚೆನ್ನಾಗಿ ಗೋಚರಿಸುವುದು. ಒಂದು ರೀತಿಯ ನಾಮದಂತೆ!

ಇಂಗ್ಲಿಷ್‌ನಲ್ಲಿ ಈ ಹಕ್ಕಿಯ ಹೆಸರು `ಕೂಟ್~. ದೇಶದಾದ್ಯಂತ ಕಾಣಲು ಸಿಗುವ ಈ ಹಕ್ಕಿಗಳು ಯೂರೋಪ್, ಉತ್ತರ ಆಫ್ರಿಕಾ, ದಕ್ಷಿಣ ಚೀನಾ, ರಷ್ಯಾ, ಶ್ರೀಲಂಕಾ, ನೇಪಾಳದಲ್ಲೂ ವಾಸ ಮಾಡುತ್ತವೆ. ಕೆಲವೊಂದು ನಾಮದ ಕೋಳಿಯ ಗುಂಪು ದೇಶದಿಂದ ದೇಶಕ್ಕೆ ವಲಸೆ ಕೂಡ ಹೋಗುತ್ತವೆ.

ಇವು ಸಾಮಾನ್ಯವಾಗಿ ಸಾಕಷ್ಟು ಸಂಖ್ಯೆಯ ಗುಂಪುಗಳಲ್ಲಿ ವಾಸ ಮಾಡುತ್ತವೆ. ಚಳಿಗಾಲದಲ್ಲಿ ಬೇರೆಡೆಯಿಂದ ವಲಸೆ ಬರುವ ಹಕ್ಕಿಗಳಿಂದ ಇವುಗಳ ಸಂಖ್ಯೆ ಹೆಚ್ಚಾಗುವುದು, ಗುಂಪುಗುಂಪಾಗಿ ತಮ್ಮ ಆಹಾರವಾದ ಜಲ ಸಸ್ಯಗಳ ಚಿಗುರುಗಳು, ಬೀಜಗಳು, ಹುಳುಹುಪ್ಪಟೆ, ಮೃದ್ವಂಗಿಗಳನ್ನು ಹುಡುಕಿಕೊಂಡು ತುಂಬ ಸರಾಗವಾಗಿ ನೀರಿನಲ್ಲಿ ಈಜುತ್ತ ಕಾಲ ಕಳೆಯುವುದನ್ನು ನೋಡಬಹುದು.

ಅಪಾಯ ಒದಗಿದಾಗ ತುಂಬ ವೇಗ ಗತಿಯಲ್ಲಿ ನೀರಿನ ಮೇಲ್ಮೈ ಮೇಲೆ ಒಂದು ರೀತಿಯಾಗಿ ಓಡುತ್ತ ಹೋಗಿ ನಂತರ ಹಾರಿ ಸುರಕ್ಷಿತ ಸ್ಥಳಕ್ಕೆ ಸಾಗುವುದು. ನಾಮದ ಕೋಳಿಗಳು ಅತ್ಯುತ್ತಮ ಪರಿಸರ ಸೂಚಿ ಹಕ್ಕಿ. ಕೆರೆ ಅಥವಾ ಕೊಳಗಳಲ್ಲಿ ಅವು ಓಡಾಡುತ್ತಿದ್ದರೆ ಆ ಕೆರೆ, ಕೊಳ ಮಲಿನವಾಗದೆ ಶುದ್ಧವಾಗಿದೆ ಎಂದು ಅರ್ಥ. ಇತ್ತೀಚೆಗೆ ನಮ್ಮ ಕೆರೆಗಳಲ್ಲಿ ಕೂಟ್‌ಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಕೆರೆಯಲ್ಲಿರುವ ಮಾರ್ಜಕಗಳು, ಮಾಲಿನ್ಯ, ಜನರ ಕಿರಿಕಿರಿ ಅವು ಮರೆಯಾಗಲು ಕಾರಣ ಎನ್ನುತ್ತಾರೆ ಪಕ್ಷಿತಜ್ಞರು.

ನಾಮದ ಕೋಳಿಯ ಸಂತಾನ ವೃದ್ಧಿ ಕಾಲ ಜುಲೈಯಿಂದ ಆಗಸ್ಟ್. ಈ ಹಕ್ಕಿ ಸಾಮಾನ್ಯವಾಗಿ ನೀರಿನ ಮೇಲೆ ಬೆಳೆದ ಜೊಂಡಿನ ಮೇಲೆ ಸಸ್ಯ ವಸ್ತುಗಳನ್ನು ಬಳಸಿ ಸುಲಭವಾಗಿ ಗೋಚರಿಸದಂತೆ ಗೂಡು ನಿರ್ಮಿಸುವುದು. ಒಂದು ಸಲಕ್ಕೆ ಆರರಿಂದ ಹತ್ತು ಮೊಟ್ಟೆ ಇಡುವುದು. ಗೂಡು ರಚಿಸುವ ಸಮಯದಲ್ಲಿ ಬೇರೆ ನಾಮದ ಕೋಳಿಗಳೊಂದಿಗೆ ಜಗಳವಾಡುವುದೂ ಉಂಟು.

ಗಂಡು, ಹೆಣ್ಣು ಎರಡೂ ಸೇರಿ ಗೂಡು ರಚಿಸಿ ಮೊಟ್ಟೆಗೆ ಕಾವು ಕೊಡುವ ಮತ್ತು ಮರಿಗಳನ್ನು ಸಾಕುವ ಕಾರ್ಯ ನಿರ್ವಹಿಸುತ್ತವೆ. ಮರಿಗಳು ಸ್ವತಂತ್ರವಾಗುವವರೆಗೂ ಅವು ತಂದೆ, ತಾಯಿಯ ಆರೈಕೆಯಲ್ಲಿ ಬೆಳೆಯುತ್ತವೆ.
`ನಾಮದ ಕೋಳಿ~ಯ ವೈಜ್ಞಾನಿಕ ಹೆಸರು `ಫೂಲಿಕಾ ಆಟ್ರಾ~. `ಗ್ರುಯಿಫಾರ್ಮೀಸ್~ ಗಣದ `ರ‌್ಯಾಲಿಡೀ~ ಕುಟುಂಬಕ್ಕೆ ಸೇರಿದೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT