ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತದ ಕೃಷಿಗೆ ವಿಶೇಷ ಪ್ಯಾಕೇಜ್‌ ಇಲ್ಲ

ಯಾಂತ್ರೀಕೃತ ನಾಟಿ ಮಾಡುವ ರೈತರಿಗೆ ಕೃಷಿ ಇಲಾಖೆ ಪ್ರೋತ್ಸಾಹ
Last Updated 20 ಅಕ್ಟೋಬರ್ 2018, 20:06 IST
ಅಕ್ಷರ ಗಾತ್ರ

ಮಂಗಳೂರು: ಭತ್ತದ ಕೃಷಿಯ ಕೆಲಸಗಳನ್ನು ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ವ್ಯಾಪ್ತಿಗೆ ತರಬೇಕು ಎಂಬ ಕರಾವಳಿ ರೈತರ ಆಗ್ರಹವನ್ನು ಸರ್ಕಾರ ಪುರಸ್ಕರಿಸಿಲ್ಲ. ಇದಕ್ಕೆ ಬದಲಾಗಿ ಬದಲಾಗಿ ಕೃಷಿ ಕೂಲಿಕಾರ್ಮಿಕರ ಸಮಸ್ಯೆ ಪರಿಹರಿಸುವ ಉದ್ದೇಶದಿಂದ ನೇರ ಪ್ರೋತ್ಸಾಹ ಧನ ವಿತರಣೆ(ಡಿಬಿಟಿ)ಗೆ ಕೃಷಿ ಇಲಾಖೆ ಮುಂದಾಗಿದೆ.

ಯಾಂತ್ರೀಕೃತ ಭತ್ತದ ನಾಟಿ ಮಾಡುವ ರೈತರಿಗೆ ಹೆಕ್ಟೇರ್‌ಗೆ ₹ 3,750 ಮೊತ್ತವನ್ನು ನೇರವಾಗಿ ರೈತರ ಖಾತೆಗೆ ವರ್ಗಾಯಿಸುವ ಈ ಯೋಜನೆಯು ರಾಷ್ಟ್ರೀಯ ಆಹಾರ ಸುರಕ್ಷತಾ ಮಿಷನ್‌ನ ವ್ಯಾಪ್ತಿಗೆ ಬರುತ್ತದೆ. ಈಗಾಗಲೇ ಜಿಲ್ಲೆಯ 315 ರೈತರ‍ವಿವರಗಳನ್ನು ಕ್ರಾಪ್‌.ಇನ್‌ ಆ್ಯಪ್‌ಗೆ ಅಪ್‌ಲೋಡ್‌ ಮಾಡಲಾಗಿದೆ. ಸಣ್ಣ ರೈತರು ಮತ್ತು ಅತೀಸಣ್ಣ ರೈತರಿಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಒಟ್ಟು 245.36 ಹೆಕ್ಟೇರ್‌ ಭತ್ತದ ಕೃಷಿ ಪ್ರದೇಶಕ್ಕೆ ಈ ಪ್ರೋತ್ಸಾಹ ಧನ ದೊರೆಯಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಘಟ್ಟದ ಮೇಲೆ ಭತ್ತ ಬೆಳೆಯುವ ಜಿಲ್ಲೆಗಳಾದ ಮಂಡ್ಯ, ಕೊಪ್ಪಳ ಮತ್ತಿತರ ಪ್ರದೇಶಗಳಲ್ಲಿ ಪ್ರತಿ ಭತ್ತದ ಇಳುವರಿ ಎಕರೆಗೆ 30 ಕ್ವಿಂಟಾಲ್‌ ಇದ್ದರೆ ಕರಾವಳಿಯಲ್ಲಿ ಇಳುವರಿ 16ರಿಂದ 20 ಕ್ವಿಂಟಾಲ್‌ ಮಾತ್ರ ದೊರೆಯುತ್ತದೆ. ಬಯಲುಸೀಮೆಗೆ ಹೋಲಿಸಿದರೆ ಮಲೆನಾಡು ಪ್ರದೇಶದಲ್ಲಿಯೂ ಇಳುವರಿಯ ಪ್ರಮಾಣ ಕಡಿಮೆಯೆಂದೇ ಹೇಳಬೇಕು. ಮಣ್ಣಿನ ಗುಣಸ್ವಭಾವಗಳಿಂದಾಗಿ ಈವ್ಯತ್ಯಾಸ ಗೋಚರಿಸುತ್ತದೆ.

‘ಇತ್ತೀಚೆಗೆ ಕರಾವಳಿಯಲ್ಲಿ ತೀವ್ರ ವಲಸೆ ಮತ್ತು ಅಭಿವೃದ್ಧಿಯ ನಾಗಾಲೋಟದಿಂದಾಗಿ ಕೃಷಿ ಕೂಲಿ ಕಾರ್ಮಿಕರ ಸಮಸ್ಯೆ ತಲೆದೋರುತ್ತಿದೆ. ಈ ಎಲ್ಲ ಅಂಶಗಳನ್ನು ಗಮನಿಸಿಕೊಂಡು ಕರಾವಳಿಯ ಭತ್ತದ ಕೃಷಿಗೆ ವಿಶೇಷ ಪ್ಯಾಕೇಜ್‌ ಘೋಷಿಸಬೇಕು ಎಂದು ಇತ್ತೀಚೆಗೆ ಕೃಷಿ ಸಚಿವ ಎಚ್‌. ಮಹದೇವಪ್ಪ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಅಲ್ಲದೆ ಎಂಎನ್‌ ಆರ್‌ಇಜಿ ಯೋಜನೆ ವ್ಯಾಪ್ತಿಗೆ ತರಬೇಕು ಎಂಬ ಆಗ್ರಹವನ್ನೂ ಮಂಡಿಸಲಾಗಿತ್ತು. ಕೃಷಿ ಸಚಿವರು ನಮ್ಮ ಕೃಷಿ ಜಮೀನು ನೋಡಲು ಬಂದಾಗ ರೈತರೆಲ್ಲ ಸೇರಿ ಮನವಿ ಸಲ್ಲಿಸಿದ್ದೆವು’ ಎಂದು ಬೆಳ್ತಂಗಡಿ ಸುರ್ಯದ ಪ್ರಗತಿ ಪರ ಕೃಷಿಕ ಪ್ರಭಾಕರ ಮಯ್ಯ ಹೇಳುತ್ತಾರೆ.

ಎಂಎನ್‌ ಆರ್‌ಇಜಿ ಯೋಜನೆಯಡಿ ನಡೆಯುವ ಕೆಲಸದ ಮೂಲಕ ಶಾಶ್ವತ ಆಸ್ತಿ ನಿರ್ಮಾಣ (permanent asset) ಆಗಬೇಕು. ಭತ್ತದ ಕೃಷಿ ವಾರ್ಷಿಕ ಕೆಲಸವಾದ್ದರಿಂದ ಅದನ್ನು ಈ ಯೋಜನೆಯ ವ್ಯಾಪ್ತಿಗೆ ತರುವುದು ಸಾಧ್ಯವಾಗಿಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸ್ಮಿತಾ ಎಂ.ಸಿ. ‘ಪ್ರಜಾವಾಣಿ’ ಜೊತೆ ಮಾತನಾಡುತ್ತ ತಿಳಿಸಿದ್ದಾರೆ. ಆದರೆ ಭತ್ತದ ಕೃಷಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಅನೇಕ ಯೋಜನೆಗಳನ್ನು ಕೃಷಿ ಇಲಾಖೆ ಪ್ರಕಟಿಸಿದೆ ಎಂದು ಅವರು ಹೇಳಿದರು.

ಭತ್ತ ನಾಟಿ ಉತ್ತಮ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರ್ಷ ಭತ್ತದ ನಾಟಿ ಉತ್ತಮವಾಗಿದೆ. ಕಳೆದ ವರ್ಷಮಳೆ ಕಡಿಮೆಯಾದ್ದರಿಂದ 26,343 ಹೆಕ್ಟೇರ್‌ ವ್ಯಾಪ್ತಿಯಲ್ಲಿ ನಾಟಿಯಾಗಿದೆ. ಈ ವರ್ಷ 26,500 ಹೆಕ್ಟೇರ್‌ ವ್ಯಾಪ್ತಿಯಲ್ಲಿ ನಾಟಿ ಆಗಿದೆ ಎಂದು ಕೃಷಿಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.ಕರಾವಳಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಭತ್ತದ ಬೆಳೆಗೆ ಹೆಚ್ಚಿನ ಹಾನಿಯಾಗಿಲ್ಲ. ಆದರೆ ನೆರೆ ಪ್ರದೇಶದಲ್ಲಿ ಮರುನಾಟಿ ಮಾಡಬೇಕಾಯಿತು ಎಂದು ರೈತರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT